ಭಾರತ- ಪಾಕ್ ವಿಭಜನೆ: 74 ವರ್ಷಗಳ ಬಳಿಕ ವಯೋವೃದ್ಧ ಸಹೋದರರ ಮಿಲನಕ್ಕೆ ಸಾಕ್ಷಿಯಾದ ಕರ್ತಾರ್‌ಪುರ ಕಾರಿಡಾರ್- ವಿಡಿಯೋ

0
351

ಸನ್ಮಾರ್ಗ ವಾರ್ತೆ

74 ವರ್ಷಗಳ ಹಿಂದೆ ಭಾರತ-ಪಾಕಿಸ್ತಾನ ವಿಭಜನೆಯ ಸಮಯದಲ್ಲಿ ಬೇರ್ಪಟ್ಟ ಇಬ್ಬರು ಸಹೋದರರು ಬುಧವಾರ ಭೇಟಿಯಾದ ಅವಿಸ್ಮರಣೀಯ ಘಟನೆ ನಡೆದಿದೆ. ಇಬ್ಬರೂ ಪರಸ್ಪರ ಅಪ್ಪಿಹಿಡಿದು ಕಣ್ಣೀರಿಟ್ಟರು. ಇದನ್ನು ಕಂಡ ನೆರೆದಿದ್ದ ಜನರ ಕಣ್ಣುಗಳು ಸಹ ತೇವಗೊಂಡವು. ಪಾಕಿಸ್ತಾನದ ಫೈಸಲಾಬಾದ್‌ನಲ್ಲಿ ವಾಸಿಸುತ್ತಿರುವ ಮುಹಮ್ಮದ್ ಸಾದಿಕ್ ಮತ್ತು ಭಾರತೀಯ ನಿವಾದಿ ಮುಹಮ್ಮದ್ ಹಬೀಬ್ ಆಕಾ ಅಲಿಯಾಸ್ ಶೈಲಾರವರು ಪಾಕಿಸ್ತಾನದ ಶ್ರೀ ಕರ್ತಾರ್‌ಪುರ ಸಾಹಿಬ್‌ನಲ್ಲಿ ಭೇಟಿಯಾದರು.

ಮೊದಲು ಸೋಶಿಯಲ್ ಮೀಡಿಯಾ ಈ ಸೋದರರಿಬ್ಬರ ಮಿಲನದ ಮಾಧ್ಯಮವಾಯಿತು. ಇಬ್ಬರೂ ಮೊದಲು ವರ್ಚುವಲ್ ಪ್ಲಾಟ್‌ಫಾರ್ಮ್‌ನಲ್ಲಿ ಭೇಟಿಯಾದರು. ನಂತರ ಕರ್ತಾರ್‌ಪುರದಲ್ಲಿ ಮುಖಾಮುಖಿಯಾದರು. ಹಬೀಬ್ ತನ್ನ ಪಾಕಿಸ್ತಾನಿ ಸಹೋದರ ಸಾದಿಕ್‌ಗೆ ಸಮಾಧಾನ ಹೇಳುತ್ತಾ” ಸಾಕು ಅಳುವುದನ್ನು ನಿಲ್ಲಿಸು ದೇವರ ದಯೆಯಿಂದ ನಾವು ಪರಸ್ಪರ ಭೇಟಿಯಾದೇವಲ್ಲ ಅಷ್ಟು ಸಾಕು” ಎಂದರು. ಈ ಸಂದರ್ಭದಲ್ಲಿ ಹಬೀಬ್ ತನ್ನ ಇಡೀ ಜೀವನವನ್ನು ತನ್ನ ತಾಯಿಯ ಸೇವೆಯಲ್ಲಿ ಮುಡಿಪಾಗಿಟ್ಟಿರುವುದಾಗಿ ಸಹೋದರನಿಗೆ ತಿಳಿಸಿದರು. ತಾಯಿಯ ಪೋಷಣೆಯಿಂದಾಗಿ ಅವರಿಗೆ ಮದುವೆಯಾಗಲು ಆಗಲಿಲ್ಲ.

ಅಂದಹಾಗೆ, ಕಾರಿಡಾರ್‌ಗೆ ಕಾಲಿಟ್ಟ ಕೂಡಲೇ ಭಾರತೀಯರು ಯಾವುದೇ ಪಾಕಿಸ್ತಾನಿಯೊಂದಿಗೆ ಮಾತನಾಡುವಂತಿಲ್ಲ ಅಥವಾ ನಂಬರ್ ವಿನಿಮಯ ಮಾಡಿಕೊಳ್ಳುವಂತಿಲ್ಲ ಎಂದು ಮೊದಲ ಸೂಚನೆ ನೀಡಲಾಗುತ್ತದೆ. ಕಾರಿಡಾರ್‌ನಲ್ಲಿ ಒಬ್ಬ ಭಾರತೀಯ ಪಾಕಿಸ್ತಾನದೊಂದಿಗೆ ಮಾತನಾಡುತ್ತಿರುವುದು ಕಂಡು ಬಂದರೂ, ಪಾಕ್ ರೇಂಜರ್‌ಗಳು ಅಡ್ಡಿಪಡಿಸುತ್ತಾರೆ. ಆದರೆ, ಈ ದೃಶ್ಯದ ನಂತರ, ಪಾಕ್ ರೇಂಜರ್‌ಗಳ ಹೃದಯವೂ ಕರಗಿತು‌. ಸಂಜೆ 4 ಗಂಟೆಯಾದರೂ ಈ ಇಬ್ಬರು ಸಹೋದರರನ್ನು ಬೇರ್ಪಡಿಸಲು ಯಾರೂ ಧೈರ್ಯ ಮಾಡಲಿಲ್ಲ.

ಕರ್ತಾರ್‌ಪುರ ಕಾರಿಡಾರ್ ಪ್ರಾಜೆಕ್ಟ್‌ನ ಸಿಇಒ ಮುಹಮ್ಮದ್ ಲತೀಫ್, ಇಬ್ಬರು ಸಹೋದರರು ಒಬ್ಬರನ್ನೊಬ್ಬರು ತಬ್ಬಿಕೊಂಡಾಗ ಇಬ್ಬರೂ ಜೋರಾಗಿ ಅಳುವ ಶಬ್ದ ಕೇಳಿಸಿತು. ಈ ದೃಶ್ಯವು ಹೃದಯ ವಿದ್ರಾವಕವಾಗಿತ್ತು. ಶ್ರೀ ಕರ್ತಾರ್‌ಪುರ ಸಾಹಿಬ್‌ಗೆ ಒಂದು ದಿನದಲ್ಲಿ ಸುಮಾರು 5000 ಭಾರತೀಯರನ್ನು ಕರೆತರುವ ಅವಕಾಶವಿದೆ, ಆದರೆ ಪ್ರಸ್ತುತ ಈ ಸಂಖ್ಯೆ 200ಕ್ಕಿಂತ ಕಡಿಮೆಯಿದೆ ಎಂದರು.

ಇದಕ್ಕೂ ಮುನ್ನ ಅಜ್ಜೋವಲ್ ಹೊಸಿಯಾಪುರದ ಸುನಿತಾ ದೇವಿ ಅವರು ತಮ್ಮ ಕುಟುಂಬದೊಂದಿಗೆ ಕರ್ತಾರ್‌ಪುರಕ್ಕೆ ತೆರಳಿ ತಮ್ಮ ಪಾಕಿಸ್ತಾನಿ ಸಂಬಂಧಿಕರನ್ನು ಭೇಟಿಯಾಗಿದ್ದರು. ವಿಭಜನೆಯ ಸಮಯದಲ್ಲಿ, ಸುನೀತಾ ಅವರ ತಂದೆ ಭಾರತದಲ್ಲಿಯೇ ಇದ್ದರು ಮತ್ತು ಕುಟುಂಬದ ಉಳಿದ ಸದಸ್ಯರು ಪಾಕಿಸ್ತಾನಕ್ಕೆ ಹೋಗಿದ್ದರು. ಅದೇ ರೀತಿ ಅಮೃತಸರದ ಜತೀಂದರ್ ಸಿಂಗ್ ಮತ್ತು ಹರಿಯಾಣದ ಮಂಜಿತ್ ಕೌರ್ ತಮ್ಮ ಆನ್‌ಲೈನ್ ಸ್ನೇಹಿತರನ್ನು ಭೇಟಿ ಮಾಡಲು ಶ್ರೀ ಕರ್ತಾರ್‌ಪುರ ಸಾಹಿಬ್ ತಲುಪಿದ್ದರು. ಆದರೆ, ಅವರಿಬ್ಬರನ್ನೂ ಪಾಕಿಸ್ತಾನ ರೇಂಜರ್ಸ್ ವಾಪಸ್ ಕಳುಹಿಸಿದ್ದರು.

ಕೃಪೆ: ದೈನಿಕ್ ಭಾಸ್ಕರ