ಲೇಖಕಿ: ಖದೀಜ ನುಸ್ರತ್
ಪ್ರತಿಯೊಬ್ಬ ವಿದ್ಯಾರ್ಥಿಗಳ ಜೀವನದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ತರಗತಿಗಳು ಒಂದು ನಿರ್ಧಾರ ತೆಗೆದುಕೊಳ್ಳುವ ಪ್ರಮುಖ ವರ್ಷವಾಗಿದೆ. ಮಕ್ಕಳು ಯಾವ ಕೋರ್ಸುಗಳನ್ನು ಕಲಿಯಬೇಕು ಮತ್ತು ನಾನು ಭವಿಷ್ಯದಲ್ಲಿ ಏನಾಗಬೇಕೆಂದು ತೀರ್ಮಾನಿಸುವಂತಹ ಅತ್ಯಂತ ನಿರ್ಣಾಯಕ ಘಟ್ಟವಾಗಿದೆ. ಆಧುನಿಕ ಕಾಲದಲ್ಲಿ ಇದು ಅತ್ಯಂತ ಕ್ಲಿಷ್ಟಕರವಾದ ಕೆಲಸವಾಗಿದೆ. ಏಕೆಂದರೆ ವಿದ್ಯಾಭ್ಯಾಸ ಕ್ಷೇತ್ರದಲ್ಲಿ ಲೆಕ್ಕವಿಲ್ಲದಷ್ಟು ಕೋರ್ಸುಗಳು ಮತ್ತು ವೃತ್ತಿಯನ್ನು ಆಯ್ಕೆ ಮಾಡುವಂತಹ ಅವಕಾಶಗಳಿವೆ. ಹೆತ್ತವರು ಮತ್ತು ಮಕ್ಕಳು ವೃತ್ತಿಯನ್ನು ಆಯ್ಕೆ ಮಾಡುವ ವಿಷಯದಲ್ಲಿ ಗೊಂದಲಕ್ಕೊಳಗಾಗುತ್ತಾರೆ.
ಕೋರ್ಸ್ ಮತ್ತು ವೃತ್ತಿಯ ಆಯ್ಕೆಯೆಂಬುದು ಅವರ ಪ್ರತಿಭೆ, ಕಲೆ, ಕೌಶಲ್ಯ, ಅರ್ಹತೆ, ಜ್ಞಾನ, ಆಸಕ್ತಿ, ಸಾಮರ್ಥ್ಯ, ಬುದ್ಧಿ ಶಕ್ತಿ, ಅಭಿರುಚಿ ಎಲ್ಲಕ್ಕಿಂತಲೂ ಮಿಗಿಲಾಗಿ ಅವರ ವ್ಯಕ್ತಿತ್ವಕ್ಕೆ ಸರಿಹೊಂದಬೇಕು. ಒಮ್ಮೆ ಕೋರ್ಸ್ ಆಯ್ಕೆ ಮಾಡಿದ ನಂತರ ಅವರು ಅದರಲ್ಲಿ ಸಂತೃಪ್ತರಾಗಿರಬೇಕು. ಅದರಲ್ಲಿ ಸ್ವಯಂಬೆಳವಣಿಗೆ ಹೊಂದಲು ಅವಕಾಶವಿರಬೇಕು. ಮುಂದೆ ಅವರು ಸಮಾಜದಲ್ಲಿ ಅವರ ವೃತ್ತಿಯಿಂದಲೇ ಗುರುತಿಸಲ್ಪಡುತ್ತಾರೆ. ಸಾಮಾಜಿಕ ಪ್ರತಿಷ್ಠೆ, ಗೌರವ, ವಿವಾಹದಲ್ಲೂ ಅದು ಪ್ರಮುಖ ಪಾತ್ರ ವಹಿಸುತ್ತದೆ. ಅವರ ಸಾಮಾಜಿಕ ಮತ್ತು ಕೌಟುಂಬಿಕ ಜೀವನದ ವಿಜಯವೆಂಬುದು ಕೂಡಾ ಹೆಚ್ಚಿನ ಸಮಯದಲ್ಲಿ ಅವರು ಆಯ್ದು ಕೊಳ್ಳುವ ವೃತ್ತಿಯನ್ನು ಅವಲಂಬಿಸಿರುತ್ತದೆ. ಮಕ್ಕಳ ಸೋಲು ಗೆಲುವು ಅವರಲ್ಲಿರುವ ಅರಿವು, ಸಾಮರ್ಥ್ಯವನ್ನು ಯಾವ ರೀತಿ ಉಪಯೊಗಿಸುತ್ತಾರೆಂಬ ಮನೋಭಾವವನ್ನು ಅವಲಂಬಿಸಿರುತ್ತದೆ. ಒಂದೋ ಅವರು ಉದ್ಯೋಗಿಯಾಗಿರಬಹುದು ಅಥವಾ ಉದ್ಯೋಗದಾತರಾಗಬಹುದು. ಅವರ ಜೀವನದ ಬಹುದೊಡ್ಡ ಸಮಯ ಅದರಲ್ಲೇ ಕಳೆಯುತ್ತಾರೆ.
ವರದಿಗಳು ತಿಳಿಸುವಂತೆ ಹೆಚ್ಚಿನವರು ತಮ್ಮ ವೃತ್ತಿಯಲ್ಲಿ ಸಂತೃಪ್ತರಲ್ಲ. ಕಲಿತು ಉದ್ಯೋಗಕ್ಕೆ ಪ್ರವೇಶಿಸಿದ ನಂತರ ಅದು ಕಲಿಯಬೇಕಿತ್ತು, ಇದು ಕಲಿತಿದ್ದರೆ ಉತ್ತಮ ಅವಕಾಶವಿರುತ್ತಿತ್ತು, ಉತ್ತಮ ಸಂಬಳ ಸಿಗುತ್ತಿತ್ತು ಎಂದು ಆಲೋಚಿಸುವವರೇ ಹೆಚ್ಚು. ಆದುದರಿಂದ ವೃತ್ತಿಯನ್ನು ಆಯ್ಕೆ ಮಾಡುವುದರ ಮೊದಲೇ ಮುಂದೇನು ಎಂಬ ಸೂಕ್ತ ಮನೋಭಾವ, ಸಾಮರ್ಥ್ಯಗಳ ಬಗ್ಗೆ ಸ್ವಯಂ ಅನ್ವೇಷಣೆ ನಡೆಸಬೇಕು. ಭಾಷಾ ಪಾಂಡಿತ್ಯ, ಮಾತನಾಡುವ ಕೌಶಲ್ಯ, ನಿರೂಪಣಾ ರೀತಿ, ಲೆಕ್ಕಪರಿಶೋಧಕ ಅರ್ಹತೆ, ಸೃಜನಶೀಲತೆ, ನಿರ್ಧಾರ ಮಾಡುವ ಸಾಮರ್ಥ್ಯ ಇತ್ಯಾದಿಗಳನ್ನು ಪರಿಗಣಿಸಿ ಅವರ ನೈಪುಣ್ಯವನ್ನು ಕಂಡು ಹಿಡಿಯಬೇಕು. ಮುಂದೆ ಅವರು ಯಾವ ವಿಷಯಗಳನ್ನೆಲ್ಲ ಕಲಿಯಲಿದ್ದಾರೆಂದು ಅವರಿಗೆ ತಿಳಿದಿರಬೇಕು. ಅವರಿಗೆ ಆಸಕ್ತಿಯಿಲ್ಲದ ವಿಷಯಗಳನ್ನು ಕಲಿಯಲು ಒತ್ತಾಯಿಸಬಾರದು. ಆದುದರಿಂದ ಕೋರ್ಸ್ ಮತ್ತು ವೃತ್ತಿಯನ್ನು ಬಹಳ ವ್ಯವಸ್ಥಿತವಾಗಿ ತಜ್ಞರ ಮಾರ್ಗಸೂಚಿ, ಆಪ್ತ ಸಮಾಲೋಚನೆ ಮತ್ತು ಸಲಹೆಗಳೊಂದಿಗೆ ಆಯ್ಕೆ ಮಾಡಬೇಕು. ಓರ್ವ ಕೌನ್ಸಿಲರನ್ನು ಭೇಟಿಯಾದ ನಂತರವೂ ನಿರ್ಧಾರ ಕೈಗೊಳ್ಳುವುದರಲ್ಲಿ ಗೊಂದಲಕ್ಕೀಡಾದರೆ ಬೇರೊಬ್ಬ ಕೌನ್ಸಿಲರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿರಿ. ಮಕ್ಕಳ ಅರ್ಹತೆ ಮತ್ತು ಸಾಮರ್ಥ್ಯವನ್ನು ಕಂಡು ಹಿಡಿಯಲು ವಿವಿಧ ತರದ ಯೋಗ್ಯತಾ ಪರೀಕ್ಷೆ (Aptitude test) ಮಾರುಕಟ್ಟೆಯಲ್ಲಿ ಲಭ್ಯವಿದೆ.
ಮನಮೋಹಕ ಹೆಸರಿನಿಂದ ಆಕರ್ಷಣೆಯಾಗಿ ಕೋರ್ಸ್ ಆಯ್ಕೆ ಮಾಡಬಾರದು. ಯಾವುದೇ ವೃತ್ತಿಯನ್ನು ಪ್ರತಿಷ್ಠೆಯ ಉದ್ಯೋಗ ಹೆಚ್ಚು ಹಣ ಸಂಪಾದಿಸಬಹುದೆಂಬ ಉದ್ದೇಶದಿಂದಲೂ ಆಯ್ಕೆ ಮಾಡಬೇಡಿರಿ. ಮಕ್ಕಳು ಆಯ್ಕೆ ಮಾಡುವ ವೃತ್ತಿಯ ಕ್ಷೇತ್ರದಲ್ಲಿ ಅಲ್ಲಿರುವ ಜನರೊಂದಿಗೆ ಮಾನಸಿಕವಾಗಿ ಹೊಂದಿಕೊಳ್ಳಲೂ ತಯಾರಿರಬೇಕು. ಅವರು ಮಾಡುವ ಉದ್ಯೋಗದಲ್ಲಿ ಆಸಕ್ತಿ ಮತ್ತು ಉತ್ಸಾಹವಿರಬೇಕು. ಎಲ್ಲವನ್ನೂ ಇಷ್ಟದಿಂದ ಮಾಡಬೇಕು. ಅವರು ಕಲಿಯುವ ವೃತ್ತಿಯಲ್ಲಿ ಮುಂದೆ ರೋಗಿ, ಗ್ರಾಹಕರು, ಕಾರ್ಮಿಕರ ಜೊತೆಯಲ್ಲಿ ಮಾನವೀಯತೆಯೊಂದಿಗೆ ವ್ಯವಹರಿಸುತ್ತಾ ಮುಂದುವರೆಯಲು ತಯಾರಿರಬೇಕು. ಕೆಲವು ಉದ್ಯೋಗಗಳಲ್ಲಿ ತಂತ್ರಜ್ಞಾನ, ಕಂಪ್ಯೂಟರ್ನ ಮುಂದೆ ಅಥವಾ ದಿನದ ಹೆಚ್ಚಿನ ಸಮಯ ಆಫೀಸಿನಲ್ಲಿ ಕಳೆಯಲು ಹಾಗೂ ಇನ್ನು ಕೆಲವು ಉದ್ಯೋಗಗಳಲ್ಲಿ ನೂರಾರು ಜನರೊಂದಿಗೆ ಸಂವಹನ ಮತ್ತು ವ್ಯವಹಾರ ಮಾಡಬೇಕಾದ ಪರಿಸ್ಥಿತಿ ಇರುತ್ತದೆ. ವೈದ್ಯರಾಗುವ ಕನಸು ಇರುವವರು, ವಿದ್ಯಾಭ್ಯಾಸದಲ್ಲಿ ನೆನಪು ಶಕ್ತಿ ಮತ್ತು ಅತ್ಯಂತ ಹೆಚ್ಚು ಅಂಕ ಗಳಿಸುವವರಾಗಿರಬೇಕು. ಸರಕಾರದ ವಿದ್ಯಾಭ್ಯಾಸ ಸೌಲಭ್ಯಗಳು ಸಿಗದಿದ್ದರೆ ಅವರ ಕುಟುಂಬವು ಆರ್ಥಿಕವಾಗಿ ಶಕ್ತವಾಗಿರಬೇಕು, ಕೆಲವೊಮ್ಮೆ ರಾತ್ರಿ ಹಗಲೆನ್ನದೆ ದೀರ್ಘ ಕಾಲ ರೋಗಿಗಳ ಜೊತೆ ಸಮಯ ಕಳೆಯಲು ಮಾನಸಿಕವಾಗಿ ತಯಾರಿರಬೇಕು. ಬಡಜನ ಸಾಮಾನ್ಯರಿಗೆ ಅಗತ್ಯವಿರುವ ಸಂದರ್ಭದಲ್ಲಿ ಉಚಿತವಾಗಿ ಸೇವೆ ಮಾಡಲು ತಯಾರಿರಬೇಕು. ಓರ್ವ ಶಿಕ್ಷಕ, ಉಪನ್ಯಾಸಕರಿಗೆ ವಿದ್ಯಾರ್ಥಿಯರ ಜೊತೆ ದೀರ್ಘ ಕಾಲ ಸಹವಾಸವಿರುತ್ತದೆ. ಸಮಯ ಮತ್ತು ಕಾಲ ಬದಲಾದಂತೆ ವಿದ್ಯಾಭ್ಯಾಸ ರಂಗದಲ್ಲಿ ಬದಲಾವಣೆಗಳಾಗುತ್ತಿರುತ್ತದೆ. ಅದಕ್ಕೆ ಬೇಕಾದಂತೆ ಸಮಯಕ್ಕೆ ಸರಿಯಾಗಿ ತರಭೇತಿ ಪಡೆದು ಸುಧಾರಣೆಯಾಗುತ್ತಿರಬೇಕು. ಮಕ್ಕಳ ಚಲನ ವಲನಗಳನ್ನು ಮಾನಸಿಕವಾಗಿ ಅರ್ಥಮಾಡಿಕೊಂಡು ಅವರ ಸಮಸ್ಯೆಗಳನ್ನು ಬಗೆಹರಿಸಬೇಕು ಮತ್ತು ಅತ್ಯುತ್ತಮ ರೀತಿಯಲ್ಲಿ ಮಾರ್ಗದರ್ಶನ ಮಾಡುವಂತಹ ಸಾಮರ್ಥ್ಯವಿರಬೇಕು. ಓರ್ವ ಸ್ತ್ರೀಯಂತೆ ಪುರುಷನಿಗೆ ಚಿಕ್ಕ ಮಕ್ಕಳ ಶಿಕ್ಷಕನಾಗಲು ಸಾಧ್ಯವಿಲ್ಲ.
ನ್ಯಾಯವಾದಿಯಾಗುವವರಲ್ಲಿ ಸಹನೆಯಿಂದ ಜನರ ಸಮಸ್ಯೆಯನ್ನು ಆಲಿಸುವ ಮತ್ತು ನ್ಯಾಯಪೂರ್ಣ ತೀರ್ಪು ನೀಡುವ ಧ್ಯೇಯವಿರಬೇಕು.
ಕೆಲವರು ಕಲಿತು ಉದ್ಯೋಗ ಹುಡುಕುವಾಗ ಆ ಕ್ಷೇತ್ರದಲ್ಲಿ ಉದ್ಯೋಗವೂ ದೊರಕುವುದಿಲ್ಲ. ಎಷ್ಟೆಲ್ಲಾ ಹಣ ಪಾವತಿ ಮಾಡಿ, ಕಷ್ಟ ಪಟ್ಟು ಕಲಿಯುತ್ತಾರೆ. ಆದುದರಿಂದ ಮಕ್ಕಳು ಆಯ್ಕೆ ಮಾಡುವ ವಿಷಯದ ಬಗ್ಗೆ ತಜ್ಞರೊಂದಿಗೆ ಸಂದರ್ಶನ ಮಾಡಿ ಮಾಹಿತಿ ಪಡೆಯಬೇಕು. ಅದಕ್ಕೆ ಮಾರುಕಟ್ಟೆಯಲ್ಲಿ ಉದ್ಯೋಗಾವಕಾಶಗಳು ಮತ್ತು ಬೇಡಿಕೆಯಿದೆಯೇ? ಆ ಕ್ಷೇತ್ರದಲ್ಲಿ ಉದ್ಯೋಗ ಮಾಡಿ ವಿಜಯಿಯಾಗಿದ್ದಾರೆಯೇ? ವಿಜಯಿಯಾದವರು ಕಲಿತ ಕೋರ್ಸ್ ಗಳು ಯಾವುದೆಲ್ಲ? ಅವರಲ್ಲಿರುವ ಗುಣಗಳೇನು ಎಂಬುದರ ಕುರಿತು ಅಧ್ಯಯನ ನಡೆಸಬೇಕು. ಮಕ್ಕಳು ಆಯ್ಕೆ ಮಾಡಿದ ಕೋರ್ಸ್ ಗೆ ದಾಖಲಾತಿ ಸಿಗದಿದ್ದರೆ ಯಾವ ಕೋರ್ಸ್, ಕಾಲೇಜನ್ನು ಆಯ್ಕೆ ಮಾಡುವುದೆಂದು ನಾಲ್ಕಾರು ಕೋರ್ಸ್ಗಳ ಯೋಜನೆಯನ್ನೂ ಮೊದಲೇ ಮಾಡಿರಬೇಕು. ಮಾನಸಿಕವಾಗಿಯೂ ತಯಾರಿರಬೇಕು. ಫಲಿತಾಂಶ ಬಂದ ನಂತರ ನೋಡುವ ಎಂದು ಆಲಸ್ಯದಿಂದ ಸುಮ್ಮನಿರಬೇಡಿರಿ. ಕೊನೆಯ ಗಳಿಗೆಯಲ್ಲಿ ಗೊಂದಲಕ್ಕೊಳಗಾಗದಂತೆ, ನಿರಾಶರಾಗದಂತೆ, ದುಃಖಿತರಾಗದಂತೆ, ಖಿನ್ನತೆಗೊಳಗಾಗದಂತೆ ಜಾಗರೂಕತೆ ವಹಿಸಿರಿ. ವೃತ್ತಿಯ ಆಯ್ಕೆಯನ್ನು ಹೆತ್ತವರು ಮಕ್ಕಳೊಂದಿಗೆ ಪರಸ್ಪರ ಸಮಾಲೋಚನೆ ನಡೆಸಿ ತಮ್ಮ ಹಣಕಾಸಿನ ಸಾಮರ್ಥ್ಯಕ್ಕೆ ಸರಿ ಹೊಂದುವಂತೆ ನೋಡಿಕೊಳ್ಳಬೇಕು. ಯಾವ ಕಾರಣಕ್ಕೂ ತಂದೆ ತಾಯಿಯವರು ತಾವು ಮೊದಲೇ ನಿರ್ಧರಿಸಿದ ಕೋರ್ಸುಗಳನ್ನು ಕಲಿಯಲು ನಿರ್ಬಂಧಿಸಬಾರದು. ಮಕ್ಕಳು ಭವಿಷ್ಯದಲ್ಲಿ ಸ್ವದೇಶದಲ್ಲಿ ಅಥವಾ ವಿದೇಶದಲ್ಲಿ ಉದ್ಯೋಗ ಮಾಡಲು ಇಷ್ಟಪಡುತ್ತಾರೆಯೇ ಎಂದು ಪರಿಗಣಿಸಿ ಅದಕ್ಕೆ ತಕ್ಕಂತೆ ಕೋರ್ಸ್ ಆಯ್ಕೆ ಮಾಡಬಹುದು.
ವಿದೇಶದಲ್ಲಿ ಉನ್ನತ ವಿದ್ಯಾಭ್ಯಾಸ ಪಡೆಯಬೇಕೆಂಬ ಆಗ್ರಹ ಯುವ ತಲೆಮಾರಿನಲ್ಲಿ ಹೆಚ್ಚುತ್ತಿದ್ದೆ. ಮಕ್ಕಳನ್ನು ವಿದೇಶಕ್ಕೆ ಕಳುಹಿಸುವಾಗ ಅಲ್ಲಿಯ ವಾತಾವರಣ, ಸಂಸ್ಕೃತಿಯ ಬಗ್ಗೆ ಪರಿಶೀಲನೆ ನಡೆಸಬೇಕು. ಧಾರ್ಮಿಕ ಆಚರಣೆಗಳನ್ನು ನಡೆಸಲು ಸೌಲಭ್ಯವಿದೆಯೇ? ಅವರ ಆರೋಗ್ಯಕ್ಕೆ ಅಗತ್ಯವಿರುವ ಆಹಾರ ಲಭ್ಯವಿದೆಯೇ? ಎಂದು ಪರಿಶೀಲಿಸಬೇಕು. ವಿದ್ಯಾಭ್ಯಾಸಕ್ಕಿಂತಲೂ ಆರೋಗ್ಯ ಮುಖ್ಯ. ನಿಮ್ಮ ಮಕ್ಕಳಿಗೆ ಅಂತಾರಾಷ್ಟ್ರೀಯ ಅತ್ಯುನ್ನತ ಹಾಗೂ ಪ್ರತಿಷ್ಠಿತ ವಿಶ್ವ ವಿದ್ಯಾನಿಲಯಗಳ ಸ್ನಾತಕೋತ್ತರ ಪದವಿ ಹಾಗೂ ಸರ್ಟಿಫಿಕೇಟ್ ಗಳನ್ನು ಪಡೆಯಲು ಪ್ರೋತ್ಸಾಹಿಸಿರಿ.
ಕಡಿಮೆ ಅಂಕ ಗಳಿಸಿದ ಮಕ್ಕಳಿಗೂ, ಫೇಲಾದ ಮಕ್ಕಳಿಗೂ ಉಡುಗೊರೆ ಕೊಟ್ಟು ಪ್ರೋತ್ಸಾಹಿಸಿ ಸಂತೋಷಗೊಳಿಸಿರಿ. ಅವರಿಗೂ ಉಜ್ವಲ ಭವಿಷ್ಯವಿದೆ ಎಂದು ಸಮಾಧಾನಪಡಿಸುತ್ತಾ ಧೈರ್ಯ ತುಂಬಿರಿ. ಯಾವುದೇ ಕೋರ್ಸ್, ವೃತ್ತಿಯನ್ನು ಮೇಳು, ಕೀಳಾಗಿ ಕಾಣಬೇಡಿರಿ. ಎಲ್ಲವೂ ಸಮಾನವಾಗಿದೆ. ಜಗತ್ತು ಸಮತೋಲನದೊಂದಿಗೆ ಮುಂದೆ ಹೋಗಲು ಎಲ್ಲ ವೃತ್ತಿಗಳೂ ಅಗತ್ಯವಾಗಿದೆ. ಉತ್ತಮ ಅಂಕ ಗಳಿಸದವರು ಕೂಡಾ ಜಗತ್ತಿನಲ್ಲಿ ಮಹಾನ್ ಸಾಧನೆ ಮಾಡಿದ ಇತಿಹಾಸವಿದೆ.
ಪ್ರಸಕ್ತ ಕಾಲದಲ್ಲಿ ಯಾವುದೇ ಉದ್ಯೊಗವನ್ನು ಮಾಡುತ್ತಿದ್ದರೂ ಆ ಕ್ಷೇತ್ರದ ಅತ್ಯಾಧುನಿಕ ತಂತ್ರಜ್ಞಾನವನ್ನು ಕಲಿಯುತ್ತಾ ಪರೀಕ್ಷೆಗಳನ್ನು ಬರೆಯುತ್ತಾ ಸರ್ಟಿಫಿಕೇಟ್ ಮತ್ತು ಜ್ಞಾನವನ್ನು ನವೀಕರಿಸುತ್ತಿರಬೇಕು. ಕೆಲವೊಮ್ಮೆ ಕಲಿತ ವಿದ್ಯಾಭ್ಯಾಸದಲ್ಲಿ ಕೆಲಸ ಸಿಗದೇ ಇದ್ದಾಗ ಪರಿಸ್ಥಿತಿಗೆ ಅನುಸಾರವಾಗಿ ಸಿಕ್ಕಿದ ಕೆಲಸ ಮಾಡಬೇಕಾದಂತಹ ಸಂದರ್ಭಗಳು ಎದುರಾಗಬಹುದು. ಆದರೆ ನಾವು ಕಲಿತಂತಹ ವಿಷಯದಲ್ಲಿ ವೃತ್ತಿಯನ್ನು ಪಡೆಯಲು ಪರಿಶ್ರಮಿಸುತ್ತಿರಬೇಕು. ಹತ್ತಿಪ್ಪತ್ತು ವರ್ಷಗಳಲ್ಲಿ ಮಾರುಕಟ್ಟೆಯಲ್ಲಿ ಯಾವೆಲ್ಲ ಹೊಸ ವೃತ್ತಿ ಸೃಷ್ಟಿಯಾಗಬಹುದೆಂದು ಯಾರಿಗೂ ತಿಳಿದಿಲ್ಲವಾದರೂ ಅತ್ಯಂತ ವೇಗದಲ್ಲಿ ಬದಲಾವಣೆಗಳಾಗುತ್ತಿರುವ ಉದ್ಯೋಗ ಮಾರುಕಟ್ಟೆಯಲ್ಲಿ ಬದಲಾವಣೆಯಾಗುವಾಗ ನಾವೂ ಕೂಡ ತಯಾರಾಗಿರಬೇಕು.
ಡಿಜಿಟಲ್ ಮಾರ್ಕೆಟಿಂಗ್, ಕ್ಲೌಡ್ ಫೈನಾನ್ಸ್, ಕ್ಲೌಡ್ ಕಂಪ್ಯೂಟಿಂಗ್, ಆರ್ಟಿಫಿಶಿಯಲ್ ಇನ್ಟಲಿಜನ್ಸ್, ರೊಬೊಟಿಕ್ಸ್ ನಂತಹ ಕೊರ್ಸ್ಗಳಿಗೆ ಬೇಡಿಕೆಗಳಿರುವ ಸಾಧ್ಯತೆಗಳು ಕಾಣುತ್ತದೆ. ವೃತ್ತಿಯ ವಿಷಯದಲ್ಲೂ ಅನಿಶ್ಚಿತತೆ ಎಂಬುದಿದೆ. ಅನಿರೀಕ್ಷಿತವಾಗಿ ಯಾವುದೇ ವೃತ್ತಿ ಕುಸಿದು ಹೋಗುವ ಸಾಧ್ಯತೆ ಇರುತ್ತದೆ. ಕಲಿಕೆಯೆಂಬುದು ಜೀವನದಾದ್ಯಂತ ನಡೆಯಬೇಕು. ಜ್ಞಾನಾರ್ಜನೆಗೆ ಕೊನೆ ಇಲ್ಲ. ಮಕ್ಕಳಿಗೆ ಅವರ ಶಕ್ತಿ, ಜ್ಞಾನ, ಉಪಕರಣದಿಂದ ಅವರ ಭವಿಷ್ಯವನ್ನು ವಿನ್ಯಾಸಗೊಳಿಸಲು ಆತ್ಮ ವಿಶ್ವಾಸ, ದೃಢವಿಶ್ವಾಸವನ್ನು ತುಂಬಿರಿ.












