ಸನ್ಮಾರ್ಗ ವಾರ್ತೆ
ಚಂಡೀಗಢ: ಭದ್ರತಾ ಲೋಪಗಳ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಂಜಾಬ್‌ನ ಫಿರೋಜ್‌ಪುರದಲ್ಲಿ ಆಯೋಜಿಸಲಾಗಿದ್ದ ರ‌್ಯಾಲಿ ರದ್ದು ಮಾಡಿದ್ದಾರೆ ಎಂದು ಗೃಹ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದ ಬೆನ್ನಿಗೆ ಪ್ರತಿಕ್ರಿಯಿಸಿರುವ ಪಂಜಾಬ್ ಸಿಎಂ ಚರಣ್ಜಿತ್ ಚನ್ನಿ, “ಯಾವುದೇ ಭದ್ರತಾ ಲೋಪವಾಗಿಲ್ಲ. ಪ್ರಧಾನ ಮಂತ್ರಿಯವರು ಹೆಲಿಕಾಪ್ಟರ್‌ನಲ್ಲಿ ಹೋಗಬೇಕಿತ್ತು. ರಸ್ತೆಯಲ್ಲಿ ಸಂಚರಿಸುವ ಯೋಜನೆಯನ್ನು ಕೊನೆಯ ಕ್ಷಣದಲ್ಲಿ ಮಾಡಲಾಯಿತು. ಅವರ ರ‌್ಯಾಲಿಗಾಗಿ ಭದ್ರತಾ ವ್ಯವಸ್ಥೆಗಳನ್ನು ನೋಡಿಕೊಳ್ಳಲು ನಾನು ತಡರಾತ್ರಿವರೆಗೆ ಇದ್ದೆ. ರ‌್ಯಾಲಿಗಾಗಿ 70,000 ಕುರ್ಚಿಗಳನ್ನು ಹಾಕಲಾಗಿತ್ತು. ಆದರೆ 700 ಜನರು ಮಾತ್ರ ಬಂದರು ಎಂದು ಹೇಳಿದ್ದಾರೆ.
ಫೋನ್ ಕರೆ ಸ್ವೀಕರಿಸಲು ನಿರಾಕರಿಸಿದ ಪಂಜಾಬ್ ಸಿಎಂ ಚನ್ನಿ: ಜೆಪಿ ನಡ್ಡಾ ಆರೋಪ
ರ‌್ಯಾಲಿಗೆ ಜನರು ಬರದಂತೆ ತಡೆಯುವಂತೆ ರಾಜ್ಯ ಪೊಲೀಸರಿಗೆ ಸೂಚನೆ ನೀಡಲಾಗಿತ್ತು. ಪೋಲೀಸರು ಮತ್ತು ಪ್ರತಿಭಟನಾಕಾರರೊಂದಿಗೆ ವಾಗ್ವಾದ ನಡೆದಿದ್ದರಿಂದ ಹೆಚ್ಚಿನ ಸಂಖ್ಯೆಯ ಬಸ್‌ಗಳು ಸಿಕ್ಕಿಹಾಕಿಕೊಂಡವು. ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುವಂತೆ ಸಮಸ್ಯೆಯ ಬಗ್ಗೆ ಹೇಳಲು ಅಥವಾ ಪರಿಹರಿಸಲು ಸಿಎಂ ಚನ್ನಿ ಫೋನ್ ಕರೆ ಮಾಡಿದಾಗ ಅವರು ಸ್ವೀಕರಿಸಲು ನಿರಾಕರಿಸಿದರು ಎಂದು ಆರೋಪಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಪಂಜಾಬ್‌ನಲ್ಲಿ ರಾಜ್ಯ ಸರ್ಕಾರ ಬಳಸಿದ ತಂತ್ರಗಳು ಪ್ರಜಾಸತ್ತಾತ್ಮಕ ತತ್ವಗಳನ್ನು ನಂಬುವ ಯಾರಿಗಾದರೂ ನೋವುಂಟು ಮಾಡುತ್ತವೆ ಎಂದು ಹೇಳಿದ್ದಾರೆ.
ಪಂಜಾಬ್‌ಗಾಗಿ ಸಾವಿರಾರು ಕೋಟಿಗಳ ಅಭಿವೃದ್ಧಿ ಯೋಜನೆಗಳನ್ನು ಪ್ರಾರಂಭಿಸಲು ಪ್ರಧಾನಿ ಭೇಟಿಗೆ ಅಡ್ಡಿಪಡಿಸಿರುವುದು ದುಃಖಕರವಾಗಿದೆ. ಆದರೆ ಇಂತಹ ಕೀಳು ಮನಸ್ಥಿತಿ ಪಂಜಾಬ್‌ನ ಪ್ರಗತಿಗೆ ಅಡ್ಡಿಯಾಗಲು ನಾವು ಬಿಡುವುದಿಲ್ಲ ಮತ್ತು ಪಂಜಾಬ್‌ನ ಅಭಿವೃದ್ಧಿಯ ಪ್ರಯತ್ನವನ್ನು ಮುಂದುವರಿಸುತ್ತೇವೆ ಎಂದದು ನಡ್ಡಾ ಟ್ವೀಟ್ ಮಾಡಿದ್ದಾರೆ.












