ಲೇಖನ : ಪುನೀತ್ ಅಪ್ಪು
ಆಕೆಯ ಹೆಸರು ಜೆಸಿಂಡಾ ಕೇಟ್ ಲಾರೆಲ್ ಆರ್ಡೆರ್ನ್. ನ್ಯೂಝಿಲ್ಯಾಂಡ್ ಎಂಬ ಪುಟ್ಟ ದೇಶದ ಮೌಂಟ್ ಆಲ್ಬರ್ಟ್ ಕ್ಷೇತ್ರವನ್ನು ಪಾರ್ಲಿಮೆಂಟಿನಲ್ಲಿ ಪ್ರತಿನಿಧಿಸುತ್ತಿರುವ ಎಂ.ಪಿ. ಆಕೆಯ ಪಕ್ಷ ಲೇಬರ್ ಪಾರ್ಟಿ ಆಫ್ ನ್ಯೂಝೀಲ್ಯಾಂಡ್. ಮೌಂಟ್ ಆಲ್ಬರ್ಟ್ ಎಂಬ ಹೆಸರು ಕೇಳಿದಾಗ ಮೌಂಟ್ ಎವರೆಸ್ಟಿನ ನೆನಪಾಗಬಹುದು. ಹೌದು, ಜಗತ್ತಿನ ಅತೀ ಎತ್ತರದ ಹಿಮಶಿಖರವನ್ನು ಏರಿದವರಲ್ಲಿ ಒಬ್ಬರಾದ ಸರ್ ಎಡ್ಮಂಡ್ ಹಿಲೆರಿಯವರು ಕೂಡಾ ನ್ಯೂಝೀಲ್ಯಾಂಡಿನವರು. ಆ ವಿಷಯ ಇಲ್ಲಿ ಯಾಕೆ ಎಂದಿರಾ? ಹಿಮಾಲಯವನ್ನು ಏರಿ ಧ್ವಜ ಹಾರಿಸಿದ ಸಾಹಸದಷ್ಟೇ ಇವರ ಹೃದಯವಂತಿಕೆಗೂ ಒಂದು ಇತಿಹಾಸವಿದೆ. ಜೆಸಿಂಡಾ ನ್ಯೂಝೀಲ್ಯಾಂಡಿನ 40ನೇ ಪ್ರಧಾನಮಂತಿಯಾಗಿದ್ದಾರೆ. ಅದೂ ಅತ್ಯಂತ ಕಿರಿಯವಯಸ್ಸಿನಲ್ಲಿ. ಆಕೆ ಪ್ರಧಾನಮಂತ್ರಿಯಾಗಿ ಆಯ್ಕೆಯಾಗುವಾಗ ಆಕೆಯ ವಯಸ್ಸು 37.
ಜೆಸಿಂಡಾ ಸಮಾಜವಾದಿ ತತ್ತ್ವಗಳಲ್ಲಿ ಅಚಲ ನಂಬಿಕೆಯಿರುವ ಪ್ರಗತಿಪರ ಮಹಿಳೆ. ಪ್ರಧಾನಮಂತ್ರಿಯಾಗಿರುವಾಗಲೇ ಮಗುವಿಗೆ ಜನ್ಮನೀಡಿದ ಜೆಸಿಂಡಾರಲ್ಲಿ ಇರುವ ವಿಶೇಷ ವ್ಯಕ್ತಿತ್ವವೆಂದರೆ ಮಾತೃ ಹೃದಯ. ದುಃಖ ತಪ್ತ ಪ್ರಜೆಗಳನ್ನು ಅಪ್ಪಿ ಹಿಡಿದು ಅಶ್ರುಜಲ ಸುರಿಸುವ ಅಂತಃಕರಣದ ಹೆಣ್ಣು ಜೆಸಿಂಡಾ. ಇದಕ್ಕೆ ಸಾಕ್ಷಿಯಾಗಿದ್ದು 2019 ರ ಮಾರ್ಚ್ ತಿಂಗಳು. ನ್ಯೂಝಿಲ್ಯಾಂಡಿನ ಕ್ರೈಸ್ತ್ ಚರ್ಚ್ ಪ್ರದೇಶದಲ್ಲಿರುವ ಮಸೀದಿಯೊಂದಕ್ಕೆ ಭಯೋತ್ಪಾದಕ ದಾಳಿ ನಡೆದಿತ್ತು. ಮಾರ್ಚ್ ಹದಿನೈದರ ಶುಕ್ರವಾರದಂದು ಮುಸ್ಲೀಂಮರು ಅಲ್ ನೂರ್ ಮಸೀದಿಯಲ್ಲಿ ಜುಮಾ ಪ್ರಾರ್ಥನೆ ಸಲ್ಲಿಸುವ ಸಮಯದಲ್ಲೇ ಶತಮಾನದ ಹಿಂದಿನ ಸರ್ಬಿಯಾ ಬೋಸ್ನಿಯಾ ಶಿಲುಬೆಯುದ್ಧದ ಪಳೆಯುಳಿಕೆಯ ಭಯೋತ್ಪಾದಕನೊಬ್ಬ ಬಂದೂಕಿನೊಂದಿಗೆ ಪ್ರತ್ಯಕ್ಷನಾಗಿದ್ದ. ಪ್ರಾರ್ಥನೆಯಲ್ಲಿ ನಿರತರಾಗಿದ್ದ ಮುಸ್ಲೀಂ ಪ್ರಜೆಗಳ ಮೇಲೆ ಆತ ನಡೆಸಿದ ಗುಂಡಿನ ದಾಳಿಗೆ ಐವತ್ತಕ್ಕೂ ಹೆಚ್ಚು ಜನರು ಬಲಿಯಾಗಿ ಹಲವಾರು ಜನರು ಗಾಯಗೊಂಡರು.
ಶತಮಾನಗಳ ಶತ್ರುತ್ವವನ್ನು ಆನುಷಂಗಿಕ ಗುಣದಂತೆ ಪೊರೆಯುತ್ತಿರುವ ಜನಾಂಗೀಯ ದ್ವೇಷವನ್ನು ನೋಡಿ ಜಗತ್ತೇ ಬೆಚ್ಚಿ ಬಿದ್ದಿತು.
ಆದರೆ ನ್ಯೂಝೀಲ್ಯಾಂಡ್ ಎಂಬ ಪುಟ್ಟ ದೇಶದ ಆ ಪ್ರಧಾನಿ ಮಹಾಮಾತೆ ಜೆಸಿಂಡಾ ಅಂದು ತೋರಿಸಿದ ದಿಟ್ಟತನ, ಅಂತಃಕರಣ ಮತ್ತು ಮುತ್ಸದ್ಧಿತನವನ್ನು ನೋಡಿದ ಜಗತ್ತು ಇನ್ನೊಮ್ಮೆ ಬೆರಗಾಯಿತು. ಕ್ರೈಸ್ತ ಮತೀಯರೇ ಬಹುಸಂಖ್ಯಾತರಾಗಿರುವ ಆ ದೇಶದಲ್ಲಿ ಮುಸ್ಲೀಮರು ಅಲ್ಪಸಂಖ್ಯಾತರು. ಅಲ್ಲಿ ನಡೆದಿರುವುದು ಜನಾಂಗೀಯ ದಾಳಿ. ಕಾರಣೀಕರ್ತ ತನ್ನನ್ನು ತಾನು ಓರ್ವ ಶಿಲುಬೆಯುದ್ಧದ ಯೋಧನೆಂದು ಬಗೆದಿರುವ ಕ್ರೈಸ್ತ ಹುಡುಗ. ಆತ ನಡೆಸಿರುವ ಕೃತ್ಯವೋ ಏಸು ಸ್ವಾಮಿಯ ಕಣ್ಣಲ್ಲಿ ನೀರುತರಿಸುವಂತಹುದು. ಜೆಸಿಂಡಾ ಆ ಕ್ಷಣವೇ ಕೃತ್ಯ ನಡೆದ ಬೀದಿಗೆ ಧಾವಿಸಿದರು. ಮಸೀದಿಯೊಳಗೆ ತಮ್ಮವರ ಛಿದ್ರವಾದ ದೇಹಗಳನ್ನು ಆಯುತ್ತಾ ಆಕ್ರಂದನಗೈಯ್ಯುತ್ತಿರುವ ಸಂಬಂಧಿಗಳನ್ನು ಅಪ್ಪಿಕೊಂಡು ತಾವೂ ಕಣ್ಣೀರು ಸುರಿಸಿದರು. ಸ್ವತಃ ಕಪ್ಪು ಬುರ್ಖಾವನ್ನು ಧರಿಸಿಕೊಂಡು ಬಲಿಯಾದವರ ಮನೆಗೆ ಧಾವಿಸಿದರು. ಮಾತ್ರವಲ್ಲದೆ ಕಪ್ಪು ಬುರ್ಖಾ ಧರಿಸಿಕೊಂಡೇ ಪಾರ್ಲಿಮೆಂಟಿಗೂ ಹಾಜರಾದರು ಮತ್ತು ಜನಾಂಗೀಯ ದ್ವೇಷಕ್ಕೆ ಬಲಿಯಾದ ತನ್ನ ದೇಶದ ಮುಗ್ದ ಪ್ರಜೆಗಳಿಗೆ ಶೃದ್ಧಾಂಜಲಿ ಸಲ್ಲಿಸಿದರು. ಒಂದು ವಾರದೊಳಗೆ ನ್ಯೂಝಿಲ್ಯಾಂಡಿನ ಶಸ್ತ್ರಾಸ್ತ್ರ ಕಾನೂನುಗಳಿಗೆ ತಿದ್ದುಪಡಿ ಮಾಡಲಾಯಿತು. ಅನಗತ್ಯವಾಗಿ ಬಂದೂಕುಗಳನ್ನು ಹೊಂದುವವರ ಮೇಲೆ ನಿಯಂತ್ರಣ ಹೇರಲಾಯಿತು. ಅಲ್ಪಸಂಖ್ಯಾತರ ಮೇಲೆ ನಡೆಸಲಾಗುವ ಯಾವುದೇ ದಾಳಿ ಅಥವಾ ದೌರ್ಜನ್ಯವನ್ನು ನಿರ್ದಾಕ್ಷಿಣ್ಯವಾಗಿ ತಡೆಹಿಡಿಯಲಾಗುವುದೆಂದು ಪ್ರಧಾನಿ ಶಪಥವನ್ನೇಗೈದು ಬಿಟ್ಟರು.
ಓರ್ವ ಸಮಾಜವಾದಿ , ಪ್ರಗತಿಪರ ಮಹಿಳೆ ಹಾಗೂ ಜಗತ್ತಿನ ಅತ್ಯಂತ ಕಿರಿಯ ಪ್ರಧಾನಿಯೆಂಬ ಹೆಗ್ಗಳಿಕೆಗೆ ಪಾತ್ರರಾದ ಜೆಸಿಂಡಾ ಆರ್ಡ್ರೆನ್ರನ್ನು ನೋಡಿ ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವವೆಂದು ಬೀಗುತ್ತಿರುವ ಮತ್ತು ಪ್ರಜಾತಂತ್ರ ವ್ಯವಸ್ಥೆಗೆ ಒದಗುತ್ತಿರುವ ಸಣ್ಣ ಪುಟ್ಟ ಸವಾಲುಗಳನ್ನು ಎದುರಿಸಲು ಏದುಸಿರು ಬಿಡುತ್ತಿರುವ ಮಹಾನ್ ದೇಶಗಳು ಪಾಠ ಕಲಿಯಬೇಕಿದೆ.
ಶಾಲಾ ಟೀಚರ್ಗಳ ರೂಪದಲ್ಲಿಯೋ , ಪಂಚಾಯತ್ ಪ್ರತಿನಿಧಿಯಾಗಿಯೋ , ವೈದ್ಯೆಯಾಗಿಯೋ, ದಾದಿಯಾಗಿಯೋ, ವಕೀಲೆಯಾಗಿಯೋ , ಯಾವ ರೂಪದಲ್ಲಿಯಾದರೂ ಸರಿ, ನಮ್ಮ ದೇಶಕ್ಕೊಬ್ಬಳು ಜೆಸಿಂಡಾ ಅರ್ಡ್ರೆನ್ ಅತೀ ತುರ್ತಾಗಿ ಬೇಕಾಗಿದ್ದಾಳೆ.
ಪುನೀತ್ ಅಪ್ಪು ರವರ ಫೇಸ್ ಬುಕ್ ವಾಲ್ ನಿಂದ













