ಸನ್ಮಾರ್ಗ ವಾರ್ತೆ
ಕುಕ್ಕಾಜೆ: ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವತಿಯಿಂದ, ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಕುಕ್ಕಾಜೆ ಎಂಬಲ್ಲಿ ದಾನಿಗಳ ನೆರವಿನಿಂದ ಸಾರ್ವಜನಿಕರ ಬಳಕೆಗಾಗಿ ತೋಡಿಸಿದ ಬೋರ್‌ವೆಲ್‌ನ್ನು ಬಹಳ ಸರಳ ಕಾರ್ಯಕ್ರಮದಲ್ಲಿ ಬೋಳಂಗಡಿ ಹವ್ವಾ ಜುಮಾ ಮಸೀದಿ ಖತೀಬರಾದ ಮೌಲಾನಾ ಯಹ್ಯಾ ತಂಙಲ್ ಮದನಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಊರ ಪ್ರಮುಖರಾದ ಅಬೂಬಕ್ಕರ್‌ರವರು, ತೀರಾ ಹಿಂದುಳಿದ ಮತ್ತು ಬಹಳ ಅಗತ್ಯದ ಪ್ರದೇಶಕ್ಕೆ ಸರಿಯಾದ ಸಮಯಕ್ಕೆ ನೀರಿನ ವ್ಯವಸ್ಥೆ ಮಾಡಿದ್ದೀರೆಂದು ಜಮಾಅತೆ ಇಸ್ಲಾಮೀ ಹಿಂದ್‌ನ ಸೇವಾ ಚಟುವಟಿಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು.
ಮಂಚಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಇಬ್ರಾಹೀಮ್, ರಮೀಝ, ಝುಹರ ಹಾಗೂ ಇರಾ ಗ್ರಾಮ ಪಂಚಾಯತ್ ಸದಸ್ಯರಾದ ಯಾಕೂಬ್, ಸ್ಥಳದಾನ ಮಾಡಿದ ಫಾರೂಕ್ ಭಾಯ್, ಜಮಾಅತೆ ಇಸ್ಲಾಮೀ ಹಿಂದ್, ಪಾಣೆಮಂಗಳೂರು ಶಾಖೆಯ ಅಧ್ಯಕ್ಷರಾದ ಅಬ್ದುಲ್ಲಾ ಚೆಂಡಾಡಿ, ಸಮಾಜ ಸೇವಾ ಘಟಕದ ಸಂಚಾಲಕರಾದ ಎಂ. ಎಚ್. ಮುಸ್ತಫಾ, ಮುಖ್ತಾರ್ ಅಹ್ಮದ್, ಕಾಸಿಮ್ ಚೆಂಡಾಡಿ, ಶಂಶೀರ್ ಮೆಲ್ಕಾರ್ ಮತ್ತಿತರರು ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಗಳಾದರು.













