ದಮ್ಮಾಂ,ಫೆ.18: ಸೌದಿಅರೇಬಿಯದಲ್ಲಿ ಕೆಲಸಕ್ಕಾಗಿ ನಕಲಿ ಸರ್ಟಿಫಿಕೇಟ್ ಕೊಟ್ಟಿದ್ದ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ನಕಲಿ ಸರ್ಟಿಫಿಕೆಟ್ ಹೋಲ್ಡರ್ಗಳ ಬಂಧನ ಪ್ರಕ್ರಿಯೆ ಮುಂದುವರೆದಿದ್ದು ಹೊಸದಾಗಿ ನಾಲ್ವರು ಸೌದಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆರೋಪ ಸಾಬೀತಾದರೆ ಒಂದು ವರ್ಷ ಜೈಲಿನಲ್ಲಿ ಕೂರಿಸಿ ಗಡೀಪಾರು ಮಾಡಲಾಗುತ್ತದೆ. ಬಂಧಿಸಲಾದ ನಾಲ್ವರು ಸೌದಿ ಅರೇಬಿಯದ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೆಂಬುದಾಗಿ ತಿಳಿದು ಬಂದಿದೆ.
ನಕಲಿ ಎಕ್ಸ್ಪೀರಿಯನ್ಸ್ ಸರ್ಟಿಫಿಕೇಟ್ ಸಲ್ಲಿಸಿದ್ದಕ್ಕಾಗಿ ಹಲವಾರು ಮಂದಿ ಈಗಾಗಲೇ ಜೈಲು ಪಾಲಾಗಿದ್ದಾರೆ. ತನಿಖಾ ಹಂತದಲ್ಲಿ ಎಕ್ಸಿಟ್ ಹೋಗಲು ಸಿದ್ಧವಾದವರು ಉಮ್ರಾ ಮಾಡಲು ಬಂದಾಗ ಸಿಕ್ಕಿಬೀಳುತ್ತಿದ್ದಾರೆ. ಯಾಕೆಂದರೆ ಇವರ ಎಕ್ಸಿಪೀರಿಯನ್ಸ್ ಲೆಟರ್ ನಕಲಿಯೆಂದು ಕಂಡು ಬಂದರೆ ಕೂಡಲೇ ಹಿಡಿದು ಒಳಗೆ ಹಾಕಲಾಗುತ್ತಿದೆ.
ಹಲವು ಏಜೆಂಟ್ಗಳೇ ಎಕ್ಸಿಪೀರಿಯನ್ಸ್ ಲೆಟರ್ ತಯಾರು ಮಾಡಿ ಕೊಡುತ್ತಾರೆ. ಇದು ಇಂತಹವರಿಗೆ ದೊಡ್ಡ ಸಮಸ್ಯೆಯಾಗಿಬಿಟ್ಟಿದೆ ಎಂದು ಸಾಮಾಜಿಕ ಕಾರ್ಯಕರ್ತರು ಹೇಳುತ್ತಿದ್ದಾರೆ. ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವವರ ಸರ್ಟಿಫಿಕೆಟನ್ನು ಕೂಡ ತನಿಖೆ ಮಾಡಲಾಗುತ್ತಿದೆ. ತನಿಖೆಯ ವೇಳೆ ಎಕ್ಸಿಟ್ ಪಡೆದು ಮತ್ತೆ ಕೆಲಸ ಮಾಡುವಾಗ ಸಿಕ್ಕಿಬಿದ್ದು ಬಂಧನಕ್ಕೊಳಗಾಗುತ್ತಿದ್ದಾರೆ. ನಕಲಿ ಸರ್ಟಿಫಿಕೆಟ್ ಹೋಲ್ಡರ್ಗಳಿಗೆ ಒಂದು ವರ್ಷ ಜೈಲು, ತದನಂತರ ಗಡೀಪಾರು ಹಾಗೂ ಶಾಶ್ವತವಾಗಿ ಸೌದಿ ಅರೇಬಿಯ ಪ್ರವೇಶಿಸದಂತೆ ನಿಷೇಧ ಹೇರಲಾಗುತ್ತಿದೆ.












