ಸನ್ಮಾರ್ಗ ವಾರ್ತೆ
ವಾಷಿಂಗ್ಟನ್: ಭಾರತದ 80 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಅಮೆರಿಕದ ಟೆಕ್ ಕಂಪನಿಗಳಲ್ಲಿ ಕೆಲಸ ಕಳೆದುಕೊಂಡು ಪರದಾಡುತ್ತಿದ್ದಾರೆ. ಕಳೆದ ಅಕ್ಟೋಬರ್ನಿಂದ ಇದುವರೆಗೆ ಬರೋಬ್ಬರಿ 3 ಲಕ್ಷ ಜನ ಉದ್ಯೋಗಿಗಳನ್ನ ಕಳೆದುಕೊಂಡು ಅತಂತ್ರರಾಗಿದ್ದಾರೆ. ಇದರಲ್ಲಿ 80 ಸಾವಿರ ಮಂದಿ ಭಾರತೀಯರೆಂದು ತಿಳಿದು ಬಂದಿದೆ.
ಕಳೆದ ವರ್ಷ 2022 ನವೆಂಬರ್ನಿಂದ ಈವರೆಗೆ ಸುಮಾರು ಎರಡೂವರೆ ತಿಂಗಳಲ್ಲಿ ಅಂದಾಜು ಎರಡು ಲಕ್ಷ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಅನೇಕರು ನಿರುದ್ಯೋಗಿಗಳಾಗಿದ್ದಾರೆ. ಇವರಲ್ಲಿ ಸುಮಾರು ಶೇ. 40 ರಷ್ಟು ಮಂದಿ ಭಾರತೀಯರು ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಅಮೆರಿಕದಲ್ಲಿ ಫೇಸ್ಬುಕ್, ಅಮೆಜಾನ್, ಗೂಗಲ್ ಹಾಗೂ ಮೈಕ್ರೋಸಾಫ್ಟ್ ನಂತಹ ದೈತ್ಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯರಲ್ಲಿ ಬಹುತೇಕ ಮಂದಿ ಉದ್ಯೋಗದ ಆಧಾರದಲ್ಲಿ ಎಚ್ 1ಬಿ ಮತ್ತು ಎಲ್1 ವೀಸಾ ಪಡೆದವೇ ಆಗಿದ್ದಾರೆ. ಐಟಿ ಕಂಪನಿಗಳು ತಮ್ಮ ಸಿಬ್ಬಂದಿಯನ್ನು ದಿಢೀರನೇ ಸೇವೆಯಿಂದ ವಜಾಗೊಳಿಸಿದ್ದರಿಂದ ಅವರೆಲ್ಲ ಅಮೆರಿಕದಲ್ಲಿ ನೆಲೆಸಲು ತುರ್ತಾಗಿ ಬೇರೊಂದು ಉದ್ಯೋಗ ಹುಡುಕಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ ಅನೇಕ ಕಂಪನಿಗಳಲ್ಲಿ ವಜಾ ಪ್ರಕ್ರಿಯೆ ನಡೆದಿವೆ ಎಂದು ಕೆಲಸ ಕಳೆದುಕೊಂಡ ಉದ್ಯೋಗಿಗಳು ಅಳಲು ತೋಡಿಕೊಂಡಿದ್ದಾರೆ. ಎಚ್ 1ಬಿ ವೀಸಾ ಇದು ವಲಸಿಗಯೇತರ ವೀಸಾ ಆಗಿದ್ದು, ಇದನ್ನು ಕೆಲಸದ ಆಧಾರದಲ್ಲಿ ಪಡೆಯಬಹುದಾಗಿದೆ. ಅಮೆರಿಕದಲ್ಲಿನ ದೈತ್ಯ ಕಂಪನಿಗಳು ವ್ಯಕ್ತಿ ಜ್ಞಾನ, ಕೌಶಲ್ಯ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಈ ವೀಸಾ ಉಪಯುಕ್ತ ಎನ್ನಲಾಗುತ್ತಿದೆ.












