ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ಆರಾಧನಾ ಸ್ಥಳಗಳ ವಿರುದ್ಧ ದ್ವೇಷದ ವಾತಾವರಣ ಹೆಚ್ಚಳ: ಜಮಾಅತೆ ಇಸ್ಲಾಮಿ ಹಿಂದ್ ಕಳವಳ

0
285

ಸನ್ಮಾರ್ಗ ವಾರ್ತೆ

ನವದೆಹಲಿ: ದೇಶದಲ್ಲಿ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ಆರಾಧನಾ ಸ್ಥಳಗಳ ವಿರುದ್ಧ ದ್ವೇಷದ ವಾತಾವರಣ ಬೆಳೆಯುತ್ತಿರುವುದರ ಬಗ್ಗೆ ಜಮಾಅತೆ ಇಸ್ಲಾಮಿ ಹಿಂದ್(JIH) ಗಂಭೀರ ಕಳವಳ ವ್ಯಕ್ತಪಡಿಸಿದೆ.

ದೆಹಲಿಯಲ್ಲಿರುವ ತನ್ನ ಪ್ರಧಾನ ಕಛೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಷ್ಟ್ರೀಯ ಉಪಾಧ್ಯಕ್ಷ ಸಲೀಂ ಇಂಜಿನಿಯರ್, ಗುರ್ಗಾಂವ್‌ನಲ್ಲಿ ಮುಸ್ಲಿಮರ ಶುಕ್ರವಾರದ ಪ್ರಾರ್ಥನೆಗೆ ಅಡ್ಡಿಪಡಿಸಿದ ಮತ್ತು ಕರ್ನಾಟಕದಲ್ಲಿ ಚರ್ಚ್ ಮತ್ತು ಕ್ರಿಶ್ಚಿಯನ್ ಧರ್ಮ ಗುರುಗಳ ಮೇಲೆ ದಾಳಿ ಮಾಡಿದ ಹಿಂದುತ್ವದ ಗುಂಪುಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು.

ಹರ್ಯಾಣದ ಗುರ್‌ಗಾಂವ್‌ನಲ್ಲಿ ಶುಕ್ರವಾರದ ಪ್ರಾರ್ಥನೆಯನ್ನು ವಿರೋಧಿಸಲು ಕೆಲವು ಸಂಘಟಿತ ಗುಂಪುಗಳು ಇತ್ತೀಚೆಗೆ ನಡೆಸಿದ ಪ್ರಯತ್ನಗಳ ಬಗ್ಗೆ ನಮಗೆ ತೀವ್ರ ಕಳವಳವಿದೆ. ಅಲ್ಪಸಂಖ್ಯಾತರ ಆರಾಧನಾ ಸ್ಥಳಗಳನ್ನು ಗುರಿಯಾಗಿಸಿಕೊಂಡು ಜನರನ್ನು ಧಾರ್ಮಿಕತೆಯ ಆಧಾರದ ಮೇಲೆ ವಿಭಜಿಸಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಂದ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ ಎಂದು ಸಲೀಂ ಇಂಜಿನಿಯರ್ ಆರೋಪಿಸಿದ್ದಾರೆ.

ಗುರ್ಗಾಂವ್‌ನಲ್ಲಿ ಮಸೀದಿಗಾಗಿ ಸರ್ಕಾರವು ಭೂಮಿಯನ್ನು ಮಂಜೂರು ಮಾಡದ ಕಾರಣ ಮುಸ್ಲಿಮರು ತೆರೆದ ಸಾರ್ವಜನಿಕ ಉದ್ಯಾನವನಗಳು ಮತ್ತು ಸರ್ಕಾರಿ ಜಮೀನುಗಳಲ್ಲಿ ಪ್ರಾರ್ಥನೆ ಸಲ್ಲಿಸಬೇಕಾದ ಪರಿಸ್ಥಿತಿ ತಲೆದೋರಿದೆ. 1947 ರಿಂದ 19 ದೊಡ್ಡ ಮತ್ತು ಚಿಕ್ಕ ಮಸೀದಿಗಳು ಇತರರ ಅಕ್ರಮ ಸ್ವಾಧೀನದಲ್ಲಿವೆ. ಅವುಗಳನ್ನು ತೆರವುಗೊಳಿಸಲು ಹರಿಯಾಣ ವಕ್ಫ್ ಮಂಡಳಿಯ ಎಲ್ಲಾ ಪ್ರಯತ್ನಗಳು ಇಲ್ಲಿಯವರೆಗೆ ವಿಫಲವಾಗಿವೆ. ಮಸೀದಿಗಳನ್ನು ಮುಸ್ಲಿಮರಿಗೆ ಮರು ಸ್ಥಾಪಿಸಿ ನೀಡಲು ಪೊಲೀಸರು ಮತ್ತು ಆಡಳಿತ ಮಂಡಳಿಯು ಆಸಕ್ತಿ ಹೊಂದಿಲ್ಲ ಎಂದು ಸ್ಥಳೀಯ ಮುಸ್ಲಿಮರು ಭಾವಿಸುತ್ತಾರೆ ಎಂದು ಹೇಳಿದ್ದಾರೆ.

ಕಳೆದ ವಾರ, ಜಮಾಅತೆ ಇಸ್ಲಾಮಿ ಹಿಂದ್‌ನ ನಿಯೋಗವು ಗುರ್ಗಾಂವ್‌ಗೆ ಭೇಟಿ ನೀಡಿತಲ್ಲದೇ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ತಲುಪಲು ನಮಾಜ್‌ಗೆ ವಿರುದ್ಧವಾಗಿರುವ ಜನರನ್ನು ಭೇಟಿ ಮಾಡಿತು. ಶುಕ್ರವಾರದ ಪ್ರಾರ್ಥನೆಗಾಗಿ ಮುಸ್ಲಿಮರಿಗೆ ತಮ್ಮ ಆವರಣ ಮತ್ತು ಪೂಜಾ ಸ್ಥಳಗಳನ್ನು ಅರ್ಪಿಸಿದ ಸಿಖ್ ನಾಯಕರು ಮತ್ತು ಕೆಲವು ಹಿಂದೂ ಪುರುಷರನ್ನೂ ಭೇಟಿ ಮಾಡಿರುವುದಾಗಿ ಅವರು ಹೇಳಿದರು.

“ಕೆಲವು ದಿನಗಳ ಹಿಂದೆ ಕರ್ನಾಟಕದ ಹಾಸನ ಜಿಲ್ಲೆಯ ಬೇಲೂರಿನಲ್ಲಿ ಚರ್ಚ್ ಮೇಲೆ ದಾಳಿ ನಡೆದಿತ್ತು. ಜನರ ಗಮನವನ್ನು (ವಿಶೇಷವಾಗಿ ಚುನಾವಣೆಗಳು ಇದ್ದಾಗ) ನೈಜ ಸಮಸ್ಯೆಗಳಿಂದ ಬೇರೆಡೆಗೆ ತಿರುಗಿಸಲು ಈ ದ್ವೇಷದ ರಾಜಕೀಯವನ್ನು ಅಭ್ಯಾಸ ಮಾಡಲಾಗುತ್ತಿದೆ, ಇದರಿಂದಾಗಿ ಸರ್ಕಾರ ಮತ್ತು ಆಡಳಿತ ಸ್ಥಾಪನೆಯ ಕಾರ್ಯ ಕ್ಷಮತೆಯು ಅಭಿವೃದ್ಧಿಯಿಂದ ಇತರ ಭಾವನಾತ್ಮಕ ವಿಷಯಗಳಿಗೆ ಬದಲಾಗುತ್ತದೆ ”ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಮುಖಂಡರಾದ ಮುಜ್ತಬಾ ಫಾರೂಕ್ ಉಪಸ್ಥಿತರಿದ್ದರು.