ಮುರುಘಾಶ್ರೀ ಲೈಂಗಿಕ ದೌರ್ಜನ್ಯ ಪ್ರಕರಣ: ‘ಒಡನಾಡಿ’ಗೆ ಬೆಂಬಲ ನೀಡಿ ‘ಬಸವಶ್ರೀ ಪ್ರಶಸ್ತಿ’ ವಾಪಸ್‌ ಮಾಡಿದ ಹಿರಿಯ ಪತ್ರಕರ್ತ ಪಿ ಸಾಯಿನಾಥ್

0
443

ಸನ್ಮಾರ್ಗ ವಾರ್ತೆ

ದೆಹಲಿ: ಹಿರಿಯ ಪತ್ರಕರ್ತ ಮತ್ತು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ ಸಂಸ್ಥಾಪಕ ಪಿ ಸಾಯಿನಾಥ್‌ ಅವರು ಚಿತ್ರದುರ್ಗದ ಮುರುಘಾ ಮಠ 2017ರಲ್ಲಿ ನೀಡಿದ್ದ ‘ಬಸವಶ್ರೀ ಪ್ರಶಸ್ತಿ’ ಹಿಂದಿರುಗಿಸಿದ್ದಾರೆ.

ಚಿತ್ರದುರ್ಗದ ಮುರುಘಾಮಠದ ಮಠಾಧೀಶರಾದ ಶಿವಮೂರ್ತಿ ಮುರುಘಾ ಶರಣರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಚಾರವೆಸಗಿರುವ ಆರೋಪ ಎದುರಿಸುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಯ ಹಿನ್ನೆಲೆಯಲ್ಲಿ ಪಿ ಸಾಯಿನಾಥ ಅವರು ಮಠ ತಮಗೆ 2017ರಲ್ಲಿ ನೀಡಿದ್ದ ‘ಬಸವಶ್ರೀ ಪ್ರಶಸ್ತಿ’ ಮತ್ತು ಐದು ಲಕ್ಷ ರೂ ಹಣವನ್ನು ವಾಪಸ್‌ ನೀಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ಚಿತ್ರದುರ್ಗದ ಮಠಾಧೀಶರಾದ ಶಿವಮೂರ್ತಿ ಮುರುಘಾ ಶರಣರ ಕುರಿತ ಭೀಕರ ಬೆಳವಣಿಗೆಗಳ ಬಗೆಗಿನ ಮಾಧ್ಯಮಗಳ ವರದಿಗಳನ್ನು ತಿಳಿದು ತುಂಬಾ ವಿಚಲಿತನಾಗಿದ್ದೇನೆ. ಪ್ರೌಢಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪವನ್ನು ಅವರು ಎದುರಿಸುತ್ತಿದ್ದಾರೆ. ಅವರ ಮೇಲೆ ಪೋಕ್ಸೋ ಮತ್ತು ಎಸ್‌ಸಿ, ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಮಕ್ಕಳ ಮೇಲಿನ ಅಪರಾಧ ಖಂಡಿಸಲು ನನಗೆ ಬಲವಾದ ಪದಗಳೇ ಸಿಗುತ್ತಿಲ್ಲ” ಎಂದು ಬರೆದಿದ್ದಾರೆ.

“ಈ ಪ್ರಕರಣದಲ್ಲಿ ನೊಂದವರ ನ್ಯಾಯಕ್ಕಾಗಿ, 2017ರಲ್ಲಿ ಮಠವು ನನಗೆ ನೀಡಿದ ಬಸವಶ್ರೀ ಪ್ರಶಸ್ತಿ ಮತ್ತು ಐದು ಲಕ್ಷ ಬಹುಮಾನ ಮೊತ್ತ ಹಿಂದಿರುಗಿಸುತ್ತೇನೆ” ಎಂದು ಪ್ರಶಸ್ತಿ ಮರಳಿಸಿದ್ದಾರೆ.

ಇಂತಹ ಕೃತ್ಯಗಳನ್ನು ಬೆಳಕಿಗೆ ತರುವ ಮೈಸೂರು ಮೂಲದ ‘ಒಡನಾಡಿ’ ಸಂಸ್ಥೆಯ ಬಗ್ಗೆ ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ. ತನಿಖೆಯಲ್ಲಿ ರಾಜ್ಯ ಸರ್ಕಾರ ರಾಜಿಯಾಗದೆ ಮುಕ್ತ ತನಿಖೆಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ. 12ನೇ ಶತಮಾನದ ಸಮಾಜ ಸುಧಾರಕ ಅಣ್ಣ ಬಸವಣ್ಣನ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. 1997ರಿಂದ ಮುರುಘಾ ಮಠ ಈ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ.