ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ: 3 ಸಾವಿರ ಜನರನ್ನು ಅಕ್ರಮವಾಗಿ ಬಂಧಿಸಿದ ಉತ್ತರ ಪ್ರದೇಶ ಪೊಲೀಸರು

0
533

48 ಗಂಟೆಗಳಲ್ಲಿ 23 ಮುಸ್ಲಿಮರ ಹತ್ಯೆ: ಭಯಾನಕ ವರದಿ ಬಿಡುಗಡೆ ಮಾಡಿದ ಎಪಿಸಿಆರ್

ಸನ್ಮಾರ್ಗ ವಾರ್ತೆ

ದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಉತ್ತರ ಪ್ರದೇಶ ಪೊಲೀಸರು ಕನಿಷ್ಠ 3,000 ಜನರನ್ನು ಅಕ್ರಮವಾಗಿ ಬಂಧಿಸಿದ್ದಾರೆ ಮತ್ತು ಅವರಲ್ಲಿ ಹಲವರು ಕಪೋಲಕಲ್ಪಿತ ಆರೋಪಗಳ ಅಡಿಯಲ್ಲಿ ಜೈಲುಗಳಲ್ಲಿದ್ದಾರೆ ಎಂದು ಸಿಎಎ ವಿರೋಧಿ ಪ್ರತಿಭಟನೆಯ ವಿಚಾರವಾಗಿ ಎರಡು ವರ್ಷಗಳ ನಂತರ ಹೊಸ ವರದಿಯೊಂದನ್ನು ಬಿಡುಗಡೆ ಮಾಡಿರುವ ಅಸೋಸಿಯೇಷನ್ ​​ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (APCR) ಸಂಘಟನೆ, ಇದೇ ವಿಚಾರವಾಗಿ ಕೇವಲ 48 ಗಂಟೆಗಳಲ್ಲಿ 23 ಮುಸ್ಲಿಮರನ್ನು ಹತ್ಯೆ ಮಾಡಲಾಗಿದೆ ಎಂದು ಆತಂಕಕಾರಿ ಸಂಗತಿಯನ್ನು ಬಿಚ್ಚಿಟ್ಟಿದೆ.

ಮಾನವ ಹಕ್ಕುಗಳ ಪರವಾಗಿ ದೇಶಾದ್ಯಂತ ಕಾರ್ಯಾಚರಿಸುತ್ತಿರುವ ಎಪಿಸಿಆರ್ ಸಂಘಟನೆಯು ದೆಹಲಿಯ ಪ್ರೆಸ್ ಕ್ಲಬ್ ಆಫ್ ಇಂಡಿಯಾದ ಆವರಣದಲ್ಲಿ ಬಿಡುಗಡೆ ಮಾಡಿದ ತನ್ನ ವರದಿಯಲ್ಲಿ ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ಕೆಂಗಣ್ಣಿಗೆ ಗುರಿಯಾದವರಲ್ಲಿ ಹೆಚ್ಚಿನವರು ಮುಸ್ಲಿಮರು. ಸುಮಾರು 5000 ವ್ಯಕ್ತಿಗಳು ಮತ್ತು 1 ಲಕ್ಷಕ್ಕೂ ಹೆಚ್ಚು ಅಪರಿಚಿತ ವ್ಯಕ್ತಿಗಳ ವಿರುದ್ಧ ಸಿಎಎ ವಿರೋಧಿ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಅಂದಾಜು 350 ಎಫ್‌ಐಆರ್ ಅನ್ನು ಉತ್ತರ ಪ್ರದೇಶದ ಪೊಲೀಸರು ದಾಖಲಿಸಿಕೊಂಡಿದ್ದಾರೆ ಎಂಬ ಅಂಶವನ್ನು ಕೂಡ ವರದಿಯಲ್ಲಿ ತಿಳಿಸಿದೆ.

ರಾಜ್ಯ ಸರಕಾರ ಮತ್ತು ಅದರ ಅಧೀನದಲ್ಲಿರುವ ಎಲ್ಲಾ ಸಂಸ್ಥೆಗಳು 3000 ಕ್ಕೂ ಹೆಚ್ಚು ಜನರಿಗೆ ‘ಎಚ್ಚರಿಕೆ’ ಸೂಚನೆಗಳನ್ನು ನೀಡುವ ಮೂಲಕ ಬೆದರಿಕೆ ತಂತ್ರಗಳಲ್ಲಿ ತೊಡಗಿಕೊಂಡಿದೆ ಎಂದು ತಿಳಿಸಿರುವ ಎಪಿಸಿಆರ್, ಅಕ್ರಮವಾಗಿ ಬಂಧಿಸಲ್ಪಟ್ಟವರು ಮತ್ತು ಜೈಲಿನಲ್ಲಿ ಚಿತ್ರಹಿಂಸೆಗೊಳಗಾದವರಿಗೂ ಕೂಡ ಉತ್ತರ ಪ್ರದೇಶ ಸರಕಾರ ಸೊತ್ತು ಹಾನಿಗೆ ಸಂಬಂಧಿಸಿ ನೋಟಿಸ್ ಅನ್ನು ಕೂಡ ಕಳಿಸಿದ್ದು, ಬಂಧಿತರು ಅವರು ಜೈಲಿನಲ್ಲಿದ್ದಾಗ ಅವರ ಕುಟುಂಬದ ಸದಸ್ಯರು ಪೊಲೀಸ್ ಠಾಣೆಯಲ್ಲಿ ಆ ರಸೀದಿಗಳನ್ನು ಪಾವತಿಸಿದ್ದಾರೆ. ಆದರೆ ಅವರ ಜಾಮೀನಿನ ನಂತರ ಆ ಮೊತ್ತವನ್ನು ಹಿಂದಿರುಗಿಸಲು ಉತ್ತರ ಪ್ರದೇಶದ ಪೊಲೀಸರು ಒಪ್ಪಲಿಲ್ಲ ಎಂಬ ಅಂಶವನ್ನು ಕೂಡ ವರದಿಯಲ್ಲಿ ಹೇಳಿದೆ.

48 ಗಂಟೆಗಳಲ್ಲಿ 23 ಮುಸ್ಲಿಮರ ಹತ್ಯೆ

ಡಿಸೆಂಬರ್ 2019 ರಲ್ಲಿ ಸಿಎಎ ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಉತ್ತರ ಪ್ರದೇಶದಾದ್ಯಂತ ಪೊಲೀಸರ ದೌರ್ಜನ್ಯದಿಂದ ಕನಿಷ್ಠ 23 ಮುಸ್ಲಿಮರು ಕೊಲ್ಲಲ್ಪಟ್ಟರು ಎಂದು ವರದಿ ಪುನರುಚ್ಚರಿಸಿದೆ.

“ಈ ಎಲ್ಲಾ ಸಾವಿನ ಹೊಣೆಗಾರಿಕೆಯಿಂದ ಯೋಗಿ ಸರಕಾರವು ಸಂಪೂರ್ಣವಾಗಿ ನುಣುಚಿಕೊಂಡಿದೆ. ಈ ಎಲ್ಲಾ ಸಾವುಗಳು ಬುಲೆಟ್ ಗಾಯಗಳಿಂದ ಸಂಭವಿಸಿವೆ. ಕೆಲವು ಮಂದಿಯ ಮರಣೋತ್ತರ ಪರೀಕ್ಷೆಗಳನ್ನು ನಡೆಸಲಾಯಿತಾದರೂ ಎಫ್‌ಐಆರ್‌ಗಳು ದಾಖಲಿಸಲಾಗಿಲ್ಲ. ಅಲ್ಲದೇ, ಸರಿಯಾದ ಶವ ಸಂಸ್ಕಾರಕ್ಕೂ ಅವಕಾಶ ಕೊಟ್ಟಿರಲಿಲ್ಲ. ನೆಪ ಮಾತ್ರಕ್ಕೆ 8 ವಿಶೇಷ ತನಿಖಾ ತಂಡಗಳನ್ನು (ಎಸ್‌ಐಟಿ) ಸ್ಥಾಪಿಸಲಾಯಿತು. ಆದಾಗ್ಯೂ ಇಲ್ಲಿಯವರೆಗೆ ಯಾವುದೇ ಬಂಧನಗಳನ್ನು ಮಾಡಲಾಗಿಲ್ಲ ಎಂಬ ಭಯಾನಕ ಸತ್ಯವನ್ನು ಎಪಿಸಿಆರ್ ವರದಿ ಹೇಳಿದೆ.