ಇರಾನ್‌ನಲ್ಲಿ ಪ್ರತಿಭಟನಾಕಾರರಿಗೆ ಗಲ್ಲು ವದಂತಿ: ಸೆರೆಮನೆಯ ಮುಂಭಾಗ ತೀವ್ರ ಪ್ರತಿಭಟನೆ

0
234
ಸನ್ಮಾರ್ಗ ವಾರ್ತೆ

ಟೆಹ್ರಾನ್: ಆಡಳಿತ ವಿರೋಧಿ ಪ್ರತಿಭಟನೆಗೆ ಸಂಬಂಧಿಸಿ ಇರಾನ್ ಮತ್ತೆ ಇಬ್ಬರು ಪ್ರತಿಭಟನಾಕಾರರನ್ನು ಗಲ್ಲಿಗೇರಿಸಲಿದೆ ಎಂಬ ವದಂತಿಗಳು ಹರಿದಾಡುತ್ತಿದ್ದು, ಈ ಅಪರಾಧಿಗಳನ್ನು ಇರಿಸಿರುವ ಕರಾಜ್‌ನ ರಜಾ ಶಹರ್ ಜೈಲಿನ ಮುಂದೆ ನೂರಾರು ಮಂದಿ ಪ್ರತಿಭಟನೆ ನಡೆಸಿದ್ದಾರೆ.  ಈ ಕುರಿತಂತೆ ಹಲವು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿವೆ.

22 ವರ್ಷದ ಮೊಹಮ್ಮದ್ ಮತ್ತು 19 ವರ್ಷದ ಮೊಹಮ್ಮದ್ ಬರ್ಗಾನಿ‌ಯನ್ನು ಗಲ್ಲಿಗೇರಿಸಲಾಗುತ್ತದೆ ಎಂಬ ವರದಿಗಳು ಹರಿದಾಡುತ್ತಿವೆ. ಈ ಇಬ್ಬರು ವ್ಯಕ್ತಿಗಳ ಕುಟುಂಬಗಳು ಕೂಡ ಪ್ರತಿಭಟನಾಕಾರರೊಂದಿಗೆ ಸೇರಿಕೊಂಡಿದ್ದಾರೆ. ಭದ್ರತಾ ಪಡೆಗಳ ಗುಂಪಿನ ಮೇಲೆ ಕಾರು ಹರಿಸಿ  ಒಬ್ಬನನ್ನು ಕೊಂದ ಆರೋಪ ಮೊಹಮ್ಮದನ ಮೇಲಿದೆ. ಆದರೆ ಈತ ಮಾನಸಿಕ ಅಸ್ವಸ್ಥನಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಈತನ ಕುಟುಂಬದ ಸದಸ್ಯರು ಕೂಡ ಪ್ರತಿಭಟನೆಯ ವೇಳೆ ಆತನ ಮಾನಸಿಕ ಅಸ್ವಸ್ಥತೆಯ ದಾಖಲೆಯನ್ನು ಪ್ರದರ್ಶಿಸಿದ್ದಾರೆ. ಇವರಿಬ್ಬರ ಮರಣದಂಡನೆಯನ್ನು ಸುಪ್ರೀಂ ಕೋರ್ಟ್ ದೃಢೀಕಸಿದ್ದು ಅವರನ್ನು ಒಂಟಿ ಕೋಣೆಗೆ ಕಳುಹಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಪ್ರತಿಭಟನೆಗೆ ಸಂಬಂಧಿಸಿ ಇರಾನ್ ಈಗಾಗಲೇ ನಾಲ್ಕು ಮಂದಿಯನ್ನು ಗಲ್ಲಿಗೇರಿಸಿದೆ. ಇಬ್ಬರನ್ನು ಇದೇ ಜನವರಿಯಲ್ಲಿ ಗಲ್ಲಿಗೇರಿಸಲಾಗಿದ್ದರೆ ಇನ್ನಿಬ್ಬರನ್ನು ಕಳೆದ ಡಿಸೆಂಬರ್ ತಿಂಗಳಲ್ಲಿ ಗಲ್ಲಿಗೇರಿಸಲಾಗಿತ್ತು. ಮಹಸಾ ಅಮೀನಿ ಎಂಬ ಯುವತಿಯ ಕಸ್ಟಡಿ ಸಾವಿನ ಬಳಿಕ ಕಳೆದ ವರ್ಷ ಸೆಪ್ಟೆಂಬರ್‌ನಿಂದ ಇರಾನಿನಲ್ಲಿ ಆಡಳಿತ ವಿರೋಧಿ ಪ್ರತಿಭಟನೆ ಭುಗಿಲೆದ್ದಿದೆ‌.