ಸನ್ಮಾರ್ಗ ವಾರ್ತೆ
ಬೆಂಗಳೂರು: ರಾಜ್ಯದಲ್ಲಿ ನಾಳೆ ರಿಂದ ಹಾಲು ಮತ್ತು ಮೊಸರಿನ ಬೆಲೆ ಏರಿಕೆ ಮಾಡುವ ಸರ್ಕಾರದ ನಿರ್ಧಾರವನ್ನು ಖಂಡಿಸಿದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹೀರ್ ಹುಸೇನ್, ರಾಜ್ಯ ಸರ್ಕಾರ ಜನಸಾಮಾನ್ಯರ ಗಾಯದ ಬರೆ ಹಾಕಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಮಾತನಾಡಿದ ಅವರು, ಗುರುವಾರದಿಂದ ರಾಜ್ಯಾದ್ಯಂತ ಹಾಲು, ಮೊಸರಿನ ಬೆಲೆ ಏರಿಕೆ ಮಾಡುತ್ತಿರುವುದಾಗಿ ಕೆಎಂಎಫ್ ಪ್ರಕಟಣೆ ನೀಡಿರುವುದು ಜನಸಾಮಾನ್ಯರಿಗೆ ಮತ್ತಷ್ಟು ಹೊರೆಯಾಗಿದೆ. ದಿನನಿತ್ಯದ ವಸ್ತುಗಳ ಮೇಲೆ ಸರಕಾರ ಈಗಾಗಲೇ ತೆರಿಗೆ ಹಾಕಿ ಹಾಗೂ ಬೆಲೆ ಹೆಚ್ಚಳ ಮಾಡಿ ಸಾಕಷ್ಟು ತೊಂದರೆ ಅನುಭವಿಸುವಂತೆ ಮಾಡಿದೆ. ಈಗ ಈ ನಿರ್ಧಾರದಿಂದ ಬಡವರ ಮೇಲೆ ಇನ್ನಷ್ಟು ಹೊರೆ ಆಗಲಿದೆ, ಉಳ್ಳವರಿಗೆ ಮಣೆ ಹಾಕುತ್ತಾ, ಬಡವರ ಮೇಲೆ ಶೋಷಣೆ ನಡೆಸುತ್ತಿರುವುದನ್ನು ಸರಕಾರ ಕೂಡಲೇ ನಿಲ್ಲಿಸಬೇಕು ಬೆಲೆ ಏರಿಕೆಯ ಈ ನಿರ್ಧಾರ ಕೂಡಲೇ ವಾಪಸ್ ಪಡೆಯಬೇಕು ಎಂದು ಅವರು ಆಗ್ರಹಿಸಿದರು.
ಬೆಲೆ ಏರಿಕೆಯಿಂದ ಆಗುವ ಹೆಚ್ಚುವರಿ ಲಾಭ ರೈತರಿಗೆ ಹಂಚಲಾಗುವುದು ಎಂದು ಹೇಳಿ ಸರ್ಕಾರ ರೈತರ ಹಾಗೂ ಸಾಮಾನ್ಯ ಜನರ ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ ರೈತರಿಗೆ ಪ್ರೋತ್ಸಾಹ ಧನ ನೀಡಿ, ಸಾರ್ವಜನಿಕರ ಮೇಲೆ ಹೊರೆ ಆಗದಂತೆ ನಿರ್ಧಾರ ತಗೆದುಕೊಳ್ಳಬೇಕು ಎಂದು ಅವರು ಸರ್ಕಾರಕ್ಕೆ ಒತ್ತಾಯ ಮಾಡಿದರು.












