ಸನ್ಮಾರ್ಗ ವಾರ್ತೆ
ಬೆಂಗಳೂರು: ಆಹಾರ ಧಾನ್ಯಗಳ ಮೇಲೆ ಶೇ 5ರಷ್ಟು ಜಿ.ಎಸ್.ಟಿ ವಿಧಿಸಿರುವುದನ್ನು ಹಿಂಪಡೆಯುವಂತೆ ಒತ್ತಾಯಿಸಿ ವೆಲ್ಫೇರ್ ಪಾರ್ಟಿ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿತು. ಪಕ್ಷದ ರಾಜ್ಯಾಧ್ಯಕ್ಷರು ಅಡ್ವೋಕೇಟ್ ತಾಹೇರ್ ಹುಸೇನ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಜೀವನಾವಶ್ಯಕ ವಸ್ತುಗಳ ಮೇಲೆ ವಿಧಿಸಿರುವ ಜಿಎಸ್ಟಿಯನ್ನು ತಕ್ಷಣವೇ ಕೈಬಿಡಬೇಕು. ಇತ್ತೀಚೆಗೆ ಕೇಂದ್ರ ಸರ್ಕಾರ ಜೂನ್ನಲ್ಲಿ ನಡೆದ ಜಿ.ಎಸ್.ಟಿ. ಮಂಡಳಿ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಂಡಿದೆ. ಇದು ಜನಸಾಮಾನ್ಯರ ವಿರೋಧಿಯಾಗಿದೆ ಎಂದು ದೂರಿದರು.
ಅಕ್ಕಿ, ಜೋಳ, ರಾಗಿ, ಹಾಲು, ಮೊಸರು ಮುಂತಾದ ಆಹಾರ ಪದಾರ್ಥಗಳನ್ನು ಕಾರ್ಮಿಕರು, ಬಡವರು, ಮಧ್ಯಮ ವರ್ಗದವರು ದಿನನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಬಳಸುವ ಅವಶ್ಯಕ ಪದಾರ್ಥಗಳಾಗಿವೆ. ಇವುಗಳ ಮೇಲಿನ ತೆರಿಗೆಯಿಂದ ಜನ ಸಾಮಾನ್ಯರ ಜೀವನ ವೆಚ್ಚ ದುಬಾರಿಯಾಗುತ್ತದೆ. ಈಗಾಗಲೇ ಬೆಲೆ ಏರಿಕೆ, ಹಣ ದುಬ್ಬರಗಳಿಂದ ಜನ ತತ್ತರಿಸಿದ್ದಾರೆ. ಬೆಲೆ ಏರಿಕೆಗೆ ತಕ್ಕಂತೆ ಜನ ಸಾಮಾನ್ಯರ ಆದಾಯ ಹೆಚ್ಚಳವಾಗಿಲ್ಲ. ಇಂಥ ಸಂದರ್ಭದಲ್ಲಿ ತಿನ್ನುವ ಆಹಾರದ ಮೇಲೆ ತೆರಿಗೆ ವಿಧಿಸಿದ ಕೇಂದ್ರ ಸರ್ಕಾರದ ಕ್ರಮ ಖಂಡನೀಯ ಎಂದರು.
ಹಾಲು, ಮೊಸರಿಗೂ ಜಿ.ಎಸ್.ಟಿ. ಹೇರಿರುವ ಸರ್ಕಾರದ ಕ್ರಮದಿಂದ ರೈತರಿಗೆ ತೊಂದರೆಯಾಗಿದೆ. ಆಹಾರ ಪದಾರ್ಥಗಳ ವ್ಯಾಪಾರದಲ್ಲಿಯೂ ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲ ಮಾಡುವುದಕ್ಕಾಗಿ ಕೇಂದ್ರ ಸರ್ಕಾರ ಈ ತೀರ್ಮಾನ ಕೈಗೊಂಡಿದೆ. ಇದರಿಂದ ಜನರಿಗೆ ಸರ್ಕಾರ ದ್ರೋಹವೆಸಗುತ್ತಿದೆ.
ಕಾರ್ಪೋರೇಟ್ ಕಂಪನಿಗಳ ಮತ್ತು ಶ್ರೀಮಂತ ಉದ್ಯಮಿಗಳಿಗೆ ತೆರಿಗೆ ವಿನಾಯಿತಿ ನೀಡಿ ಅವರಿಗೆ ಅನುಕೂಲ ಮಾಡುವ ಸರ್ಕಾರ ಜನಸಾಮಾನ್ಯರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಸರ್ಕಾರದ ಈ ನಿರ್ಧಾರ ಅತ್ಯಂತ ಜನವಿರೋಧಿಯಾಗಿದೆ. ರಾಜ್ಯಗಳಿಗೆ ಕೊಡಬೇಕಾದ ನಷ್ಟ ಪರಿಹಾರವನ್ನು ಕೇಂದ್ರ ಸರ್ಕಾರ ನೀಡುತ್ತಿಲ್ಲ. ಕೂಡಲೇ ಸರ್ಕಾರ ಅಗತ್ಯ ವಸ್ತುಗಳ ಮೇಲಿನ ಜಿಎಸ್ಟಿ ಹಿಂಪಡೆಯಲಿ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲಾ ಖಾನ್, ಮಹಿಳಾ ವಿಭಾಗದ ರಾಜ್ಯಾಧ್ಯಕ್ಷ ತಲತ್ ಯಾಸ್ಮಿನ್, ಬೆಂಗಳೂರು ಉತ್ತರ ವಿಭಾಗದ ಅಧ್ಯಕ್ಷ ಸಫೀರ್ ಆಸಿಫ್, ಕಾರ್ಯದರ್ಶಿ ಫಜಲ್ ಅಹಮದ್, ಮೈನುದ್ದೀನ್ ಖಮರ್ ಸುಲೇಮಾನ್, ಸಲಾಂ ಸೇರಿದಂತೆ ಇನ್ನೆತರೂ ಉಪಸ್ಥಿತಿ ಇದ್ದರು.













