ಸನ್ಮಾರ್ಗ ವಾರ್ತೆ
ಜೈಪುರ: ಜನ್ ಆಕ್ರೋಶ್ ಯಾತ್ರೆಯನ್ನು ಸ್ಥಗಿತಗೊಳಿಸಿದ ಕೆಲವೇ ಗಂಟೆಗಳಲ್ಲಿ ಬಿಜೆಪಿ ತನ್ನ ನಿಲುವು ಬದಲಿಸಿದೆ. ಯಾತ್ರೆ ಸ್ಥಗಿತಗೊಂಡಿದ್ದರೂ ಇದರ ಅಂಗವಾಗಿ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುವ ಸಾರ್ವಜನಿಕ ಕಾರ್ಯಕ್ರಮಗಳು ಮುಂದುವರಿಯಲಿವೆ ಎಂದು ಬಿಜೆಪಿ ಘೋಷಿಸಿದೆ. ಕೋವಿಡ್ ಪ್ರೋಟೋಕಾಲ್ ಪ್ರಕಾರ ಕಾರ್ಯಕ್ರಮಗಳು ನಡೆಯಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರು ಸ್ಪಷ್ಟನೆ ನೀಡಿದ್ದಾರೆ. ಜನ್ ಆಕ್ರೋಶ್ ಯಾತ್ರೆಗೆ ಸಂಬಂಧಿಸಿದಂತೆ ಗೊಂದಲ ಉಂಟಾಗಿದೆ ಎಂದು ಸತೀಶ್ ಪೂನಿಯಾ ಹೇಳಿದ್ದಾರೆ. ಈಗ ಅದು ಸ್ಪಷ್ಟವಾಗಿದೆ. ಯಾತ್ರೆಯ ಅಂಗವಾದ ಪೂರ್ವನಿಯೋಜಿತಗೊಳಿಸಲಾದ ‘ಜನ್ ಆಕ್ರೋಶ್’ ಸಭೆಗಳನ್ನು ಹಾಗೆಯೇ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಡಿಸೆಂಬರ್ ಒಂದರಿಂದ ಜನವರಿ 14ರವರೆಗೆ ರಾಜಸ್ಥಾನದಲ್ಲಿ ಜನ್ ಆಕ್ರೋಶ್ ಯಾತ್ರೆ ನಡೆಯುತ್ತಿದೆ. ದೇಶದಲ್ಲಿ ಕೊರೋನ ಭೀತಿ ಇರುವುದರಿಂದ ಜನ್ ಆಕ್ರೋಶ್ ಯಾತ್ರೆ ರದ್ದುಪಡಿಸಿದ್ದಾಗಿ ಬಿಜೆಪಿ ತಿಳಿಸಿತ್ತು. ಆದರೆ, ಈ ಹಿಂದೆ ಭಾರತ್ ಜೋಡೋ ಯಾತ್ರೆ ತಡೆಯುವ ನಿಟ್ಟಿನಲ್ಲಿ ಕೊರೋನ ಕುರಿತ ಭೀತಿಯನ್ನು ಸೃಷ್ಟಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.












