ಸನ್ಮಾರ್ಗ ವಾರ್ತೆ
ನಾಗ್ಪುರ: ಮಾವೋವಾದಿಗಳೊಂದಿಗೆ ಸಂಬಂಧ ಪ್ರಕರಣದಲ್ಲಿ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರೊಫೆಸರ್ ಜಿ.ಎನ್ ಸಾಯಿಬಾಬಾ ಅವರನ್ನು ಶುಕ್ರವಾರ ಬಾಂಬೆ ಹೈಕೋರ್ಟ್ನ ನಾಗ್ಪುರ ಪೀಠ ಖುಲಾಸೆಗೊಳಿಸಿದ್ದು, ಕೂಡಲೇ ಅವರನ್ನು ಜೈಲಿನಿಂದ ಬಿಡುಗಡೆ ಗೊಳಿಸುವಂತೆ ಆದೇಶಿಸಿದೆ.
2017ರ ವಿಚಾರಣಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಜಿ.ಎನ್ ಸಾಯಿಬಾಬಾ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ರೋಹಿತ್ ದೇವ್ ಮತ್ತು ಅನಿಲ್ ಪನ್ಸಾರೆ ಅವರ ವಿಭಾಗೀಯ ಪೀಠವು ಪುರಸ್ಕರಿಸಿದೆ.
ಪ್ರಕರಣದ ಇತರ ಐವರು ಅಪರಾಧಿಗಳ ಮೇಲ್ಮನವಿಯನ್ನು ಪೀಠವು ಅಂಗೀಕರಿಸಿದ್ದು, ಅವರನ್ನೂ ಖುಲಾಸೆಗೊಳಿಸಿದೆ. ಐವರಲ್ಲಿ ಒಬ್ಬರ ಮೇಲ್ಮನವಿಯ ವಿಚಾರಣೆ ಬಾಕಿ ಉಳಿದಿದೆ. ಅಪರಾಧಿಗಳು ಬೇರೆ ಯಾವುದೇ ಪ್ರಕರಣದಲ್ಲಿ ಆರೋಪಿಗಳಾಗಿರದಿದ್ದರೆ ಅವರನ್ನು ಕೂಡಲೇ ಜೈಲಿನಿಂದ ಬಿಡುಗಡೆ ಮಾಡುವಂತೆ ಪೀಠವು ಸೂಚಿಸಿದೆ.
ಶೇ.90 ರಷ್ಟು ದೈಹಿಕ ನ್ಯೂನತೆ ಹೊಂದಿರುವ ಮತ್ತು ಹಲವು ರೋಗಗಳಿಗೆ ತುತ್ತಾಗಿರುವ 47 ವರ್ಷ ಪ್ರಾಯದ ಡಾ.ಜಿ.ಎನ್. ಸಾಯಿಬಾಬಾ ಮಾವೋವಾದಿಗಳೊಂದಿಗೆ ಸಂಪರ್ಕ ಹೊಂದಿದ ಆರೋಪದ ಮೇಲೆ 2017ರಲ್ಲಿ ಗಡ್ಚಿರೋಲಿ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೊಳಗಾಗಿದ್ದರು. ಅವರಿಗೆ ಕೊರೋನ ವೈರಸ್ ಸಾಂಕ್ರಾಮಿಕ ಕಾಲದಲ್ಲಿಯೂ ಸಹ ಮೆಡಿಕಲ್ ಪೆರೋಲ್ ಸಿಕ್ಕಿರಲಿಲ್ಲ. ಗಾಲಿಕುರ್ಚಿಯಲ್ಲಿರುವ ಜಿಎನ್ ಸಾಯಿಬಾಬಾ ಅವರು ಪ್ರಸ್ತುತ ನಾಗ್ಪುರ ಕೇಂದ್ರ ಕಾರಾಗೃಹದಲ್ಲಿದ್ದಾರೆ.












