ಸನ್ಮಾರ್ಗ ವಾರ್ತೆ
ದೆಹಲಿ: ಸದ್ಯ ಮಧ್ಯಂತರ ಜಾಮೀನಿನ ಮೇಲೆ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ ರಾವ್, ಅನಾರೋಗ್ಯದ ಹಿನ್ನೆಲೆ ಸುಪ್ರೀಂ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.
ಶಾಶ್ವತ ಜಾಮೀನು ನೀಡುವಂತೆ ಕೋರಿ ಕಳೆದ ಏಪ್ರಿಲ್‌ನಲ್ಲಿ ವರವರ ರಾವ್ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿತ್ತು. ಬಾಂಬೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ವರವರ ರಾವ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ಬುಧವಾರ ವರವರ ರಾವ್ ಜಾಮೀನು ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಯುಯು ಲಲಿತ್, ಅನಿರುದ್ಧ್ ಬೋಸ್ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ, 82 ವರ್ಷದ ರಾವ್ ಅವರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
2017ರ ಡಿಸೆಂಬರ್ 31ರಂದು ಪುಣೆಯಲ್ಲಿ ನಡೆದ ಎಲ್ಗರ್ ಪರಿಷತ್ ಸಮಾವೇಶದಲ್ಲಿ ವರವರ ರಾವ್ ಮಾಡಿದ ಭಾಷಣ ಭೀಮಾ ಕೋರೆಗಾಂವ್ ಯುದ್ಧ ಸ್ಮಾರಕದ ಬಳಿ ನಡೆದ ಹಿಂಸಾಚಾರಕ್ಕೆ ಕಾರಣವಾಗಿತ್ತು ಎಂದು ಆರೋಪಿಸಿ 2018ರ ಆಗಸ್ಟ್ 28ರಂದು ಪುಣೆ ಪೊಲೀಸರು ಅವರನ್ನು ಬಂಧಿಸಿದ್ದರು.
ಮುಂಬೈನಲ್ಲೇ ನೆಲೆಸಬೇಕು, ಅನುಮತಿ ಇಲ್ಲದೆ ನಗರ ಬಿಟ್ಟು ಹೋಗದಂತೆ ವಿಶೇಷ ನ್ಯಾಯಾಲಯ ನಿರ್ದೇಶನ ನೀಡಿದೆ. ಮುಂಬೈನ ತಮ್ಮ ನಿವಾಸದಲ್ಲಿ ಸಂದರ್ಶಕರ ಸಭೆ ನಡೆಸುವುದನ್ನು ನಿರ್ಬಂಧಿಸಿದೆ. ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಾರದು. ಪ್ರಕರಣಕ್ಕೆ ಸಂಬಂಧಿಸಿದ ಸಹ ಆರೋಪಿಗಳನ್ನು ಸಂಪರ್ಕಿಸದಂತೆ ಸೂಚಿಸಿದೆ.
ಆ.10 ರಂದು ಸುಪ್ರೀಂ ಕೋರ್ಟ್ ರಾವ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಅವರ ಜಾಮೀನು ಷರತ್ತುಗಳನ್ನು ಇತ್ತೀಚೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ)ಗೆ ಸಂಬಂಧಿಸಿದ ವಿಶೇಷ ಕೋರ್ಟ್ ವಿಚಾರಣೆ ಸಂದರ್ಭ ನಿಗದಿ ಮಾಡಿದ್ದು, ಅದರ ವಿವರಗಳು ಶನಿವಾರ ಲಭ್ಯವಾಗಿವೆ.
ಎನ್‌ಐಎ ನ್ಯಾಯಾಲಯದ ಅನುಮತಿ ಇಲ್ಲದೆ ನಗರ ಬಿಟ್ಟು ಹೋಗುವಂತಿಲ್ಲ. ತಾವು ವಾಸವಿರುವ ನಿವಾಸದ ಪೂರ್ಣ ವಿಳಾಸ, ಸಂಪರ್ಕ ಸಂಖ್ಯೆ, ಮೂವರು ನಿಕಟ ಸಂಬಂಧಿಗಳು ಮತ್ತು ಅವರೊಂದಿಗೆ ವಾಸವಿರುವ ವ್ಯಕ್ತಿಗಳ ಸಂಪರ್ಕ ಸಂಖ್ಯೆ ನೀಡಬೇಕು. ಮಾಧ್ಯಮಗಳಿಗೆ ಯಾವುದೇ ಹೇಳಿಕೆ ನೀಡಬಾರದು ಎಂದು ಕೋರ್ಟ್ ಸೂಚಿಸಿದೆ.












