ಸನ್ಮಾರ್ಗ ವಾರ್ತೆ
ಚಂಡೀಗಡ: ಕೆಲವು ಕ್ರೈಸ್ತ ಮಿಷನರಿಗಳು ಸಿಖ್ಖರನ್ನು ಓಲೈಸಿ ಬಲವಂತದ ಮತಾಂತರ ನಡೆಸುತ್ತಿದ್ದಾರೆ. ಪಂಜಾಬಿನ ಸಿಖ್ಖರು ಮತ್ತು ಹಿಂದೂಗಳನ್ನು ತಪ್ಪುದಾರಿಗಳೆದು ಅವರು ಕ್ರೈಸ್ತರನ್ನಾಗಿಸುತ್ತಿದ್ದಾರೆ. ಇವೆಲ್ಲವೂ ಸರಕಾರದ ಮೂಗಿನ ನೇರಕ್ಕೆ ನಡೆಯುತ್ತಿದೆ. ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಅಂಧ ವಿಶ್ವಾಸಗಳ ವಿರುದ್ಧ ಪ್ರಕರಣ ದಾಖಲಿಸಲು ಭಾರತದ ಕಾನೂನಿನಲ್ಲಿ ವ್ಯವಸ್ಥೆ ಇದ್ದರೂ ವೋಟ್ ಬ್ಯಾಂಕ್ ರಾಜಕೀಯದ ಕಾರಣದಿಂದಾಗಿ ಯಾವ ಸರಕಾರವೂ ಅದರ ವಿರುದ್ಧ ಕ್ರಮ ಜರಗಿಸುತ್ತಿಲ್ಲ ಎಂದು ಸಿಖ್ಖರ ಅಧಿಕೃತ ನಾಯಕ ಗ್ಯಾನಿ ಹರ್ಪ್ರೀತ್ ಸಿಂಗ್ ಹೇಳಿದರು.
ಈ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲವೆಂದ ಅವರು, ಈ ಕುರಿತು ಚರ್ಚಿಸಲು ಸೆಪ್ಟಂಬರ್ 5 ರಂದು ಸಭೆ ಕರೆದಿರುವೆ ಎಂದು ತಿಳಿಸಿದರು.
ಪಂಜಾಬಿನಲ್ಲಿ ಮತಾಂತರ ವಿರುದ್ಧ ಕಾನೂನು ಜಾರಿಗೆ ಬರಲು ಆಗ್ರಹಿಸುವ ಬಗ್ಗೆಯೂ ಸಿಖ್ ಸಮುದಾಯ ಗಂಭೀರವಾಗಿ ಚಿಂತಿಸಬೇಕಾಗಿದೆ ಎಂದು ಅವರು ಹೇಳಿದರು.
ನಾವು ಇದುವರೆಗೆ ಇಂತಹ ಕಾನೂನು ಬಯಸಿರಲಿಲ್ಲ. ಅದು ಅಗತ್ಯವಿಲ್ಲ ಎಂಬುದು ನಮ್ಮ ನಂಬಿಕೆಯಾಗಿತ್ತು. ಆದರೆ, ಇವತ್ತು ಇಂತಹ ಕಾನೂನಿಗಾಗಿ ಆಗ್ರಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ಯಾನಿ ಹರ್ಪ್ರೀತ್ ಸಿಂಗ್ ಹೇಳಿದರು.












