ಉ.ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಮೂವರು ನಾಯಕರ ನಿವಾಸಗಳಿಗೆ ಐಟಿ ದಾಳಿ; ರಾಜಕೀಯ ಪ್ರೇರಿತ ಎಂದ ನಾಯಕರು

0
430

ಸನ್ಮಾರ್ಗ ವಾರ್ತೆ

ಲಕ್ನೊ: ಉತ್ತರ ಪ್ರದೇಶದಲ್ಲಿ 2022ರ ವಿಧಾನಸಭಾ ಚುನಾವಣೆಗೂ ಮುನ್ನ ಸಮಾಜವಾದಿ ಪಕ್ಷದ ಮೂವರು ಹಿರಿಯ ನಾಯಕರ ನಿವಾಸಗಳಲ್ಲಿ ಆದಾಯ ತೆರಿಗೆ ದಾಳಿ ನಡೆಸಿದೆ. ಮಾವೂವಿನಲ್ಲಿರುವ ಎಸ್‌ಪಿ ರಾಷ್ಟ್ರೀಯ ಕಾರ್ಯದರ್ಶಿ ರಾಜೀವ್ ರೈ, ಲಕ್ನೋದಲ್ಲಿ ಜೈನೇಂದ್ರ ಯಾದವ್ ಮತ್ತು ಮೈನ್‌ಪುರಿಯಲ್ಲಿರುವ ಮನೋಜ್ ಯಾದವ್ ಅವರ ಮನೆಗಳ ಮೇಲೆ ದಾಳಿ ನಡೆಯುತ್ತಿದೆ. ಈ ಮೂವರೂ ನಾಯಕರು ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್‌ರವರ ಆಪ್ತರು ಎಂಬುದಾಗಿ ವರದಿಯಾಗಿದೆ.

ಶನಿವಾರ ಬೆಳಗ್ಗೆ 7 ಗಂಟೆಯ ಸುಮಾರಿಗೆ ರಾಜೀವ್ ರೈ ಅವರ ಮಾವೂವಿಲ್ಲಿರುವ ಶಹದತ್‌ಪುರ ನಿವಾಸದ ಮೇಲೆ ದಾಳಿ ನಡೆದಿದೆ ಎಂಬ ಸುದ್ದಿ ಮೊದಲು ಬಂದಿತ್ತು. 2014ರ ಲೋಕಸಭೆ ಚುನಾವಣೆಗೆ ರೈ ಸ್ಪರ್ಧಿಸಿದ್ದರು. ರೈ, ದುಬೈ ಮತ್ತು ಬೆಂಗಳೂರಿನಲ್ಲಿ ವೈದ್ಯಕೀಯ ಕಾಲೇಜುಗಳನ್ನು ಹೊಂದಿದ್ದಾರೆ. ಆದಾಯ ತೆರಿಗೆ ಇಲಾಖೆ ದಾಳಿ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಅವರ ಮನೆಗೆ ಆಗಮಿಸಿದ್ದು, ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

“ಇದು ಐಟಿ ಇಲಾಖೆ. ನನಗೆ ಯಾವುದೇ ಕ್ರಿಮಿನಲ್ ಹಿನ್ನೆಲೆಯಿಲ ಅಥವಾ ಕಪ್ಪು ಹಣವಿಲ್ಲ. ನಾನು ಜನರಿಗೆ ಸಹಾಯ ಮಾಡುತ್ತೇನೆ ಆದರೆ ಇದು ಸರ್ಕಾರಕ್ಕೆ ಇಷ್ಟವಾಗಲಿಲ್ಲ. ಈ ದಾಳಿಯು ಅದರ ಪರಿಣಾಮವಾಗಿದೆ. ನೀವು ಏನಾದರೂ ಮಾತನಾಡಿದರೆ ಅವರು ವೀಡಿಯೊ ಮಾಡುತ್ತಾರೆ, ಎಫ್ಐಆರ್ ದಾಖಲಿಸುತ್ತಾರೆ. ನೀವು ಅನಾವಶ್ಯಕವಾಗಿ ಪ್ರಕರಣದ ವಿರುದ್ಧ ಹೋರಾಡುತ್ತೀರಿ. ಇವರು ಯಾವುದೇ ಕ್ರಮಬದ್ಧವಾದ ಕಾರ್ಯವಿಧಾನವನ್ನು ಪೂರ್ಣಗೊಳಿಸುವುದಿಲ್ಲ” ಎಂದು ರೈ ಎಎನ್‌ಐಗೆ ತಿಳಿಸಿದರು.

ಈ ದಾಳಿಯನ್ನು ರಾಜಕೀಯ ಪ್ರೇರಿತ ಎಂದು ನಾಯಕರು ಆರೋಪಿಸಿದ್ದಾರೆ.