ಸನ್ಮಾರ್ಗ ವಾರ್ತೆ
ಮುಂಬೈ: ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣಾ ಕೋರ್ಟಿನಲ್ಲಿ ಮತ್ತೊಬ್ಬ ಸಾಕ್ಷಿ ಸಾಕ್ಷ್ಯ ಬದಲಾಯಿಸಿದ್ದಾನೆ. 226 ಸಾಕ್ಷಿಗಳಲ್ಲಿ ಸಾಕ್ಷ್ಯ ಬದಲಾಯಿಸಿದವರ ಸಂಖ್ಯೆ 17ಕ್ಕೇರಿತು. ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಸಹಿತ ಸನ್ಯಾಸಿಗಳು ಮತ್ತು ಸೈನಿಕರೂ ಇದರಲ್ಲಿ ಆರೋಪಿಗಳಾಗಿದ್ದಾರೆ.
2008ರಲ್ಲಿ ಕಾನೂನು ವಿರುದ್ಧವಾಗಿ ತನ್ನನ್ನು ಕಸ್ಟಡಿಗೆ ಪಡೆದ ಎಟಿಎಸ್ ಹಿಂಸೆ ನೀಡಿ ಬಲವಂತದಿಂದ ಸಾಕ್ಷ್ಯ ಪಡೆದುಕೊಂಡಿತು. ಆರೆಸ್ಸೆಸ್ ನಾಯಕರ ಹೆಸರು ಹೇಳಿಸಿತ್ತು ಎಂದು ಈತ ಹೇಳಿದ್ದಾನೆ. ಆದರೆ ಈತ ಎಟಿಎಸ್ಗೆ ನೀಡಿದ ಸಾಕ್ಷಿಯಲ್ಲಿ ಆರೆಸ್ಸೆಸ್ ನಾಯಕರ ಹೆಸರೇ ಇಲ್ಲ. ನಿರಂತರ ಸಾಕ್ಷಿ ನಿಷ್ಠಾಂತರ ನಡೆಯುವುದನ್ನು ಪರಿಗಣಿಸಿ ಮಹಾರಾಷ್ಟ್ರ ಸರಕಾರ ಅಂದಿನ ಎಟಿಎಸ್ ಅಧಿಕಾರಿಗಳನ್ನು ಕೋರ್ಟಿಗೆ ಕಳುಹಿಸಬಹುದೆಂದು ಸೂಚಿಸಿದೆ.
2011ರಲ್ಲಿ ಎಟಿಎಸ್ ತನಿಖೆ ಮಾಡಿದ ಮಾಲೆಗಾಂವ್ ಸ್ಫೋಟ ಈಗ ಎನ್ಐಎ ಕೈಯಲ್ಲಿದೆ. ಎನ್ಐಎ ಕೇಸು ಕೈಗೆತ್ತಿಕೊಂಡ ನಂತರ ಎಟಿಎಸ್ ಹೇರಿದ್ದ ಮೊಕೊಕ ಕಾನೂನು ಹಿಂಪಡೆಯಲಾಗಿತ್ತು. ಪ್ರಕರಣದಲ್ಲಿ ಎಟಿಎಸ್ ಸಲ್ಲಿಸಿದ ದಾಖಲೆ ಕಾಣೆಯಾಗಿತ್ತು. ಎನ್ಐಎ ವಹಿಸಿಕೊಂಡ ಬಳಿಕ ಸಾಕ್ಷಿಗಳ ನಿಷ್ಠಾಂತರ ಹೆಚ್ಚುತ್ತಿದೆ. ಕೇಸು ತನಿಖೆ ಮಾಡಿದ್ದ ಎಟಿಎಸ್ ಅಧಿಕಾರಿಗಳಲ್ಲಿ ಕೆಲವರು ಕೋರ್ಟಿಗೆ ಬಂದರೂ ಆರೋಪಿಯ ಕಡೆಯ ವಕೀಲರ ವಿರೋಧದಿಂದ ಮರಳಿ ಹೋಗಬೇಕಾಯಿತು.












