ಸನ್ಮಾರ್ಗ ವಾರ್ತೆ
ದಾವಣಗೆರೆ: ಮಹಿಳೆಯರಿಗಾಗಿ ವಿಶೇಷ ಸೌಹಾರ್ದ ಇಫ್ತಾರ್ ಕೂಟವನ್ನು ದಾವಣಗೆರೆಯಲ್ಲಿ “ನೆರಳು ಬೀಡಿ ಕಾರ್ಮಿಕರ ಯೂನಿಯನ್” ನೇತೃತ್ವದಲ್ಲಿ ಆಯೋಜಿಸಲಾಯಿತು. ‘ಮಾನವರಾಗೋಣ ನಾವು ಮಾನವರಾಗೋಣ’ ಎಂಬ ಧೇಯ್ಯದೊಂದಿಗೆ ಹಿಂದೂ-ಮುಸ್ಲಿಂ ಸಮುದಾಯದ ಮಹಿಳೆಯರು ಒಟ್ಟಾಗಿ ಇಫ್ತಾರ್ ಸೇವನೆಯ ಮೂಲಕ ಸೌಹಾರ್ದತೆ ಸಾರಿದರು.
ಇಫ್ತಾರ್ ಕೂಟವನ್ನುದ್ದೇಶಿಸಿ ”ದೇಶದಲ್ಲಿ ಏಕತೆಯನ್ನು ಮುರಿಯುವ ಹುನ್ನಾರ ಎಲ್ಲೆಡೆ ನಡೆಯುತ್ತಿದೆ. ನಮ್ಮ ದೇಶ ಬಹು ಭಾಷಾ ಮತ್ತು ಬಹು ಸಂಸ್ಕೃತಿಗಳಿಂದ ಕೂಡಿದೆ. ಅಲ್ಲದೇ, ಬಹು ನಾಗರಿಕತೆಯನ್ನು ಹೊಂದಿದೆ. ಅದರಂತೆ ಎಲ್ಲರೂ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಈ ಸೌಹಾರ್ದತೆಯನ್ನು ಒಡೆಯುವವರ ವಿರುದ್ಧ ನಾವೆಲ್ಲರೂ ಒಂದಾಗಿ ಸುಂದರ ಭಾರತವನ್ನು ಕಟ್ಟಬೇಕಾಗಿದೆ” ಎಂದು ಭಾರತೀಯ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಅವರಗೆರೆ ಚಂದ್ರುರವರು ಹೇಳಿದರು.
ದಲಿತ ಸಂಘರ್ಷ ಸಮಿತಿಯ ಹೆಗ್ಗೆರೆ ರಂಗಪ್ಪ ಮಾತನಾಡಿ, “ದೇಶದಲ್ಲಿ ಸಂವಿಧಾನದ ಆಶಯವನ್ನು ಗಾಳಿಗೆ ತೂರಿ, ಮನು ಸಂಸ್ಕೃತಿಯನ್ನು ಜನರ ಮೇಲೆ ಹೇರುವ ಯತ್ನ ನಡೆಯುತ್ತಿದೆ. ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಸಮಾಜವನ್ನು ಒಡೆಯುವ ಯತ್ನಿಸಲಾಗುತ್ತಿದೆ. ಹಿಜಾಬ್, ಹಲಾಲ್ ಹೆಸರಿನಲ್ಲಿ ಜನರ ಮಧ್ಯೆ ದ್ವೇಷ ತುಂಬಲಾಗುತ್ತಿದೆ. ಮುಸ್ಲಿಂ ವ್ಯಾಪಾರಿಗಳನ್ನು ಬಹಿಷ್ಕರಿಸುವ ಪ್ರಯತ್ನಗಳಾಗಿವೆ. ಇಂತಹ ಹುನ್ನಾರಗಳನ್ನು ನಾವೆಲ್ಲರೂ ಒಗ್ಗಟ್ಟಾಗಿ ಹಿಮ್ಮೆಟ್ಟಿಸಬೇಕಿದೆ. ನಮ್ಮದು ಎಲ್ಲರೂ ಕೂಡಿ ಬಾಳುವ ದೇಶ. ಸೌಹಾರ್ದತೆಯಿಂದ ಬದುಕುವ ನಮ್ಮ ಪರಂಪರೆಯನ್ನು ಉಳಿಸಬೇಕಿದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತ ಜಾಗೃತಿ ವೇದಿಕೆಯ ಅಬ್ದುಲ್ ಗನೀ ತಾಹೀರ್, ದೀಪು, ಆನಂದ ರಾಜ್, ಚಂದ್ರಪ್ಪ ಮಹ್ಮದ್ ಹಯಾತ್, ವಸೀಂ ಖಾನ್, ಫಾಸ್ಟರ್ ರಾಜಶೇಖರ್, ಫಾಸ್ಟರ್ ಇಮ್ಯಾನುವ್ಯಾಲ್, ಫಾಸ್ಟರ್ ಕರುಣಾಕರಣ್, ಎಲ್ ಎಚ್ ಅರುಣಕುಮಾರ್, ಮಹ್ಮದ್ ನಿಜಾಮ್, ಅಲ್ಲಾಬಕ್ಷಿ, ಮುಹಮ್ಮದ್ ಶುಯೇಬ್ ಹಾಗೂ ನೆರಳು ಬೀಡಿ ಕಾರ್ಮಿಕರ ಯೂನಿಯನ್ನ ಸದಸ್ಯರು ಭಾಗಿಯಾಗಿದ್ದರು.












