ಪತ್ರಕರ್ತ ಸಿದ್ದೀಕ್ ಕಾಪ್ಪನ್‍ರಿಗೆ ಜಾಮೀನು ನಿಲ್ಲಲು ಮುಂದೆ ಬಂದ ಲಕ್ನೋ ವಿವಿ ಮಾಜಿ ಉಪಕುಲಪತಿ ಪ್ರೊ. ರೂಪರೇಖಾ ವರ್ಮ

0
321

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಉತ್ತರ ಪ್ರದೇಶ ಪೊಲೀಸರು ಬಂಧಿಸಿ ಭಯೋತ್ಪಾದನೆ ವಿರೋದಿ ಕಾನೂನಿನಡಿಯಲ್ಲಿ ಯುಎಪಿಎ ಹೊರಿಸಿ ಎರಡು ವರ್ಷಗಳಿಂದ ಜೈಲಿಗೆ ತಳ್ಳಲ್ಪಟ್ಟಿರುವ ಪತ್ರಕರ್ತ ಸಿದ್ದೀಕ್ ಕಾಪ್ಪನ್‍ರಿಗೆ ಜಾಮೀನು ನಿಲ್ಲಲು ಲಕ್ನೊದ ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ, 79 ವರ್ಷದ ಪ್ರೋ.ರೂಪರೇಖಾ ವರ್ಮ ಮುಂದೆ ಬಂದಿದ್ದಾರೆ.

ಒಂದು ಲಕ್ಷ ರೂಪಾಯಿ, ತಲಾ ಇಬ್ಬರು ಉತ್ತರಪ್ರದೇಶದ ವ್ಯಕ್ತಿಗಳು ಜಾಮೀನು ನೀಡಬೇಕೆಂದು ಎನ್‍ಐಎ ಕೋರ್ಟು ತೀರ್ಮಾನಿಸಿದ್ದು ಕಾಪ್ಪನ್‌ರ ಬಿಡುಗಡೆಗೆ ಅಡ್ಡಿಯಾಗಿತ್ತು. ಸಾಮಾಜಿಕ ಮಧ್ಯಸ್ಥಿಕೆಗಳ ಮೂಲಕ ಹಲವಾರು ಪ್ರಶಸ್ತಿಗಳನ್ನು ಗೆದ್ದಿರುವ ರೂಪರೇಖಾ ವರ್ಮ ಕಾಪ್ಪನ್‌ರಿಗೆ ಜಾಮೀನು ನಿಲ್ಲಲು ಮುಂದೆ ಬಂದಿದ್ದಾರೆ.

“ಈ ಕರಾಳ ಯುಗದಲ್ಲಿ ಒಬ್ಬರಿಂದ ಮಾಡಲು ಸಾಧ್ಯವಿರುವ ಅತ್ಯಂತ ಚಿಕ್ಕ ಕೆಲಸ ಇದೆಂದು” ದಿಲ್ಲಿಯಿಂದ ಲಕ್ನೊಕ್ಕೆ ಆಗಮಿಸಿದ ವಕೀಲ ಕೆ.ಎಸ್. ಮುಹಮ್ಮದ್ ಡಾನಿಷ್‍ರಿಗೆ ರೂಪರೇಖ ವರ್ಮ ಹೇಳಿದರು.

ರಿಹಾಯಿ ಮಂಚ್ ಎಂಬ ಸಂಘಟನೆಯ ಮಧ್ಯಪ್ರವೇಶದ ನಂತರ ರಿಯಾಜುದ್ದೀನ್‍ ಕೂಡ ಕಾಪ್ಪನ್‌ರಿಗೆ ಜಾಮೀನು ನೀಡಲು ಇಚ್ಛೆ ವ್ಯಕ್ತಪಡಿಸಿದ್ದಾರೆ. ಇಬ್ಬರು ಉತ್ತರಪ್ರದೇಶದ ವ್ಯಕ್ತಿಗಳು ಸಿದ್ದೀಕ್ ಕಾಪ್ಪನ್‍ರಿಗೆ ಜಾಮೀನು ನೀಡಬೇಕೆಂದು ಎನ್‍ಐಎ ಕೋರ್ಟು ಶರತ್ತು ವಿಧಿಸಿತ್ತು. ಇಂದು ಮಂಗಳವಾರ ಸಿದ್ದೀಕ್‍ರಿಗೆ ಜಾಮೀನು ದೊರಕುವ ನಿರೀಕ್ಷೆಯಿದೆ. ಸಿದ್ದೀಕ್ ಬಿಡುಗಡೆಯ ವಿಷಯದಲ್ಲಿ ಒಂದು ವಾರದಿಂದ ಡಾನಿಷ್ ಲಕ್ನೊದಲ್ಲಿದ್ದಾರೆ.

ಯುಎಪಿಎ ಪ್ರಕರಣದಲ್ಲಿ ಮೂರು ದಿವಸದೊಳಗೆ ವಿಚಾರಣಾ ಕೋರ್ಟಿಗೆ ಹಾಜರು ಪಡಿಸಿ ಜಾಮೀನು ಮೇರೆಗೆ ಬಿಡುಗಡೆಗೊಳಿಸಬೇಕೆಂದು ಸುಪ್ರೀಂ ಕೋರ್ಟ್ ಚೀಫ್ ಜಸ್ಟಿಸ್ ಯುಯು ಲಲಿತ್ ಅಧ್ಯಕ್ಷತೆಯ ಪೀಠ ಸೆಪ್ಟಂಬರ್ 9ರಂದು ಆದೇಶಿಸಿತ್ತು.

ಈ ತೀರ್ಪಿನ ಆಧಾರದಲ್ಲಿ ಯುಪಿ ಪೊಲೀಸರು ಸಿದ್ದೀಕ್‍ರನ್ನು ಲಕ್ನೊ ಎನ್‌ಐಎ ಕೋರ್ಟಿನಲ್ಲಿ ಹಾಜರುಪಡಿಸಿದಾಗ ಒಂದು ಲಕ್ಷ ರೂಪಾಯಿ ಹಾಗೂ ಇಬ್ಬರು ಉತ್ತರ ಪ್ರದೇಶದವರೇ ಜಾಮೀನು ನಿಲ್ಲಬೇಕೆಂಬ ನಿಬಂಧನೆಯನ್ನು ವಿಧಿಸಿತ್ತು.

ಉತ್ತರ ಪ್ರದೇಶದವರ ಬದಲು ಸಿದ್ದೀಕ್‍ರ ಪತ್ನಿ ರೈಹಾನ ಮತ್ತು ಸಿದ್ದೀಕ್‍ರ ಸಹೋದರ ಜಾಮೀನು ನೀಡುತ್ತಾರೆಂದು ತಿಳಿಸಿದರೂ ಕೋರ್ಟು ಒಪ್ಪಲಿಲ್ಲ. ಉತ್ತರ ಪ್ರದೇಶದ ನಿವಾಸಿಗಳೇ ಆಗಬೇಕೆಂದು ಕೋರ್ಟು ನಿಬಂಧನೆ ಹಾಕಿತ್ತು. ಈ ಹಿನ್ನೆಲೆಯಲ್ಲಿ ರೂಪರೇಖಾ ವರ್ಮ ಮತ್ತು ರಿಯಾಜುದ್ದೀನ್ ಜಾಮೀನು ನಿಲ್ಲಲು ಮುಂದೆ ಬಂದಿದ್ದಾರೆ.