ಕೇರಳದಿಂದ ಮಂಗಳೂರಿಗೆ ಗಾಂಜಾ ಸಾಗಾಟ: ಕಾರು ಸಹಿತ ಇಬ್ಬರ ಸೆರೆ; 2.220 ಕೆಜಿ ಗಾಂಜಾ ವಶಕ್ಕೆ

0
381

ಸನ್ಮಾರ್ಗ ವಾರ್ತೆ

ಮಂಗಳೂರು: ಕೇರಳದ ಕುಂಜತ್ತೂರು ಎಂಬ ಪರಿಸರದಿಂದ ಮಂಗಳೂರಿಗೆ ಅಕ್ರಮವಾಗಿ ಗಾಂಜಾವನ್ನು ಸಾಗಾಟ ಮಾಡಿಕೊಂಡು ಮಂಗಳೂರು ನಗರದಲ್ಲಿ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ನಗರದ ಸಿಸಿಬಿ ಪೊಲೀಸರು ಇಬ್ಬರನ್ನು ದಸ್ತಗಿರಿ ಮಾಡಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಫೆ. ೧೬ ರಂದು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ ಗ್ರಾಮದ ನಾರ್ಲ ಪಡೀಲ್ ರಾಮನಗರ ಎಂಬಲ್ಲಿ ಕಾರಿನಲ್ಲಿ ಅಕ್ರಮ ಮಾದಕ ವಸ್ತುವಾದ ಗಾಂಜಾವನ್ನು ಕೇರಳದಿಂದ ಮಂಗಳೂರಿಗೆ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸ್ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ನೇತ್ರತ್ವದ ತಂಡ ದಾಳಿ ನಡೆಸಿ ಆರೋಪಿಗಳಾದ ಕಾಸರಗೋಡು ಜಿಲ್ಲೆ ಮಂಜೇಶ್ವರ ಹೊಸಂಗಡಿ ಸಮೀಪದ ಮಿಂಜ ಗ್ರಾಮದ ಪ್ರಫುಲ್ ರಾಜ್(23) ಹಾಗೂ ಬಂಟ್ವಾಳ ತಾಲೂಕು ಸಜಿಪ ಗ್ರಾಮದ ಅವಿನಾಶ್ ಎಂಬವರನ್ನು ಬಂಧಿಸಲಾಗಿದೆ.

ಬಂಧಿತರಿಂದ 2.220 ಕೆಜಿ ತೂಕದ ಗಾಂಜಾ, 1200 ರೂ. ನಗದು, 2 ಮೊಬೈಲ್ ಫೋನ್ ಗಳು ಹಾಗೂ ಮಾರುತಿ ಸ್ವಿಪ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಆಂದಾಜು ಒಟ್ಟು ಮೌಲ್ಯ ರೂ. 5,50,400/-ಆಗಬಹುದು. ಬಂಧಿತರ ಪೈಕಿ ಅವಿನಾಶ್ ಎಂಬವ ಈ ಹಿಂದೆ ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಕಾರಿ ವಾಹನಕ್ಕೆ ಹಾನಿಗೊಳಿಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದ.

ಆರೋಪಿ ಮತ್ತು ಸೊತ್ತು ಪತ್ತೆ ಕಾರ್ಯದಲ್ಲಿ ಸಿಸಿಬಿ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್, ಪಿಎಸ್ಐ ರಾಜೇಂದ್ರ ಬಿ, ಪ್ರದೀಪ ಟಿ ಆರ್ ಹಾಗೂ ಸಿಸಿಬಿ ಸಿಬ್ಬಂದಿಗಳು ಭಾಗವಹಿಸಿದ್ದರು.