ಸಾನಿಯಾರನ್ನು ತೆಲಂಗಾಣ ಬ್ರಾಂಡ್ ರಾಯಭಾರಿ ಹುದ್ದೆಯಿಂದ ತೆಗೆದು ಹಾಕಿ- ಬಿಜೆಪಿ ಶಾಸಕ

0
810

ಹೈದರಾಬಾದ್: ಟೆನಿಸ್ ತಾರೆ ಸಾನಿಯಾ ಮಿರ್ಜಾರನ್ನು ತೆಲಂಗಾಣದ ಬ್ರಾಂಡ್ ಅಂಬಾಸಡರ್ ಸ್ಥಾನದಿಂದ ತೆಗೆದುಹಾಕಬೇಕೆಂದು ಬಿಜೆಪಿಯ ಶಾಸಕ ರಾಜಾ ಸಿಂಗ್ ಆಗ್ರಹಿಸಿದ್ದಾರೆ. ತಲೆಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್‍ರಿಗೆ ಅವರು ವಿನಂತಿ ಮಾಡಿದ್ದು ರಾಜ ಸಿಂಗ್ ಘೋಷಮಂಡಲ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ.ಪಾಕಿಸ್ತಾನದ ಸೊಸೆಯಾದ್ದರಿಂದ ಅವರನ್ನು ಅಂಬಾಸಡರ್ ಸ್ಥಾನದಿಂದ ತೆರವುಗೊಳಿಸಲು ಆಗ್ರಹಿಸಿದ್ದೇನೆ ಎಂದು ರಾಜಾ ಸಿಂಗ್ ಹೇಳಿದರು.

ಸೈನಾ ನೆಹ್ವಾಲ್, ಪಿವಿ ಸಿಂಧು, ವಿವಿಎಸ್ ಲಕ್ಷ್ಮಣ್‍ರಲ್ಲಿ ಯಾರನ್ನಾದರೂ ಸಾನಿಯಾರ ಬದಲಿಗೆ ತೆಲಂಗಾಣದ ಬ್ರಾಂಡ್ ಅಂಬಾಸರ್ ಆಗಿ ಮಾಡಬಹುದು ಎಂದು ರಾಜಾಸಿಂಗ್ ತನ್ನ ಆಯ್ಕೆಯ ಪಟ್ಟಿಯನ್ನೂ ಮುಂದಿಟ್ಟಿದ್ದಾರೆ. ಪುಲ್ವಾಮ ಭಯೋತ್ಪಾದನಾ ದಾಳಿಯ ಹಿನ್ನೆಲೆಯಲ್ಲಿ ಅವರು ತನ್ನ ಬೇಡಿಕೆಯನ್ನು ಇಟ್ಟಿದ್ದಾರೆ.

ಪಾಕಿಸ್ತಾನದ ಕ್ರಿಕೆಟ್ ತಾರೆ ಶುಹೈಬ್ ಮುಲಿಕ್‌ರನ್ನು ಸಾನಿಯಾ ಮದುವೆಯಾದ ಬಳಿಕ ರಾಷ್ಟ್ರೀಯತೆಗೆ ಸಂಬಂಧಿಸಿದ ವಿವಾದದಲ್ಲಿ ಸಾನಿಯಾ ಹಲವು ರೀತಿ ವಿವಾದಕ್ಕೊಳಗಾಗಿದ್ದಾರೆ. ಕೊನೆಗೆ ಪುಲ್ವಾಮ ದಾಳಿಯನ್ನು ಖಂಡಿಸಿ ಸಾನಿಯಾ ಮಾಡಿದ ಟ್ವೀಟ್ ಕೂಡ ವಿವಾದವಾಗಿತ್ತು. ಟ್ವೀಟ್‍ನಲ್ಲಿ ಎಲ್ಲಿಯೂ ಅವರು ಪಾಕಿಸ್ತಾನವನ್ನು ಪ್ರಸ್ತಾಪಿಸಿರಲಿಲ್ಲ.