20 ನಿಮಿಷ ಫ್ಲೈ ಓವರ್ ನಲ್ಲಿ ಸಿಲುಕಿಸಿ ಪ್ರಧಾನಿ ಮೋದಿಯನ್ನು ವಾಪಾಸು ಕಳಿಸಿದ ಪಂಜಾಬ್ ನ ರೈತರು: ಇದು ಭದ್ರತಾ ಲೋಪವೆಂದ ಗೃಹ ಸಚಿವಾಲಯ

0
382

ಸನ್ಮಾರ್ಗ ವಾರ್ತೆ

ಚಂಡೀಗಡ: ಪ್ರವಾಸದ ಹಿನ್ನೆಲೆಯಲ್ಲಿ ಇಂದು ಪಂಜಾಬ್ ಗೆ ಆಗಮಿಸಿದ್ದ ಪ್ರಧಾನಿ ಮೋದಿ ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ 20 ನಿಮಿಷ ಫ್ಲೈ ಓವರ್ ನಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ. ಭದ್ರತಾ ಲೋಪಗಳ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಂಜಾಬ್‌ನ ಫಿರೋಜ್‌ಪುರದಲ್ಲಿ ಆಯೋಜಿಸಲಾಗಿದ್ದ ರ‌್ಯಾಲಿ ರದ್ದು ಮಾಡಿದ್ದಾರೆ ಎಂದು ಗೃಹ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಭೇಟಿಯ ವೇಳೆ ಪಂಜಾಬಿನಲ್ಲಿ ಸುರಕ್ಷಾ ಲೋಪ ಆಗಿದೆ ಎಂದು ಕೇಂದ್ರ ಸರಕಾರ ಹೇಳಿದೆ. ಪ್ರತಿಭಟನೆಯಿಂದಾಗಿ 20 ನಿಮಿಷಗಳ ಕಾಲ ಫ್ಲೈ ಓವರ್ ನಲ್ಲಿ ಪ್ರಧಾನಿ ಕಾಯಬೇಕಾದ ಪರಿಸ್ಥಿತಿ ಉಂಟಾದದ್ದು ಗಂಭೀರವಾಗಿದೆ. ಇದು ದೊಡ್ಡ ಸುರಕ್ಷಾ ಲೋಪವಾಗಿದೆ ಎಂದು ಸರಕಾರ ಹೇಳಿದೆ. ಪಂಜಾಬ್ ಪ್ರವಾಸವನ್ನು ರದ್ದುಪಡಿಸಿ ಪ್ರಧಾನಿ ದಿಲ್ಲಿಗೆ ಮರಳಿದರೆಂದು ಗೃಹ ಸಚಿವಾಲಯ ತಿಳಿಸಿತು.

ಪಂಜಾಬ್‍ನಲ್ಲಿ ಸುರಕ್ಷಾ ಲೋಪದ ಕುರಿತು ಗೃಹ ಸಚಿವಾಲಯ ರಾಜ್ಯಸರಕಾರದಿಂದ ವಿವರಣೆ ಕೇಳಿದೆ. ಮೋದಿಯ ಕಾರ್ಯಕ್ರಮವನ್ನು ಮೊದಲೇ ರಾಜ್ಯ ಸರಕಾರಕ್ಕೆ ತಿಳಿಸಲಾಗಿತ್ತು. ಅದಕ್ಕಾಗಿ ವ್ಯವಸ್ಥೆಯನ್ನು ಮಾಡುವುದು ಪಂಜಾಬಿನ ಹೊಣೆ. ಆದರೆ ಪಂಜಾಬ್ ಸರಕಾರ ವಿಫಲವಾಗಿದೆ ಎಂದು ಗೃಹ ಸಚಿವಾಲಯ ಆರೋಪಿಸಿದೆ.

ಹವಮಾನ ಕೆಟ್ಟದ್ದರಿಂದ ರಾಷ್ಟ್ರೀಯ ಹುತಾತ್ಮ ಮೆಮೋರಿಯಲ್‍ಗೆ ರಸ್ತೆಯ ಮೂಲಕ ಹೋಗಲು ಪ್ರಧಾನಿ ತೀರ್ಮಾನಿಸಿದ್ದರು. ಪಂಜಾಬ್ ಡಿಜಿಪಿಗೆ ತಿಳಿಸಲಾಗಿತ್ತು. ಆದರೆ ಮೆಮೋರಿಯಲ್ ತಲುಪುವ ಅರ್ಧಗಂಟೆ ಮುಂಚಿತವಾಗಿ ಫ್ಲೈ ಓವರ್ ನಲ್ಲಿ ಪ್ರಧಾನಿ ಸಿಕ್ಕಿಬಿದ್ದರು ಎಂದು ಗೃಹಸಚಿವಾಲಯ ತಿಳಿಸಿತು.

ಎರಡು ವರ್ಷಗಳ ಅಂತರದ ನಂತರ ಪ್ರಧಾನಿಯವರ ಪಂಜಾಬ್ ಭೇಟಿ ನಿಗದಿಯಾಗಿದ್ದು, ಕೃಷಿ ಕಾನೂನುಗಳನ್ನು ರದ್ದುಪಡಿಸಿದ ನಂತರ ಇದು ಮೊದಲನೆಯ ಭೇಟಿಯಾಗಿತ್ತು. ರ‌್ಯಾಲಿಗೆ ಗಂಟೆಗಳ ಮೊದಲು, ಫಿರೋಜ್‌ಪುರದ ಸ್ಥಳಕ್ಕೆ ಹೋಗುವ ಮೂರು ಮಾರ್ಗಗಳನ್ನು ಕಿಸಾನ್ ಮಜ್ದೂರ್ ಸಂಗ್ರಹ್ ಸಮಿತಿ (KMSC) ಸದಸ್ಯರು ನಿರ್ಬಂಧಿಸಿದರು. ಆದರೆ, ರೈತರು ತಮ್ಮ ಬೇಡಿಕೆಗಳ ಕುರಿತು ಜನವರಿ 15 ರಂದು ಪ್ರಧಾನಿಯೊಂದಿಗೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಕೊನೆಗೊಳಿಸಲಾಯಿತು.