ಪ್ರಾರ್ಥನೆ ಮುಗಿಸಿ ಮಸೀದಿಯಿಂದ ಮನೆಗೆ ಹೊರಟಿದ್ದ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆಗೈದ ಇಸ್ರೇಲ್ ಸೈನಿಕರು

0
299

ಸನ್ಮಾರ್ಗ ವಾರ್ತೆ

ತೂಬಸ್: ಫೆಲಸ್ತೀನಿನ ಈಶಾನ್ಯ ಪಶ್ಚಿಮ ದಂಡೆಯಲ್ಲಿರುವ  ತೂಬಸ್ ‌ನಗರ ಪ್ರದೇಶದ ಮೇಲೆ ದಾಳಿ ನಡೆಸಿದ ಇಸ್ರೇಲ್‌ ಸೇನೆ ಫೆಲೆಸ್ತೀನಿಯನ್ ವ್ಯಕ್ತಿಯೊಬ್ಬರನ್ನು ಗುಂಡಿಕ್ಕಿ ಹತ್ಯೆಗೈದಿದೆ. ಶುಕ್ರವಾರ ಬೆಳಗ್ಗೆ ‌58 ವರ್ಷದ ವ್ಯಕ್ತಿಯ ತಲೆಗೆ  ಇಸ್ರೇಲ್ ಸೈನಿಕರು ಗುಂಡು ಹಾರಿಸಿದ್ದಾರೆ. ಆ ಬಳಿಕ ವ್ಯಕ್ತಿಯು  ಕೊನೆಯುಸಿರೆಳೆದಿದ್ದಾಗಿ  ಫೆಲೆಸ್ತೀನ್ ಆರೋಗ್ಯ ಸಚಿವಾಲಯ ತಿಳಿಸಿದೆ.

ಮೃತ ವ್ಯಕ್ತಿಯು ತನ್ನ ಮನೆ ಸಮೀಪದ ಮಸೀದಿಯಲ್ಲಿ ಮುಂಜಾನೆಯ ಪ್ರಾರ್ಥನೆ ಸಲ್ಲಿಸಿ ಮನೆಗೆ ಮರಳುತ್ತಿದ್ದ  ವೇಳೆ ಅವರ ಮೇಲೆ ಗುಂಡು ಹಾರಿಸಲಾಗಿದೆ ಎಂದು ಫೆಲೆಸ್ತೀನ್ ಸರ್ಕಾರಿ ಸುದ್ದಿ ಸಂಸ್ಥೆ ವರದಿ ಮಾಡಿದೆ.  ಗುಂಡಿನ ದಾಳಿಗೆ ಒಳಗಾಗುವ ಮೊದಲು, ನಿರಾಯುಧರಾಗಿದ್ದ ವ್ಯಕ್ತಿಯು ಅಂಗಡಿಯೊಂದನ್ನು ಪ್ರವೇಶಿಸುತ್ತಿರುವುದು ವೀಡಿಯೊದಲ್ಲಿ ಕಂಡು ಬಂದಿದೆ.

ಶುಕ್ರವಾರ ಮುಂಜಾನೆ ಇಸ್ರೇಲ್‌ ಸೈನಿಕರು ತೂಬಸ್ ಪ್ರದೇಶದ ಮೇಲೆ ದಾಳಿ ನಡೆಸಿದರು. ತೂಬಸ್ ಗ್ರಾಮದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದಾಗ ಹಲವು ಆಯುಧಧಾರಿ ವ್ಯಕ್ತಿಗಳು ಇಸ್ರೇಲ್‌ ಸೈನಿಕರತ್ತ ಗುಂಡು ಹಾರಿಸಿದ್ದಾರೆ ಸೈನಿಕರು ಅವರನ್ನು ಗುರಿಯಾಗಿಸಿ ಪ್ರತಿದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಇಸ್ರೇಲ್ ಸೇನೆ ಹೇಳುತ್ತಿದೆ.

ಈ ಮೊದಲು ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು, ಐವರು ಅಪ್ರಾಪ್ತರು ಸಾವನ್ನಪ್ಪಿದ್ದಾಗಿ ವರದಿಯಾಗಿತ್ತು. ಈ ದಾಳಿಯ ಕುರಿತಾಗಿ ಫೆಲೆಸ್ತೀನ್ ಮಾನವ ಹಕ್ಕುಗಳ ಸಂಘಟನೆ ಮತ್ತು ಇಸ್ರೇಲ್‌ ಸುದ್ದಿ ಪತ್ರಿಕೆ ವರದಿ ಪ್ರಕಟಿಸಿದ್ದು, ಇದು ಭೀಕರ ಕೃತ್ಯ ಎಂದು ಹೇಳಿದೆ. ಆದರೆ, ಇಸ್ರೇಲ್‌ ಸೇನೆ ಈ ಕುರಿತಾಗಿ ಹೇಳಿಕೆ ನೀಡಿದ್ದು, ಪ್ಯಾಲೆಸ್ತೇನ್ ಇಸ್ಲಾಮಿಕ್ ಜಿಹಾದಿ ಸೇನಾ ಗುಂಪಿನಿಂದ ತಪ್ಪಾಗಿ ಕ್ಷಿಪಣಿಗಳು ಸಿಡಿದಿರುವ ಕಾರಣ ಈ ಘಟನೆ ನಡೆದಿರಬಹುದು ಎಂದು ಹಾರಿಕೆಯ ಉತ್ತರ ನೀಡಿದೆ.