ಮುಸ್ಲಿಮ್ ಸೆಂಟ್ರಲ್ ಕಮಿಟಿಯ ಔಚಿತ್ಯವಿದೆಯೇ?

0
1055

ಮಹಮ್ಮದ್ ಅನ್ವರ್ ಕಲ್ಲಾಪು

ಮುಸ್ಲಿಮರ ನಾಗರಿಕ ಹಕ್ಕುಗಳ ಕುರಿತು ಸಮುದಾಯಕ್ಕೆ ಮಾಹಿತಿ ನೀಡುವ ಮತ್ತು ಅದನ್ನು ರಕ್ಷಿಸುವ ನಿಟ್ಟಿನಲ್ಲಿ ಮುಸ್ಲಿಮ್ ಸೆಂಟ್ರಲ್ ಕಮಿಟಿಯಂತಹ ಒಕ್ಕೂಟ ಸಂಘಟನೆಯ ಅಗತ್ಯವಿದೆ. ವಿಚಾರ ವೈವಿಧ್ಯತೆಯಲ್ಲಿರುವ ಸಮುದಾಯಸ್ಥರನ್ನು ಒಗ್ಗೂಡಿಸಿಕೊಂಡು ಸಮಸ್ಯೆಗಳನ್ನು ಸಮಾನ ಚಿಂತನೆ ಮತ್ತು ಕಾರ್ಯಾಚರಣೆಗಳ ಮೂಲಕ ಸಾಧ್ಯಂತ ಪರಿಹಾರವನ್ನು ಕಂಡು ಹಿಡಿಯಲು ಈ ಸಾಮಾನ್ಯ ವೇದಿಕೆಗೆ ಸಾಧ್ಯವಾಗಬೇಕು.

ಇದೀಗ 50ನೇ ವರುಷದ ಬೆಳ್ಳಿ ಹಬ್ಬವನ್ನು ಆಚರಿಸಿದ ಪ್ರಸ್ತುತ ಒಕ್ಕೂಟ ಸಂಸ್ಥೆಯ ಸಾಧನೆಗಳನ್ನು ಇತ್ತೀಚೆಗೆ ಪುರಭವನದಲ್ಲಿ ನಡೆದ ಸಮಾರಂಭದಲ್ಲಿ ಅದರ ಅಧ್ಯಕ್ಷರು ಜನರ ಮುಂದಿರಿಸಿದ್ದಾರೆ. ಕೋಮು ಗಲಭೆಗಳ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಸಂಘಟಿಸುವ ಶಾಂತಿ ಸಭೆಗಳಲ್ಲಿ ಪಾಲ್ಗೊಳ್ಳುವಿಕೆ. ಹಿಂದೂ ಸಮಾಜೋತ್ಸವದಲ್ಲಿ ಭಾಗವಹಿಸಿದವರಿಗೆ ತಂಪು ಪಾನೀಯ ವಿತರಣೆ ಮಾಡುವುದರ ಮೂಲಕ ಸಾಮಾಜಿಕ ಸಾಮರಸ್ಯ ಮತ್ತು ಶಾಂತಿ ಪಾಲನೆಗಳಿಗಾಗಿ ಪ್ರಯತ್ನಿಸಿರುವುದಾಗಿ ತಿಳಿಸಿದ್ದಾರೆ.

ವಾಸ್ತವದಲ್ಲಿ ಸಮುದಾಯದ ಒಟ್ಟು ಸಮಸ್ಯೆಗಳನ್ನು ಗುರುತಿಸಿ ಈ ಬಗ್ಗೆ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಅನಪೇಕ್ಷಣೀಯವಾಗಿ ಕವಲೊಡೆದು ಸಮಸ್ಯೆಗಳನ್ನು ಹುಟ್ಟು ಹಾಕುತ್ತಿರುವ ಉಲೆಮಾ ಸಂಘಟನೆಗಳ ಏಕೀಕರಣ. ಈ ಪಾರ್ಟಿಗಳ ಹಿಂಬಾಲಕರಾಗಿ ಹಂಚಿ ಹೋಗಿರುವ ಜಿಲ್ಲೆಯ ಶ್ರೀಮಂತರನ್ನು, ಯುವಶಕ್ತಿಯನ್ನು ಪುನರ್ ಸಂಯೋಜಿಸಿಕೊಂಡು ಸಮುದಾಯದ ಒಟ್ಟು ಹಿತಾಸಕ್ತಿಗಾಗಿ ಶ್ರಮಿಸುವ ಸಂಘಟಿತ ಶಕ್ತಿಯಾಗಿ ಬೆಳೆಸುವ ಕಾರ್ಯಕ್ರಮವನ್ನು ಸೆಂಟ್ರಲ್ ಕಮಿಟಿ ಕೈಗೆತ್ತಿಕೊಳ್ಳಬೇಕಾಗಿದೆ.
ಸಾರ್ವಜನಿಕ ವೇದಿಕೆಗಳಲ್ಲಿ ಬೃಹತ್ ವಿವಾಹ ಸಮಾರಂಭಗಳಲ್ಲಿ ಬಿನ್ನ ಹಿತಾಸಕ್ತಿಯ ಮತ ಪಂಡಿತರು ಜೊತೆಯಾಗಿ ಪೀಠ ಹಂಚಿಕೊಳ್ಳುತ್ತಿದ್ದಾರೆ. ಆದರೆ ಮಸೀದಿಗಳನ್ನು ಪಾರ್ಟಿಗಳಿಗೆ ಬದ್ದವಾಗಿ ವಿಭಜಿಸಿಕೊಂಡು ಹಬ್ಬಾಚರಣೆ, ಚಂದ್ರದರ್ಶನದಂತಹ ಪ್ರಮುಖ ಕಾರ್ಯಗಳಲ್ಲಿ ಸ್ವಹಿತಾಸಕ್ತಿಗೆ ಜೋತು ಬೀಳುತ್ತಿರುವುದು ತನ್ಮೂಲಕ ಸಮುದಾಯದ ಒಟ್ಟು ಹಿತಾಸಕ್ತಿಯನ್ನು ಕಡೆಗಣಿಸುತ್ತಿರುವುದು ಅಕ್ಷಮ್ಯ.

ಸೆಂಟ್ರಲ್ ಕಮಿಟಿಯ ಅಧ್ಯಕ್ಷರು ಹೇಳಿದಂತೆ ಅದರ 90% ಶೇಕಡಾ ಸದಸ್ಯರು ನಿರ್ಧಿಷ್ಟ ರಾಜಕೀಯ ಪಕ್ಷ ಕ್ಕೆ ಸೇರಿದವರಾಗಿದ್ದಾರೆ. ಇನ್ನುಳಿದ ರಾಜಕೀಯ ಪಕ್ಷದಲ್ಲಿರುವ ಸೆಂಟ್ರಲ್ ಕಮಿಟಿಯ ಸದಸ್ಯರು ವಿರೋಧ ಪಕ್ಷ ದವರು ಎಂದರ್ಥವಲ್ಲ. ಆದರೂ ರಾಜಕರಣಿಗಳ ಆಧಿಕ್ಯದಿಂದ ಸಮಸ್ಯೆಗಳು ಕುಂಠಿತವಾಗುತ್ತದೆ ಎಂಬುದರಲ್ಲಿ ಸತ್ಯಾಂಶವಿರುವುದಿಲ್ಲ. ಅಂದು ಬಾಬರಿ ಮಸೀದಿಯ ದ್ವಂಸದ ವಿರುದ್ದ ನಮ್ಮ ಜನಪ್ರತಿನಿಧಿಗಳು ಯಾವುದೇ ಪ್ರತಿರೋಧವನ್ನು ಪ್ರದರ್ಶಿಸುವ ಮಟ್ಟದಲ್ಲಿರಲಿಲ್ಲ. ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವ ಮಾತಂತಿರಲಿ ಕನಿಷ್ಟ ಪಕ್ಷ ಅಂದಿನ ಆಡಳಿತರೂಢ ಸರಕಾರದ ಜಾಣ ಮರವಿನ ಪ್ರಹಸನದ ಬಗ್ಗೆ ಹೇಳಿಕೆ ನೀಡುವಷ್ಟು ಧೈರ್ಯವನ್ನು ಮುಸ್ಲಿಮ್ ಜನಪ್ರತಿನಿಧಿಗಳು ಪ್ರದರ್ಶಿಸಲಿಲ್ಲ. ಜನಪ್ರತಿನಿಧಿಗಳಾಗಿ ಸೆಕ್ಯುಲರ್ ನಿಲುವನ್ನು ತಳೆಯಬೇಕಾಗಿದ್ದರೂ ಸ್ವಸಮುದಾಯದ ತೇಜೋವಧೆಯನ್ನು ಮೌನವಾಗಿ ಸ್ವಾಗತಿಸುವ ಜನಪ್ರತಿನಿಧಿಗಳಿಂದ ಪ್ರಯೋಜನವಾದರೂ ಏನು?

ಸಾಚಾರ್ ಸಮಿತಿಯ ಶಿಫಾರಸ್ಸಿನ ಮೂಲಕ ಆಮಿಷ ನೀಡಿ ಕೊನೆಗೆ ಮುಸ್ಲಿಮರ ಮುಸುಡಿಗೆ ತುಪ್ಪ ಸವರಿದ ಸರಕಾರ, ಮಾತ್ರವಲ್ಲ ಯುಎಪಿಎಯಂತಹ ಕರಾಳ ಕಾನೂನಿನ ಮೂಲಕ ಕ್ಲುಲ್ಲಕ ಆರೋಪ ಆಶಂಕೆಯಿಂದ ಮುಸ್ಲಿಮ್ ಸುಶಿಕ್ಷಿತ ಯುವಶಕ್ತಿಯನ್ನು ಕಂಬಿ ಎಣಿಸುವಂತೆ ಮಾಡಿದ ಅಂದಿನ ಸರಕಾರ ಇಂದು ಅಹಿಂದ್ದಿುಂದ ಮೃದು ಹಿಂದುತ್ವದೆಡೆಗೆ ಆಸಕ್ತಿ ಹೊಂದಿದ ಪಕ್ಷಕ್ಕೆ ಪೂರ್ಣವಾಗಿ ನಿಶ್ಯರ್ತವಾಗಿ ಅಂಟಿಕೊಳ್ಳದೆ ವಿವಿಧ ರಾಜಕೀಯ ಪಕ್ಷಗಳ ಮುಸ್ಲಿಮ್ ಪ್ರತಿನಿಧಿಗಳಿಂದ ಸಂಯೋಜಿತ ಮುಸ್ಲಿಮ್ ಓಟು ಬ್ಯಾಂಕಿನ ರೂವಾರಿಯಾಗಿ ನಿಲ್ಲಲು ಸೆಂಟ್ರಲ್ ಕಮಿಟಿಗೆ ಸಾಧ್ಯವಿದೆ.

ಸಮುದಾಯದ ಶೈಕ್ಷಣಿಕ ಜಾಗೃತಿ, ಬಡವರಿಗೆ ವಸತಿ ನಿರ್ಮಾಣ, ಆರ್ಥಿಕ ಸಹಾಯ ಇತ್ಯಾದಿ ಕಾರ್ಯಗಳನ್ನು ಕೆಲವಾರು ಮುಸ್ಲಿಮ್ ಎನ್ ಜಿ ಓ ಸಂಸ್ಥೆಗಳು ಕೈಗೆತ್ತಿಗೊಂಡಿವೆ. ಅನ್ಯಥಾ ಆಂತರಿಕ ಸಂವಹನದ ಮೂಲಕ ಸಮಸ್ಯೆಗಳನ್ನು ಕುಂಠಿತಗೊಳಿಸುವ ಸುಧಾರಣಾತ್ಮಕ ಕಾರ್ಯಗಳನ್ನು ಸೆಂಟ್ರಲ್ ಕಮಿಟಿ ಹಮ್ಮಿಕೊಳ್ಳಬೇಕಾದ ಅಗತ್ಯವಿದೆ. ಧಾರ್ಮಿಕ ಹಬ್ಬಾಚರಣೆಗಳಲ್ಲಿ ಇಸ್ಲಾಮೀ ಶಿಸ್ತು ಶಿಷ್ಟಾಚಾರಗಳ ಮೇರೆ ದಾಟಿ ಹೋಗದಂತೆ ಪ್ರಕಟಣೆ, ಪ್ರಸಾರಗಳ ಮೂಲಕ ಜಾಗೃತಿ ಮಾಡಿಸಬೇಕಾಗಿದೆ. ಕೆಲವು ಮಸೀದಿಗಳಲ್ಲಿ ರಾತ್ರಿ ಹಗಲೆನ್ನದೆ ಸರ್ವ ಕಾರ್ಯಕ್ರಮಗಳನ್ನು ಧ್ವನಿವರ್ಧಕದ ಮೂಲಕ ಜೋರಾಗಿ ಪ್ರಸಾರ ಮಾಡಿ ಶಬ್ದ ಮಾಲಿನ್ಯದ ಮೂಲಕ ಜನರ ಶಾಂತಿ ನೆಮ್ಮದಿಯನ್ನು ಕೆಡಿಸುವ ಅಶಿಷ್ಟ ಪ್ರಕ್ರಿಯೆಯನ್ನು ಸೆಂಟ್ರಲ್ ಕಮಿಟಿ ಪ್ರಭಾವ ಬೀರಿ ನಿಶಸ್ತಗೊಳಿಸಬೇಕಾಗಿದೆ. ಬಹುಧರ್ಮ ಬಹು ಸಂಸ್ಕೃತಿಯ ದೇಶ ಪರಿಸರದಲ್ಲಿ ಎಲ್ಲ ಧರ್ಮದವರ ನೆಮ್ಮದಿ ಹಿತಾಸಕ್ತಿಯನ್ನು ಪರಿಗಣಿಸಿಕೊಂಡು ಬಹುತ್ವಕ್ಕೆ ಮಹತ್ವ ಕೊಡುವ ಜಾಗೃತಿಯನ್ನು ಸೆಂಟ್ರಲ್ ಕಮಿಟಿ ಸಮಾಜದಲ್ಲಿ ಮೂಡಿಸುವ ಪ್ರಯತ್ನ ಮಾಡಬೇಕಾಗಿದೆ.