ಕನ್ನಡದ ಕಬೀರ ಇಬ್ರಾಹೀಮ್ ಸುತಾರ ನಿಧನ: ಸಂತಾಪ ಸೂಚಿಸಿದ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ

0
610

ಸನ್ಮಾರ್ಗ ವಾರ್ತೆ

ಬೆಂಗಳೂರು: ಭಾವೈಕ್ಯತೆಯ ಹರಿಕಾರ, ಸೌಹಾರ್ದತೆಗಾಗಿ ಸದಾ ದುಡಿಯುತ್ತಿದ್ದ ಪದ್ಮಶ್ರೀ ಪುರಸ್ಕೃತ ಇಬ್ರಾಹೀಮ್ ಸುತಾರ ರವರ ನಿಧನಕ್ಕೆ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಡಾ. ಬೆಳಗಾಮಿ ಮುಹಮ್ಮದ್ ಸಾದ್‌ರವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಸುತಾರರು ನಾಡು ಕಂಡ ಶ್ರೇಷ್ಠ ವಾಗ್ಮಿ. ವಿವಿಧ ಧರ್ಮಗಳ ಬಗ್ಗೆ ಅವರಿಗಿದ್ದ ಜ್ಞಾನ ಮತ್ತು ಆ ಜ್ಞಾನವನ್ನು ನಾಡಿನ ಸೌಹಾರ್ದತೆಗಾಗಿ ಅವರು ಉಪಯೋಗಿಸಿದ ರೀತಿ ನಮಗೆಲ್ಲಾ ಮಾದರಿಯಾದದ್ದು. ವಿವಿಧ ಧರ್ಮಗಳಲ್ಲಿದ್ದ ಸಮಾನ ಅಂಶಗಳನ್ನು ಗುರುತಿಸಿ ಬಹಳ ಸರಳ ಭಾಷೆ ಹಾಗೂ ಮನಮುಟ್ಟುವ ರೀತಿಯಲ್ಲಿ ಜನರ ಮುಂದಿಡುವ ಅವರ ಶೈಲಿಯು ಅನನ್ಯ, ಅನುಪಮವಾದುದು. ಜನರ ಮಧ್ಯೆ ಸೌಹಾರ್ದತೆಯ ರಾಯಭಾರಿಯಾಗಿ ಅವರು ಕಾರ್ಯ ನಿರ್ವಹಿಸಿ ಈ ಜಗತ್ತಿನಿಂದ ನಿರ್ಗಮಿಸಿದರು. ಅವರ ನಡೆ-ನುಡಿಗಳು ಈ ನಾಡಿನ ಜನಮಾನಸದಲ್ಲಿ ಎಂದೆಂದಿಗೂ ಅಚ್ಚಳಿಯದೇ ಉಳಿಯಲಿದೆ.

ದೇಶದ ಇಂದಿನ ಸಂದಿಗ್ಧ ಕಾಲಘಟ್ಟದಲ್ಲಿ ಸುತಾರರ ನಿಧನವು ಒಂದು ದೊಡ್ಡ ನಿರ್ವಾತವನ್ನು ಸೃಷ್ಟಿಸಿದೆ. ಜನರ ಹೃದಯಗಳನ್ನು ಬೆಸೆಯುವಂತಹ ಪವಿತ್ರ ಕಾರ್ಯದಲ್ಲಿ ಸದಾ ನಿರತರಾಗಿದ್ದ ಇಬ್ರಾಹೀಮ್ ಸುತಾರರವರು ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಘಟಕವು ಹಮ್ಮಿಕೊಂಡಿದ್ದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಸರ್ವಶಕ್ತನಾದ ದೇವನು ಅವರ ಪರಲೋಕ ಜೀವನವನ್ನು ಅನುಗ್ರಹಿಸಲಿ. ಅವರ ಕುಟುಂಬವರ್ಗ ಹಾಗೂ ಅಭಿಮಾನಿ ವರ್ಗಕ್ಕೆ ಸಹನೆಯನ್ನು ನೀಡಲಿ ಎಂದು ಡಾ. ಬೆಳಗಾಮಿ ಮುಹಮ್ಮದ್ ಸಾದ್‌ರವರು ಸಂತಾಪ ಸೂಚಿಸಿದ್ದಾರೆ.

ಜನರ ಹೃದಯಗಳನ್ನು ಬೆಸೆಯುತ್ತಿದ್ದ ಭಾವೈಕ್ಯತೆಯ ಕೊಂಡಿಯೊಂದು ನಮ್ಮಿಂದ ಕಳಚಿತು. ಇಬ್ರಾಹೀಮ್ ಸುತಾರರ ನಿಧನವು ದೇಶಕ್ಕೆ ತುಂಬಲಾರದ ನಷ್ಟ. ಅಲ್ಲಾಹನು ಅವರಿಗೆ ಉನ್ನತ ಸ್ವರ್ಗವನ್ನು ನೀಡಲಿ. ಅವರ ಕುಟುಂಬ ವರ್ಗ, ಅಭಿಮಾನಿಗಳಿಗೆ ಸಹನೆಯನ್ನು ನೀಡಲಿ ಎಂದು ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸಿದ್ದಾರೆ.