ಭದ್ರತಾ ಪಡೆಯಿಂದ ಪುಲ್ವಾಮ ಭಯೋತ್ಪಾದನಾ ದಾಳಿಯ ಸೂತ್ರಧಾರನ ಹತ್ಯೆ

0
987

ಶ್ರೀನಗರ: ಪುಲ್ವಾಮದಲ್ಲಿ 40 ಸಿಆರ್‍ಪಿಎಫ್ ಯೋಧರ ವೀರಮೃತ್ಯುಗೆ ಕಾರಣವಾಗಿದ್ದ ಭಯೋತ್ಪಾದನಾ ದಾಳಿಯ ಮುಖ್ಯ ಸೂತ್ರಧಾರನೊಬ್ಬ ಸುರಕ್ಷಾ ಪಡೆಯೊಂದಿಗಿನ ಮುಖಾಮುಖಿಯಲ್ಲಿ ಹತ್ಯೆಯಾಗಿದ್ದಾನೆ. ಪುಲ್ವಾಮ ದಾಳಿಯ ಸೂತ್ರಧಾರರಲ್ಲಿ ಒಬ್ಬನಾದ ಕಮ್ರಾನ್ ಎಂಬ ಜೈಷೆ ಮುಹಮ್ಮದ್ ಭಯೋತ್ಪಾದಕನನ್ನು ಸುರಕ್ಷಾ ಸೇನೆ ಹತ್ಯೆ ಮಾಡಿದೆ. ಈತನೊಂದಿಗೆ ಇದ್ದ ಇನ್ನೊಬ್ಬ ಭಯೋತ್ಪಾದಕ ಸೇನಾ ಕಾರ್ಯಾಚರಣೆಯ ವೇಳೆ ಹತ್ಯೆಯಾದನೆಂದು ವರದಿಗಳು ತಿಳಿಸಿವೆ.

ಭಯೋತ್ಪಾದಕರ ಅಡಗು ತಾಣವಾಗಿದ್ದ ಮನೆಯನ್ನು ಭದ್ರತಾ ಪಡೆಗಳು ಸ್ಫೋಟಕಗಳಿಂದ ನಾಶಪಡಿಸಿತು. ಮನೆಯೊಳಗೆ ಅವಿತಿದ್ದ ಭಯೋತ್ಪಾದಕರು ಕೊಲ್ಲಲ್ಪಟ್ಟಿರಬಹುದು ಎಂದು ಸೇನಾಮೂಲಗಳು ತಿಳಿಸಿವೆ. ಆದರೆ ಇವರ ಮೃತದೇಹಗಳು ಪತ್ತೆಯಾಗಿಲ್ಲ.

ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆಯಲ್ಲಿ ಒಬ್ಬ ಮೇಜರ್ ಸಹಿತ ನಾಲ್ವರು ಸೈನಿಕರು ವೀರಮೃತ್ಯುವನ್ನಪ್ಪಿದ್ದರು. ಓರ್ವ ನಾಗರಿಕ ಕೂಡ ದಾಳಿಯ ವೇಳೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಇಡೀ ಪ್ರದೇಶ ಈಗ ಸುರಕ್ಷಾ ಸೇನೆಯ ನಿಯಂತ್ರಣದಲ್ಲಿದೆ. ಉಳಿದ ಭಯೋತ್ಪಾದಕರಿಗಾಗಿ ಸೈನಿಕರು ಶೋಧ ನಡೆಸುತ್ತಿದ್ದಾರೆ.