ರೈತರ ಆದಾಯ ದುಪ್ಪಟ್ಟಾಗುವ ಬದಲು ಸಮಸ್ಯೆ ದ್ವಿಗುಣವಾಗಿದೆ- ತಾಹೀರ್ ಹುಸೇನ್
ಬೆಂಗಳೂರು(ಸನ್ಮಾರ್ಗ ವಾರ್ತೆ): ದೇಶದ ಬೆನ್ನೆಲುಬಾಗಿರುವ ರೈತರು ಸಮಸ್ಯೆಯ ಸುಳಿಯಲ್ಲಿ ನಲುಗುತ್ತಿದ್ದಾರೆ. ರೈತರ ಬದುಕು ಹಸನಾಗಲು ಸರಕಾರ ಅನ್ನದಾತರ ಬೇಡಿಕೆಗಳನ್ನು ಈಡೇರಿಸಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹೀರ್ ಹುಸೇನ್ ಆಗ್ರಹಿಸಿದರು.
ನಗರದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು. ರೈತ ದಿನಾಚರಣೆಯ ನಿಮಿತ್ತ ಸರಕಾರಕ್ಕೆ ಹಕ್ಕೊತ್ತಾಯ ಪತ್ರ ಸಲ್ಲಿಸಿ, ಭಾರತದ ರೈತಾಪಿ ಜನತೆ ಹತ್ತಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಆಳುವ ಸರಕಾರಗಳು ರೈತರ ಬಗ್ಗೆ ಒಂದಿಷ್ಟೂ ಕಾಳಜಿಯನ್ನು ತೋರಿಸದೆ ಸಂಪೂರ್ಣವಾಗಿ ಅಲಕ್ಷತೆಯನ್ನೇ ಪ್ರದರ್ಶಿಸುತ್ತಲಿದೆ.
ಪಂಜಾಬ, ಹರಿಯಾಣ ಒಳಗೊಂಡು ದೇಶದ ರೈತರು ದೆಹಲಿ ಗಡಿಗಳಲ್ಲಿ ವರ್ಷದುದ್ದಕ್ಕೂ ಹೋರಾಡಿದ ಸಂದರ್ಭದಲ್ಲಿ ನೀಡಿದ ವಾಗ್ದಾನವನ್ನು ನೆರವೇರಿಸಲು ಸರಕಾರದಿಂದ ಸಾಧ್ಯವಾಗದೆ ಹೋಗಿದೆ. ರೈತರ ಬೆಳೆಗಳಿಗೆ ಸೂಕ್ತವಾದ ಬೆಲೆ ಒಳಗೊಂಡು ಸಮಸ್ಯೆಗಳ ಪರಿಹಾರಕ್ಕೆ ಸ್ವಾಮಿನಾಥನ್ ಆಯೋಗ ಸಾಕಷ್ಟೂ ಶಿಫಾರಸುಗಳನ್ನು ಮಾಡಿದಾಗ್ಯೂ ಜಾರಿಗೊಳಿಸಲು ಸರ್ಕಾರ ಮೀನಾಮೇಷ ಎಣಿಸುತ್ತಿರುವುದರ ಹಿಂದೆ ಕಾರ್ಪೊರೇಟ್ ಬಂಡವಾಳದ ಹಿಡಿತವಿರುವುದು ಜಗಜ್ಜಾಹಿರಾಗಿದೆ.ರೈತರ ಸಾಗುವಳಿ ಭೂಮಿಗೆ ಪಟ್ಟ ಒದಗಿಸಲು ಕಳೆದ 40-50 ವರ್ಷದಿಂದಲೂ ಸಾದ್ಯವಾಗದೆ ಹೋಗುತ್ತಿರುವುದು ಈ ದೇಶದ ದೊಡ್ಡ ದುರಂತವಾಗಿದೆ.
ರಾಜ್ಯದ ಕಬ್ಬು ಬೆಳೆಗಾರರ ಬಾಕಿ ಹಣ 1914.22 ಕೋಟಿ ಇದೇ, ರೈತರು ಬಾಕಿ ಪಾವತಿಗಾಗಿ ಹೋರಾಟ ಮಾಡುತಿದ್ದರು ಕಾರ್ಖಾನೆ ಮಾಲೀಕರು ಹಣ ನೀಡುತ್ತಿಲ್ಲ. ಕಾನೂನಿನ ಪ್ರಕಾರ ಕಬ್ಬು ಸರಬರಾಜು ಮಾಡಿದ 14 ದಿನದ ಒಳಗೆ ಹಣ ಪಾವತಿ ಮಾಡಬೇಕು. ಆದರೆ ವರುಷ ಕಳೆದರೂ ರೈತರಿಗೆ ಅವರ ಹಣ ಸಿಗುತ್ತಿಲ್ಲ ಇದರ ಬಗ್ಗೆ ಸರ್ಕಾರವು ಮೌನ ವಹಿಸುತ್ತಿದೆ.
ಸಮಗ್ರ ಭೂ ಸುಧಾರಣೆ ಮಾತ್ರ ಭೂ ವಂಚಿತರ ಗೋಳು ನಿವಾರಿಸಲಿದೆ. ವಸತಿಯ ಹಕ್ಕನ್ನು ರೈತರಿಗೆ ಒದಗಿಸಲೇಬೇಕಿದೆ. ನೀರಾವರಿ ವಂಚಿತ ಸಾಗುವಳಿ ಭೂಮಿಗೆ ನೀರು ಹರಿಸುವ ಪ್ರಾಮಾಣಿಕ ಪ್ರಯತ್ನಗಳು ಜರುಗದೆ ಹೋಗುತ್ತಲಿವೆ. ಎಪಿಎಂಸಿಯ ನಿರ್ವಹಣೆ ಖಾಸಗೀಕರಣಗೊಳ್ಳುತ್ತಲಿರುವುದು ಅಪಾಯದ ಸಂಕೇತವಾಗಿದೆ. ವಿದ್ಯುತ್ ಸರಬರಾಜು ಇದರಿಂದೇನು ಹೊರತಾಗಿ ಉಳಿಯಲ್ಪಟ್ಟಿಲ್ಲ. ರೈತರ ಆತ್ಮಹತ್ಯೆಗಳನ್ನು ತಡೆಗಟ್ಟುವ ಯಾವ ಕಾರ್ಯಭಾರಗಳು ಸರ್ಕಾರದ ಬಳಿ ಇಲ್ಲವಾಗಿವೆ. ರೈತ ಹಾಗೂ ರೈತ ಮಹಿಳೆಯರ ಮೇಲಿನ ಹಲ್ಲೆ ಹತ್ಯೆಗಳು ನಿರಂತರಗೊಳ್ಳುತ್ತಿರುವುದು ಪರಿಸರ ವಿನಾಶಕಾರಿ ಕಾರ್ಪೊರೇಟ್ ಲೂಟಿಯು ಕೃಷಿ ವಲಯದ ಮೇಲಿನ ಅತ್ಯಾಚಾರವೇ ಆಗಿದೆ ಎಂಬ ಆತಂಕ ವ್ಯಕ್ತಪಡಿಸಿದರು.
ಇತ್ತೀಚೆಗೆ ಎನ್ಸಿಆರ್ಬಿ ವರದಿಯನ್ನು ಉಲ್ಲೇಖಿಸಿ 2020–21ರಲ್ಲಿ ಕರ್ನಾಟಕದಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಶೇ. 19.9 ರಷ್ಟಿದ್ದು ದೇಶದಲ್ಲೇ 2 ನೇ ಸ್ಥಾನದಲ್ಲಿದೆ ಎಂಬ ವರದಿ ಪ್ರಕಟವಾಗಿದೆ. ಆ ವರದಿಯ ಪ್ರಕಾರ ದೇಶದ ಒಟ್ಟು 10,881 ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಶೇ 19.9 ರಷ್ಟು 2,165 ಆತ್ಮಹತ್ಯೆಗಳು ರಾಜ್ಯದಲ್ಲಿ ಸಂಭವಿಸಿರಬೇಕು. ವಾಸ್ತವದಲ್ಲಿ ಆ ಸಾಲಿನಲ್ಲಿ ರಾಜ್ಯದಲ್ಲಿ 719 ರೈತರ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ.
ಅದೇ ರೀತಿ 2014–15 ರಲ್ಲಿ 93, 2015–16 ರಲ್ಲಿ 1062, 2016–17 ರಲ್ಲಿ 932, 2017–18 ರಲ್ಲಿ 1052, 2018–19 ರಲ್ಲಿ 868, 2019–20 ರಲ್ಲಿ 882, 2020–21 ರಲ್ಲಿ 566, 2021–22 ರಲ್ಲಿ 719 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದೆ ಎಂದು ಅಂಕಿ ಅಂಶಗಳ ಸಮೇತ ವಿವರಿಸಿದರು.
ಹಕ್ಕೊತ್ತಾಯಗಳು
- ಎಂ.ಎಸ್. ಸ್ವಾಮಿನಾಥನ್ ಆಯೋಗದ ವರದಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು.
- ಸಮಗ್ರ ಭೂ ಸುಧಾರಣೆ ಮೂಲಕ ಭೂ ಹಂಚಿಕೆ ನೀತಿ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಪ್ರತಿ ಕುಟುಂಬಕ್ಕೆ ತಲಾ 5 ಎಕರೆ ಭೂಮಿ ಹಂಚಿಕೆ ಮಾಡಿಕೊಡಬೇಕು.
- ಭೂಮಿ ಮತ್ತು ವಸತಿ ವಂಚಿತರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಿಕೊಡಬೇಕು.
- 40-50 ವರ್ಷಗಳಿಂದ ಭೂಮಿ ಸಾಗುವಳಿ ಮಾಡುವ ರೈತರಿಗೆ ಕೂಡಲೇ ಪಟ್ಟಾ ಒದಗಿಸಿಕೊಡಬೇಕು.
- ಕೃಷಿ ಉತ್ಪನ್ನಗಳಿಗೆ ಉತ್ಪಾದನಾ ವೆಚ್ಚ ಆದರಿಸಿ ಬೆಲೆ ನಿಗದಿ ಮಾಡಿ ಕೊಡಬೇಕು.
ನೀರಾವರಿ ವಂಚಿತ ರೈತರ ಸಾಗುವಳಿ ಭೂಮಿಗೆ ನೀರು ಒದಗಿಸಿಕೊಡಬೇಕು.
ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿಯ ರಾಜ್ಯಾಧ್ಯಕ್ಷರಾದ ಅಡ್ವೋಕೇಟ್ ತಾಹೀರ್ ಹುಸೇನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲ ಖಾನ್, ಮಹಿಳಾ ವಿಭಾಗದ ರಾಜ್ಯಾಧ್ಯಕ್ಷ ತಲತ್ ಯಾಸ್ಮಿನ್, ಮುಖಂಡರಾದ ರಿಯಾಜ್ ಪಾಷಾ, ಮೊಹಮ್ಮದ್ ಫಜಲ್ ಹುಸೇನ್, ಹುಸೇನ್, ಇಲಿಯಾಸ್ ಸೇರಿದಂತೆ ಮುಂತಾದವರು ಇದ್ದರು.













