ಗ್ಯಾಸ್ ಸಿಲಿಂಡರ್ ಸಬ್ಸಿಡಿ ರದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರತಿಭಟನೆ

0
252

ಸನ್ಮಾರ್ಗ ವಾರ್ತೆ

ಕೋಲಾರ: ಕೇಂದ್ರ ಸರಕಾರ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಹಣವನ್ನು ರದ್ದು ಮಾಡಿದ್ದು, ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ನಗರದ ಕಾಂಗ್ರೆಸ್ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ಕಛೇರಿ ಮುಂದೆ ದ್ವಿಚಕ್ರ ವಾಹನಕ್ಕೆ ಹಾಗೂ ಅಡುಗೆ ಅನಿಲ ಸಿಲಿಂಡರ್ ಗೆ ಹೂವಿನ ಹಾರ ಹಾಕಿ ಪೂಜೆ ಮಾಡಿ ಸೌದೆಯಲ್ಲಿ ಅಡುಗೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರತ್ನಮ್ಮ ಮಾತನಾಡಿ ಕೇಂದ್ರ ಸರ್ಕಾರದ ಮೋದಿಯ ಅಚ್ಚೇ ದಿನಗಳ ಪರಿಣಾಮವಾಗಿ ಗೃಹಬಳಕೆಯ ಸಿಲಿಂಡರ್‌ ಬೆಲೆ ಸಾವಿರ ರೂಪಾಯಿಯ ಗಡಿ ದಾಟಿದೆ.

ಕೇಂದ್ರದ ಉಜ್ವಲಾ ಯೋಜನೆಯ ಮೂಲಕ ಗ್ಯಾಸ್‌ ಸಂಪರ್ಕ ಪಡೆದಿದ್ದ ಬಡವರು ಅದರಲ್ಲೂ ಕೂಲಿ ಕಾರ್ಮಿಕರ, ಬಡ ಹಾಗೂ ಮಾಧ್ಯಮ ವರ್ಗದ ಮಹಿಳೆಯರು ಗ್ಯಾಸ್ ಬೆಲೆಯೇರಿಕೆಯ ಶಾಕ್ ಗೆ ತತ್ತರಿಸಿ ಹೋಗಿದ್ದಾರೆ. ಇದು ಕೇಂದ್ರದ ಮೋದಿ ಸರಕಾರದ ಎಂಟು ವರ್ಷಗಳ ಅಭಿವೃದ್ಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು .

ಕೇಂದ್ರದಲ್ಲಿ ಬಿ.ಜೆ.ಪಿ. ಅಧಿಕಾರಕ್ಕೆ ಬಂದ ನಂತರ ಹೊಗೆ ರಹಿತ ಅಡುಗೆ ಮನೆ ಉಜ್ವಲ್ ಯೋಜನೆಯ ಮೂಲ ಉದ್ದೇಶವನ್ನು ನಾಶ ಮಾಡಿದೆ. ಸಿಲಿಂಡರ್ ಬೆಲೆಯನ್ನು ಬೇಕಾಬಿಟ್ಟಿ ದಿನನಿತ್ಯ ಏರಿಸಿ ಬಡವರಿಗೆ ಕೊಳ್ಳುವ ಶಕ್ತಿಯಿಲ್ಲದಂತೆ ಮಾಡಿದೆ. ಬಡವರು ಈ ದರದಲ್ಲಿ ಸಿಲಿಂಡರ್‌ ಖರೀದಿಸಿ ಅನ್ನ ಬೇಯಿಸಲು ಸಾಧ್ಯವಾಗಿಲ್ಲ. ಯು.ಪಿ.ಎ. ಸರ್ಕಾರದಲ್ಲಿ ಬಡವರ ಪರವಾಗಿ ಯೋಜನೆಗಳನ್ನು ಜಾರಿ ಮಾಡಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ಬೆಲೆ ಏರಿಳಿತವಾದರೂ ಅದರ ಬಿಸಿ ಗ್ರಾಹಕರಿಗೆ ತಟ್ಟದಂತೆ ಯು.ಪಿ.ಎ. ಸರ್ಕಾರ ನೋಡಿಕೊಂಡಿತ್ತು. ಆದರೆ ಮೋದಿ ಸರ್ಕಾರ ಗ್ಯಾಸ್ ಮೇಲಿನ ಸಬ್ಸಿಡಿಯನ್ನು ಸುಳಿವೇ ಕೊಡದೆ ರದ್ದು ಮಾಡಿ ಎಲ್ಲಾ ವಸ್ತುಗಳ ಬೆಲೆ ಏರಿಕೆ ಮಾಡಿದೆ ಎಂದು ಟೀಕಿಸಿದರು.

ಮಾಜಿ ನಗರಸಭಾ ಸದಸ್ಯ ಲಾಲ್ ಬಹಾದ್ದೂರ್ ಶಾಸ್ತ್ರಿ ಮಾತನಾಡಿ ಬಿ.ಜೆ.ಪಿ. ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳೊಂದಿಗೆ ಅಗತ್ಯ ವಸ್ತುಗಳ ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಿದೆ. ಇದರಿಂದ ಜನ ಸಾಮಾನ್ಯರಿಗೆ ತುಂಬಾ ತೊಂದರೆಯಾಗಿದೆ. ಬಿ.ಜೆ.ಪಿ. ಸರ್ಕಾರ ಬೆಲೆ ಏರಿಕೆ ಮಾಡಿ ಜನರಿಗೆ ವಂಚನೆ ಮಾಡುತ್ತಿದ್ದು, ಮುಂಬರುವ ಚುನಾವಣೆಯಲ್ಲಿ ಬಿ.ಜೆ.ಪಿ. ಪಕ್ಷಕ್ಕೆ ಸರಿಯಾದ ಪಾಠ ಕಲಿಸಬೇಕಾಗಿದೆ ತೈಲ ಬೆಲೆ, ಗ್ಯಾಸ್ ಬೆಲೆ ಸೇರಿದಂತೆ ಜನರಿಗೆ ಬೇಕಾಗುವಂತಹ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದ್ದು, ಜನರು ಜೀವನ ಸಾಗಿಸುವುದು ದುಸ್ತರವಾಗಿದೆ ಎಂದು ದೂರಿದರು.

ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೆಂಕಟಪತಪ್ಪ, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ರೂಪ, ಬ್ಲಾಕ್ ಅಧ್ಯಕ್ಷೆ ಲಕ್ಷ್ಮಮ್ಮ, ಸವಿತಾ, ನಾಗೇಶ್ವರಿ, ಮೀನುಗಾರಿಕೆ ವಿಭಾಗದ ಜಿಲ್ಲಾ ಅಧ್ಯಕ್ಷ ಶಿವಕುಮಾರ್, ತಾಲ್ಲೂಕು ಅಧ್ಯಕ್ಷ ವಿಜಿಕುಮಾರ್ ಯುವ ಕಾಂಗ್ರೆಸ್ ನವೀನ್ ಗೌಡ, ಮುಖಂಡರಾದ ಲಕ್ಷ್ಮೀ, ಮಂಜುಳ, ಅಸೀನಾ, ಪುಷ್ಪ, ಜಗನ್, ತಬ್ರೇಜ್, ಮುಂತಾದವರು ವಹಿಸಿದ್ದರು.

ವರದಿ: ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ