ಸನ್ಮಾರ್ಗ ವಾರ್ತೆ
ಮಲಪ್ಪುರಂ: ಕೇರಳದಲ್ಲಿ ರಾಮಾಯಣ ಮಾಸದ ಅಂಗವಾಗಿ ಡಿಸಿ ಬುಕ್ಸ್ ನಡೆಸಿದ ರಾಜ್ಯಮಟ್ಟದ ಆನ್ಲೈನ್ ರಾಮಾಯಣ ರಸಪ್ರಶ್ನೆ ಸ್ಪರ್ಧೆಯಲ್ಲಿ ಜಿಲ್ಲೆಯ ಇಬ್ಬರು ಇಸ್ಲಾಮಿಕ್ ಕಾಲೇಜು ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ.
ವಲಂಚೇರಿಯ ಮರ್ಕಝ್ನ ಕೆಕೆಎಸ್ಎಂ ಇಸ್ಲಾಮಿಕ್ ಮತ್ತು ಆರ್ಟ್ಸ್ ಕಾಲೇಜಿನಲ್ಲಿ ಎಂಟು ವರ್ಷಗಳ ವಾಫೀ ಕೋರ್ಸ್ನಲ್ಲಿ ಅಧ್ಯಯನ ನಡೆಸುತ್ತಿರುವ ಮುಹಮ್ಮದ್ ಜಾಬಿರ್ ಪಿ.ಕೆ. ಮತ್ತು ಮುಹಮ್ಮದ್ ಬಾಸಿತ್ ಎಂ ಕ್ರಮವಾಗಿ ಐದನೇ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳು. ಜುಲೈ 23 ಮತ್ತು 25ರ ನಡುವೆ ನಡೆದ ಆನ್ಲೈನ್ ರಾಮಾಯಣ ರಸಪ್ರಶ್ನೆಯ ಐವರು ವಿಜೇತರಲ್ಲಿ ಸೇರಿದ್ದಾರೆ. ಅಭಿರಾಮ್ ಎಂ.ಪಿ., ಗೀತು ಕೃಷ್ಣನ್ ಮತ್ತು ನವನೀತ್ ಗೋಪನ್ ಇತರ ಮೂವರು ವಿಜೇತರು.
ಜಾಬೀರ್ಗೆ ತನ್ನ ಜೂನಿಯರ್ ಬಾಸಿತ್ ರಸಪ್ರಶ್ನೆಯಲ್ಲಿ ಭಾಗವಹಿಸುವ ಬಗ್ಗೆ ತಿಳಿದಿರಲಿಲ್ಲ. ವಿಜೇತರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಕಂಡು ಇಬ್ಬರೂ ಆಶ್ಚರ್ಯಚಕಿತರಾದರು. ಶೀಘ್ರದಲ್ಲೇ ಅವರ ಕುಟುಂಬ, ಸ್ನೇಹಿತರು ಮತ್ತು ಶಿಕ್ಷಕರಿಂದ ಅಭಿನಂದನೆಗಳ ಮಹಾಪೂರ ಹರಿದುಬಂತು. ಅವರ ಪ್ರಾಂಶುಪಾಲರಾದ ಅಬ್ದುಲ್ ಹಕೀಮ್ ಫೈಝಿ ಅವರನ್ನು ಹುರಿದುಂಬಿಸುವಲ್ಲಿ ಮುಂಚೂಣಿಯಲ್ಲಿದ್ದರು.
ಅವರು ಕಾಲೇಜಿನಲ್ಲಿ ಓದಿದ ವಿಷಯಗಳಲ್ಲಿ ರಾಮಾಯಣವೂ ಒಂದಾದ ಕಾರಣ ಇಬ್ಬರಿಗೂ ಆತ್ಮವಿಶ್ವಾಸವಿತ್ತು. “ನಮ್ಮ ಪಠ್ಯಕ್ರಮವು ಎಲ್ಲಾ ಪ್ರಮುಖ ಧರ್ಮಗಳ ಬೋಧನೆಗಳನ್ನು ಹೊಂದಿದೆ, ವಿಶೇಷವಾಗಿ ಹಿಂದೂ ಧರ್ಮ, ಬೌದ್ಧ ಧರ್ಮ, ಜೈನ ಧರ್ಮ ಮತ್ತು ಸಿಖ್ ಧರ್ಮಗಳು ಭಾರತೀಯ ಧರ್ಮಗಳಾಗಿವೆ. ನಾವು ಕ್ರೈಸ್ತ ಧರ್ಮ, ಜುದಾಯಿಸಂ ಮತ್ತು ತಾವೊಯಿಸಂನಂತಹ ಧರ್ಮಗಳನ್ನು ಸಹ ಕಲಿಸುತ್ತೇವೆ” ಎಂದು ಅವರು ಹೇಳಿದರು.
ಇಸ್ಲಾಮಿಕ್ ಕಾಲೇಜುಗಳ ಸಮನ್ವಯ(ಸಿಐಸಿ) ಅಡಿಯಲ್ಲಿ 97 ಕ್ಯಾಂಪಸ್ಗಳು ನೀಡುವ ವಾಫೀ ಕೋರ್ಸ್, ಧಾರ್ಮಿಕ ಮತ್ತು ಲೌಕಿಕ ಶಿಕ್ಷಣದ ಸಂಯೋಜನೆಯನ್ನು ಹೊಂದಿದೆ.
ರಾಮಾಯಣ ರಸಪ್ರಶ್ನೆಯಲ್ಲಿ ಗೆದ್ದಿರುವುದು ಜಾಬೀರ್ ಮತ್ತು ಬಾಸಿತ್ರಿಗೆ ಮಹಾಕಾವ್ಯವನ್ನು ಆಳವಾಗಿ ಅಧ್ಯಯನ ಮಾಡಲು ಪ್ರೇರೇಪಿಸಿತು. “ಎಲ್ಲ ಭಾರತೀಯರು ನಮ್ಮ ನೆಲದ ಎರಡು ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತವನ್ನು ಓದಬೇಕು. ಅವು ನಮ್ಮ ಸಂಸ್ಕೃತಿಯ ಭಾಗವಾಗಿದೆ” ಎಂದು ಜಾಬೀರ್ ದ ಹಿಂದೂಗೆ ತಿಳಿಸಿದ್ದಾರೆ. ಎಸ್ಎಸ್ಎಲ್ಸಿ ಪಾಸಾದ ಬಳಿಕ 2015ರಲ್ಲಿ ವಾಫಿ ಕ್ಯಾಂಪಸ್ಗೆ ಸೇರಿದ್ದ ಅವರು ಅಂತಿಮ ವರ್ಷದ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ.
“ಎಲ್ಲಾ ಧರ್ಮಗಳು ಶಾಂತಿ ಮತ್ತು ಜನರ ಯೋಗಕ್ಷೇಮವನ್ನು ಉತ್ತೇಜಿಸುತ್ತವೆ. “ರಾಮಾಯಣ ನೋಡಿ, ಇದು ಸದ್ಗುಣದ ಮೂರ್ತರೂಪವಾದ ಶ್ರೀ ರಾಮನ ಕಥೆಯನ್ನು ಹೇಳುತ್ತದೆ. ಇದು ಸಹನೆ, ತಾಳ್ಮೆ, ಶಾಂತಿ, ಭ್ರಾತೃತ್ವ ಪ್ರೀತಿ ಹೀಗೆ ಹಲವು ವಿಷಯಗಳನ್ನು ಕಲಿಸುತ್ತದೆ” ಎಂದು ತುಲನಾತ್ಮಕ ಧರ್ಮದಲ್ಲಿ ಪರಿಣತಿ ಹೊಂದಿರುವ ಜಾಬೀರ್ ಹೇಳಿದರು.
ವಾಫೀ ಕೋರ್ಸ್ ಜಾಬೀರ್ಗೆ ರಾಮಾಯಣವನ್ನು ಕಲಿಯಲು ಪ್ರೇರಣೆ ನೀಡಿದರೆ, ಬಾಲ್ಯದ ಚಿತ್ರ ಕಥೆಗಳೇ ಬಾಸಿತ್ನನ್ನು ಮಹಾಕಾವ್ಯದತ್ತ ಆಕರ್ಷಿಸಿದವು. ಬಾಲ್ಯದಲ್ಲಿ ಓದಿದ ಕಾಮಿಕ್ ಪುಸ್ತಕಗಳು ಮತ್ತು ಚಿತ್ರ ಪುಸ್ತಕಗಳನ್ನು ಅವರು ಈಗಲೂ ಇಷ್ಟಪಡುತ್ತಾರೆ. “ಆದರೆ, ನಾನು ಈ ಕ್ಯಾಂಪಸ್ಗೆ ಬಂದಾಗ, ಎಲ್ಲಾ ಧರ್ಮಗಳ ಪುಸ್ತಕಗಳನ್ನು ಕಂಡು ಅವುಗಳನ್ನು ಓದಲು ಉತ್ಸುಕನಾದೆ” ಎಂದು ಬಾಸಿತ್ ಹೇಳುತ್ತಾರೆ.
ರಾಮಾಯಣ ಸೇರಿದಂತೆ ಇತರೆ ಧಾರ್ಮಿಕ ಗ್ರಂಥಗಳನ್ನು ಓದಲು ಪ್ರೇರೇಪಿಸಿದ್ದು ವಿಶಿಷ್ಟವಾದ ವಾಫೀ ಕೋರ್ಸ್ ಎಂದು ಇಬ್ಬರೂ ಹೇಳಿದರು. “ನಾವು ಯಾವುದೇ ಜ್ಞಾನದ ಮೂಲಕ್ಕೆ ಕುರುಡರಾಗಿರಬಾರದು, ಅದು ನಂಬಿಕೆಯಾಗಿರಲಿ ಅಥವಾ ಆಚಾರವಾಗಿರಲಿ… ಓದುವಿಕೆಯು ಇತರ ಧರ್ಮಗಳ ಬಗ್ಗೆ ನಮ್ಮ ಗೌರವವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಜಾಬೀರ್ ಹೇಳುತ್ತಾರೆ.
Two students of Islamic Studies from the KKHM Islamic and Arts College in Valanchery have become role models after emerging winners in a state-level quiz on Ramayana.#Kerala #Malappuram #Muslim #Ramayana #RamayanQuiz #WafyCourse pic.twitter.com/FSbqT9FDTW
— Hate Detector 🔍 (@HateDetectors) August 6, 2022












