ಸನ್ಮಾರ್ಗ ವಾರ್ತೆ
ದಮಾಮ್: ಕಳೆದ 15 ವರ್ಷಗಳಿಂದ ಭಾರತಕ್ಕೆ ಮರಳಲಾಗದೆ ಸೌದಿಯಲ್ಲಿ ಸಿಲುಕಿಕೊಂಡಿದ್ದ ಮೇಜರ್ ಸಿಂಗ್ರಿಗೆ ಇಬ್ಬರು ಪಾಕಿಸ್ತಾನಿ ಪ್ರಜೆಗಳು ಚಾಚಿದ ಸಹಾಯ ಹಸ್ತವು ತಾಯ್ನಾಡಿಗೆ ಮರಳುವ ಭಾಗ್ಯವನ್ನು ಕಲ್ಪಿಸಿದೆ. ಕುರುಬ್ ಮತ್ತು ಟ್ರಾಫಿಕ್ ಕೇಸಿಗೆ ಗುರಿಯಾಗಿ ಊರಿಗೆ ಮರಳಲಾಗದ ಪಂಜಾಬಿನ ಮೇಜರ್ ಸಿಂಗ್ರವರು ಇಬ್ಬರು ಪಾಕಿಸ್ತಾನೀಯರು ಹಾಗೂ ಕೇರಳದ ಕೆಲ ಸಾಮಾಜಿಕ ಕಾರ್ಯಕರ್ತರ ನೆರವಿನಿಂದ ಊರಿಗೆ ಮರಳಿದ್ದಾರೆ.
ಆರಂಭದಲ್ಲಿ ದಮಾಮ್ನ ಓರ್ವ ಪ್ರಾಯೋಜಕನ ಬಳಿ ಉದ್ಯೋಗ ಮಾಡುತ್ತಿದ್ದರು. ಪ್ರಾಯೋಜಕತ್ವ ಅಸಿಂಧುವಾಗಿ ಹತ್ತು ವರ್ಷಗಳಿಂದ ಇಖಾಮವನ್ನು ನವೀಕರಿಸಿರಲಿಲ್ಲ. ಈ ನಡುವೆ ತನ್ನಿಂದ ತಪ್ಪಿಸಿಕೊಂಡು ಹೋಗಿದ್ದಾನೆಂದು ಪ್ರಾಯೋಜಕನು ಸಿಂಗ್ ವಿರುದ್ಧ ದಾವೆ ಹೂಡಿದ್ದನು. ಈ ಪ್ರಕರಣದಿಂದಾಗಿ ಜೈಲು ಪಾಲಾಗಿದ್ದ ಸಿಂಗ್ರವರು ಸಾರ್ವತ್ರಿಕ ಕ್ಷಮಾದಾನ ದೊರೆತು ಊರಿಗೆ ತೆರಳಲು 2017ರಲ್ಲಿ ಎಕ್ಸಿಟ್ ವೀಸಾದಲ್ಲಿ ಹೇಗಾದರೂ ಊರಿಗೆ ಮರಳಬೇಕೆಂದು ರಿಯಾದ್ ಏರ್ಪೋರ್ಟ್ಗೆ ತೆರಳಿದರು. ಆದರೆ ಅವರ ಪ್ರಯಾಣಕ್ಕೆ ಸಂಚಾರಿ ನಿಯಮೋಲ್ಲಂಘನೆ ಪ್ರಕರಣವು ಪ್ರಯಾಣಕ್ಕೆ ಅಡ್ಡಿಯಾಯ್ತು. ಇದರಿಂದಾಗಿ ಅಧಿಕಾರಿಗಳು ಅವರನ್ನು ಮತ್ತೆ ಹಿಂದೆ ಕಳುಹಿಸಿದರು.
ಈ ನಡುವೆ ಮಧುಮೇಹ ಬಾಧಿತರಾದ ಸಿಂಗ್ರ ಎರಡೂ ಕಾಲುಗಳಲ್ಲಿ ಗಾಯವಾಗಿ ಕೀವು ತುಂಬಿಕೊಂಡಿತು. ಆಗ ಈರ್ವರು ಪಾಕಿಸ್ತಾನೀ ಪ್ರಜೆಗಳು ಸಿಂಗ್ರ ನೆರವಿಗೆ ಧಾವಿಸಿದರು. ಸಿಂಗ್ರನ್ನು ತಮ್ಮ ವಾಸಸ್ಥಳಕ್ಕೆ ಕರೆದೊಯ್ದು ಸತತ ಎರಡು ವರ್ಷಗಳ ಕಾಲ ಶುಶ್ರೂಷೆಗೈದರು. ಸಿಂಗ್ರಿಗೆ ಇಕಾಮ, ಇನ್ಶೂರೆನ್ಸ್ ಯಾವುದು ಇಲ್ಲದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಅಡ್ಡಿ ಎದುರಾಗಿತ್ತು. ಒಂದು ವರ್ಷದ ಕಾಲ ಪಾಕಿಸ್ತಾನೀ ಪ್ರಜೆಗಳು ಸಿಂಗ್ರ ಶುಶ್ರೂಷೆ ಮಾಡಿದರೂ ಫಲ ಕಾಣಲಿಲ್ಲ, ಕೊನೆಗೆ ಅವರು ದಾರಿ ಕಾಣದೆ ಭಾರತೀಯ ರಾಯಭಾರ ಕಚೇರಿಗೆ ಸಿಂಗ್ರ ಕುರಿತು ವಿಷಯ ಮುಟ್ಟಿಸಿದರು. ರಾಯಭಾರ ಕಚೇರಿಯ ನಿರ್ದೇಶನದ ಅನ್ವಯ ಕೇರಳದ ಶಿಹಾಬ್ ಎಂಬ ಸಾಮಾಜಿಕ ಕಾರ್ಯಕರ್ತರ ಮುಖಾಂತರ ಶಿಫಾ ಅಲ್ ಜಝೀರಾ ಎಂಬ ಆಸ್ಪತ್ರೆಗೆ ಸಿಂಗ್ರನ್ನು ದಾಖಲಿಸಲಾಯಿತು.
ಆಸ್ಪತ್ರೆಯಲ್ಲಿ ರೋಗ ಉಲ್ಬಣದಿಂದಾಗಿ ಕಾಲು ಕತ್ತರಿಸಲೇಬೇಕೆಂದಾಗ “ದಯವಿಟ್ಟು ನನ್ನ ಕಾಲನ್ನು ಕತ್ತರಿಸಬೇಡಿ” ಎಂದು ಮೇಜರ್ ಸಿಂಗ್ ಅತ್ತು ಗೋಗರೆದುದನು ಕಂಡು ಕೊನೆಗೆ ಒಂದು ಕಾಲಿನ ಮೂರು ಬೆರಳುಗಳು ಹಾಗೂ ಮತ್ತೊಂದು ಕಾಲಿನ ಎರಡು ಬೆರಳನ್ನು ಕತ್ತರಿಸಲಾಯಿತು. ನಂತರ ಅಲ್ಲಿಂದ ಊರಿಗೆ ಮರಳಲು ರಾಯಭಾರ ಕಚೇರಿ ಅನುಮತಿ ನೀಡಿತು. ರಾಯಭಾರ ಕಚೇರಿಯ ಅಧಿಕಾರಿಗಳು ದಮಾಮ್ನ ಟ್ರಾಫಿಕ್ ಕಚೇರಿಯಲ್ಲಿನ ಹಳೆಯ ದಾವೆ ಬಗ್ಗೆ ಪರಿಶೀಲಿಸಿದಾಗ ಅದು ಸುಳ್ಳು ದಾವೆ ಎಂಬುದು ಅರಿವಿಗೆ ಬಂತು. ಇದರೊಂದಿಗೆ ದಮ್ಮಾಮ್ನ ಅಧಿಕಾರಿಗಳಿಂದಲೂ ಸಿಂಗ್ರಿಗೆ ಊರಿಗೆ ತೆರಳಲು ಅನುಮತಿ ಲಭಿಸಿತು.
ಭಾರತಕ್ಕೆ ಮರಳುವಾಗ ತನಗೆ ನೆರವಾದ ಈರ್ವರು ಪಾಕಿಸ್ತಾನೀ ಪ್ರಜೆಗಳಿಗೆ ಕೃತಜ್ಞತೆ ಸಲ್ಲಿಸಲು ಹೋಗಿ ಮತ್ತೆ ವಿಮಾನ ನಿಲ್ದಾಣಕ್ಕೆ ಬಂದಾಗ ವಿಮಾನ ಅದಾಗಲೇ ಹಾರಿಯಾಗಿತ್ತು. ಈ ಸಂಕಷ್ಟದ ಸನ್ನಿವೇಶದಲ್ಲಿ ಮತ್ತೊಮ್ಮೆ ಸಾಮಾಜಿಕ ಕಾರ್ಯಕರ್ತ ಶಿಹಾಬ್ರವರು ವಿಮಾನದ ಟಿಕೆಟ್ ಖರೀದಿಸಿ ಸಿಂಗ್ರ ಸುಗಮ ಪ್ರಯಾಣಕ್ಕೆ ನೆರವಾದರು. ಈ ಮಾನವೀಯ ಸೇವೆಯಲ್ಲಿ ಭಾರತದ ಲೋಕನಾಥ್, ಅನೀಶ್ ಎಂಬ ಸಾಮಾಜಿಕ ಕಾರ್ಯಕರ್ತರೂ ಶಿಹಾಬ್ರವರ ಜೊತೆಗೆ ಕೈಜೋಡಿಸಿದ್ದಾರೆ.












