1967ರಿಂದ 219 ಫೆಲಸ್ತೀನ್ ಕೈದಿಗಳು ಇಸ್ರೇಲಿ ಜೈಲಿನಲ್ಲಿ ಸಾವನ್ನಪ್ಪಿದ್ದಾರೆ ಎಂದು ಮಾನವ ಹಕ್ಕುಗಳ ಗುಂಪು ಹೇಳಿದೆ. ಇವರಲ್ಲಿ, ಸಮರ್ಪಕ ಆರೋಗ್ಯ ಕಾಳಜಿಯಿಲ್ಲದೆ 60 ಜನರು ಮೃತಪಟ್ಟರೆ, 78 ಮಂದಿ ಉದ್ದೇಶಪೂರ್ವಕವಾಗಿ ಕೊಲೆಗೈಯಲ್ಪಟ್ಟಿದ್ದಾರೆ, 74 ಮಂದಿ ಚಿತ್ರಹಿಂಸೆಗೊಳಗಾಗಿ ಸಾವಿಗೀಡಾಗಿದ್ದಾರೆ ಮತ್ತು ಏಳು ಮಂದಿ ಗುಂಡೇಟಿಗೊಳಗಾಗಿ ಸಾವನ್ನಪ್ಪಿದ್ದಾರೆ ಎಂದು ಸಫಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಫೆಲೆಸ್ತೀನ್ ಮತ್ತು ಅರಬ್ ಖೈದಿಗಳ ಹಕ್ಕುಗಳಿಗಾಗಿ ಹೋರಾಡುವ ಹಲವಾರು ಹಕ್ಕುಗಳ ಗುಂಪುಗಳ ನಿರ್ದೇಶಕರ ಸಂದರ್ಶನಗಳನ್ನು ಆಧರಿಸಿ ತಯಾರಿಸಲಾದ ವರದಿಯ ಪ್ರಕಾರ, ಇಸ್ರೇಲಿ ಜೈಲಿನಲ್ಲಿ ಪ್ರಸ್ತುತ ಸ್ತ್ರೀಯರು ಮತ್ತು ಪುರುಷರು ಸೇರಿ ವೈದ್ಯಕೀಯ ಆರೈಕೆಯ ಅಗತ್ಯವಿರುವ 750 ಫೆಲಸ್ತೀನಿ ಕೈದಿಗಳಿದ್ದಾರೆ ಎಂದು ಸಫಾ ಹೇಳಿದೆ.
ತನಿಖೆಯ ಸಮಯದಲ್ಲಿ ಫೆಲಸ್ತೀನಿ ಕೈದಿಗಳು ಚಿತ್ರಹಿಂಸೆಗೆ ಗುರಿಯಾಗುತ್ತಾರೆ ಮತ್ತು ಉದ್ದೇಶಪೂರ್ವಕ ವೈದ್ಯಕೀಯ ನಿರ್ಲಕ್ಷ್ಯ ಜೈಲಿನಲ್ಲಿರುವವರೆಗೂ ಮುಂದುವರಿಯುತ್ತದೆ ಎಂದು ಅದು ಹೇಳಿದೆ.
ಈ ತಿಂಗಳ ಆರಂಭದಲ್ಲಿ ಇಸ್ರೇಲಿ ಜೈಲಿನಲ್ಲಿ ಇಬ್ಬರು ಫೆಲಸ್ತೀನಿ ಕೈದಿಗಳು ಮೃತಪಟ್ಟರು. ಇಬ್ಬರೂ ಹಲವಾರು ಕಾಯಿಲೆಗಳಿಂದ ಬಳಲಿ ಮರಣ ಹೊಂದಿದ್ದರೆಂದು ಸಫಾ ವರದಿ ಮಾಡಿದೆ. ಅವರಲ್ಲಿ ಒಬ್ಬರಾದ ಪರಸ್ ಬಾರೌದ್ ಅವರು 28 ವರ್ಷಗಳನ್ನು ಕಾರಾಗೃಹದಲ್ಲಿ ಕಳೆದಿದ್ದರು. ಅವರ ಸಾವಿಗೂ ಒಂದು ದಿನ ಮೊದಲು, ಅವರು ತಮ್ಮ ಕುಟುಂಬಿಕರಲ್ಲಿ ತನಗೆ ತುರ್ತು ವೈದ್ಯಕೀಯ ಚಿಕಿತ್ಸೆ ನಿರಾಕರಿಸಿರುವುದರ ಬಗ್ಗೆ ತಿಳಿಸಿದ್ದರು.
ಪ್ರಿಸನರ್ಸ್ ಸೆಂಟರ್ ಫಾರ್ ಸ್ಟಡೀಸ್ ನಿರ್ದೇಶಕ ರಾಫಾತ್ ಹಮ್ದೌನಾ ಹೇಳುತ್ತಾರೆ- ವೈದ್ಯಕೀಯ ನಿರ್ಲಕ್ಷ್ಯದ ಇಸ್ರೇಲಿ ನೀತಿಯು ನಾಲ್ಕು ಅಂಶಗಳನ್ನು ಒಳಗೊಂಡಿದೆ : ಸರಿಯಾದ ವೈದ್ಯಕೀಯ ಪರೀಕ್ಷೆಯ ಉದ್ದೇಶಪೂರ್ವಕ ಕೊರತೆ, ಸರಿಯಾದ ಔಷಧಿಗಳ ಕೊರತೆ, ಪ್ರಯೋಗಾಲಯ ಪರೀಕ್ಷೆಗಳ ಕೊರತೆ ಮತ್ತು ತುರ್ತು ಶಸ್ತ್ರಚಿಕಿತ್ಸೆಗಳನ್ನು ಮುಂದೂಡುವುದು.
ಫೆಲೆಸ್ತೀನ್ ಆರೋಗ್ಯ ಸಚಿವಾಲಯವು ಔಷಧಿಗಳನ್ನು ಫೆಲೆಸ್ತೀನ್ ಕೈದಿಗಳಿಗೆ ರವಾನಿಸುವುದನ್ನು ಇಸ್ರೇಲಿ ಅಧಿಕಾರಿಗಳು ತಡೆಗಟ್ಟುತ್ತಿದ್ದಾರೆ ಎಂದು ಅವರು ಹೇಳಿದರು.
ಸ್ವಾತಂತ್ರ್ಯ ಮತ್ತು ನಾಗರಿಕ ಹಕ್ಕುಗಳ ರಕ್ಷಣಾ ನಿರ್ದೇಶಕ, ಹೆಲ್ಮಿ ಅಲ್-ಅರಜ್ ಹೇಳುತ್ತಾರೆ- 16 ಮಂದಿ ಕ್ಯಾನ್ಸರ್ ರೋಗಿಗಳೂ ಸೇರಿದಂತೆ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ 750 ಕೈದಿಗಳು ಇಸ್ರೇಲಿ ಜೈಲಿನಲ್ಲಿದ್ದಾರೆ.
ಅವರು ಹೇಳುತ್ತಾರೆ- ಈ ಸಂಖ್ಯೆಯಲ್ಲಿ 2015 ರ ನಂತರ ಗಾಯಗೊಂಡ 87 ಪುರುಷ ಮತ್ತು ಸ್ತ್ರೀ ಕೈದಿಗಳು ಒಳಗೊಂಡಿದ್ದಾರೆ. ಹಕ್ಕುಗಳ ಗುಂಪುಗಳು ನೀಡಿದ ಸಂಖ್ಯೆಗಳ ಪ್ರಕಾರ, 22 ಇಸ್ರೇಲಿ ಜೈಲುಗಳಲ್ಲಿ 6,000 ಫೆಲೆಸ್ತೀನಿ ಕೈದಿಗಳಿದ್ದಾರೆ. ಇದರಲ್ಲಿ 250 ಮಕ್ಕಳು, 49 ಮಹಿಳೆಯರು ಮತ್ತು ಬಾಲಕಿಯರು ಸೇರಿದ್ದಾರೆ. 26 ಮಂದಿ ಜೀವಾವಧಿ ಶಿಕ್ಷೆಯನ್ನು ಎದುರಿಸುತ್ತಿದ್ದಾರೆ.
ಕೃಪೆ:Memo












