ಸನ್ಮಾರ್ಗ ವಾರ್ತೆ
ಮಂಗಳೂರು: ನಗರದ ಸುರತ್ಕಲ್ ಟೋಲ್ಗೇಟ್ ತೆರವಿಗೆ ಹೆದ್ದಾರಿ ಪ್ರಾಧಿಕಾರದ ಆದೇಶವು ಇನ್ನು ಮೂರ್ನಾಲ್ಕು ದಿನಗಳಲ್ಲಿ ತಲುಪಲಿದೆ. ಆದೇಶ ಸಿಕ್ಕಿದ ಕೂಡಲೇ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಅಲ್ಲಿಯವರೆಗೆ ಎಲ್ಲರೂ ಸಹಕರಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ರವಿಕುಮಾರ್ ಎಂ ಆರ್ ಹೇಳಿದ್ದಾರೆ.
ಜಾತ್ಯಾತೀತ ಪಕ್ಷಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳ ಜಂಟಿ ವೇದಿಕೆಯ ನಿಯೋಗ ಬುಧವಾರ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿದೆ.

“ಟೋಲ್ಗೇಟ್ ತೆರವುಗೊಳಿಸುವುದಾಗಿ ಸಂಸದರು ಟ್ವೀಟ್ ಮಾಡಿ ಹತ್ತು ದಿನ ಕಳೆದಿದೆ. ಆದರೂ ಟೋಲ್ಗೇಟ್ನಲ್ಲಿ ಸುಲಿಗೆ ನಿಂತಿಲ್ಲ. ಕೂಡಲೇ ಕ್ರಮ ಕೈಗೊಳ್ಳಬೇಕು” ಎಂದು ನಿಯೋಗದ ಪದಾಧಿಕಾರಿಗಳು ಈ ವೇಳೆ ಒತ್ತಾಯಿಸಿದ್ದಾರೆ.
ನಿಯೋಗದ ಆಕ್ಷೇಪ, ಬೇಡಿಕೆಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು ಸಕಾರಾತ್ಮವಾಗಿ ಸ್ಪಂದಿಸಿದ್ದಾರೆ. ಆದೇಶ ಪತ್ರ ಬರಲು ಇನ್ನೂ ಮೂರ್ನಾಲ್ಕು ದಿನ ತೆಗೆದುಕೊಳ್ಳಬಹುದು. ಅಲ್ಲಿಯವರೆಗೆ ನಿಮ್ಮ ಸಹಕಾರ ಬೇಕೆಂದಿದ್ದಾರೆ” ಎಂದು ಜಂಟಿ ವೇದಿಕೆ ತಿಳಿಸಿದೆ.
ಜಿಲ್ಲಾಧಿಕಾರಿ ಜೊತೆಗಿನ ಸಭೆಯಲ್ಲಿ ವೇದಿಕೆಯ ಅಧ್ಯಕ್ಷ ಮಾಜಿ ಸಚಿವ ಬಿ ರಮಾನಾಥ ರೈ, ಸಿಪಿಎಂ ಜಿಲ್ಲಾ ಮುಖಂಡರಾದ ಯಾದವ ಶೆಟ್ಟಿ, ಸುನಿಲ್ ಕುಮಾರ್ ಬಜಾಲ್, ಕಾಂಗ್ರೆಸ್ ಪಕ್ಷದ ಶಾಲೆಟ್ ಪಿಂಟೊ, ರಾಜ್ಯ ರೈತ ಸಂಘದ ಓಸ್ವಾಲ್ಡ್ ಫರ್ನಾಂಡೀಸ್, ಸನ್ನಿ ಡಿಸೋಜ, ದಲಿತ ಸಂಘರ್ಷ ಸಮಿತಿಯ ಜೆಡಿಎಸ್ ನ ವಸಂತ ಪೂಜಾರಿ, ಎಂ ದೇವದಾಸ್ ಉಪಸ್ಥಿತರಿದ್ದರು.












