ಪೊಲೀಸ್ ಕಸ್ಟಡಿಯಲ್ಲಿ ಸಾವು ಪ್ರಕರಣ: ಗುಜರಾತಿಗೆ ಮೊದಲ ಸ್ಥಾನ!

0
580

ಸನ್ಮಾರ್ಗ ವಾರ್ತೆ

ಅಹ್ಮದಾಬಾದ್: ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ನಡೆದ ಪೊಲೀಸ್ ಕಸ್ಟಡಿಯಲ್ಲಿ ಸಾವು ಪ್ರಕರಣದ ವಿಚಾರಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯ ಗುಜರಾತ್ ಮೊದಲ ಸ್ಥಾನದಲ್ಲಿದೆ.

ಕಳೆದ ಐದು ವರ್ಷಗಳಲ್ಲಿ ಗುಜರಾತಿನಲ್ಲಿ ಅತಿ ಹೆಚ್ಚು ಕಸ್ಟಡಿ ಸಾವುಗಳು ವರದಿಯಾಗಿವೆ ಎಂದು ಕೇಂದ್ರ ಗೃಹ ಸಚಿವಾಲಯವೇ ರಾಜ್ಯಸಭೆಗೆ ತಿಳಿಸಿದೆ. 2017ರಿಂದ 2022ರ ಮಧ್ಯೆ ಬಿಜೆಪಿ ಆಡಳಿತವಿರುವ ಗುಜರಾತಿನಲ್ಲಿ ಸುಮಾರು 80 ಮಂದಿ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರೈ ತಿಳಿಸಿದ್ದಾರೆ.

ಗುಜರಾತಿನ ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ (76), ಉತ್ತರ ಪ್ರದೇಶ (41), ತಮಿಳುನಾಡು (40) ಮತ್ತು ಬಿಹಾರ (38)ದಲ್ಲಿ ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

ದೇಶದ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಏಪ್ರಿಲ್ 1, 2017 ಮತ್ತು ಮಾರ್ಚ್ 31, 2022 ರ ನಡುವೆ ವರದಿಯಾದ ಕಸ್ಟಡಿಯಲ್ ಸಾವಿನ ವಿವರಗಳ ಹಂಚಿಕೊಂಡಿರುವ ಸಚಿವರು, 2017-2018ರಲ್ಲಿ 146 ಮಂದಿ, 2018-2019ರಲ್ಲಿ 136, 2019-2021ರಲ್ಲಿ 112, 2020-2021ರಲ್ಲಿ 100 ಮತ್ತು 2021-2022ರಲ್ಲಿ 175 ಮಂದಿ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.

ಗುಜರಾತ್‌ನಲ್ಲಿ 2017-18ರಲ್ಲಿ 14, 2018-19ರಲ್ಲಿ 13, 2019-20ರಲ್ಲಿ 12, 2020-21ರಲ್ಲಿ 17 ಮತ್ತು 2021-22ರಲ್ಲಿ 24 ಸಾವುಗಳು ವರದಿಯಾಗಿವೆ ಎಂದು ಸಚಿವ ನಿತ್ಯಾನಂದ ರೈ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.

ಒಂಬತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ ಕಳೆದ ಐದು ವರ್ಷಗಳಲ್ಲಿ ದೆಹಲಿಯಲ್ಲಿ 29 ಕಸ್ಟಡಿ ಸಾವಿನ ಪ್ರಕರಣಗಳು ವರದಿಯಾಗಿವೆ ಎಂದೂ ಮಾಹಿತಿ ಹಂಚಿದ್ದಾರೆ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ನೀಡಿದ ಮಾಹಿತಿಯನ್ನು ಉಲ್ಲೇಖಿಸಿದ ಸಚಿವರು, ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ಘಟನೆಗಳಲ್ಲಿ ಆಯೋಗವು 201 ಪ್ರಕರಣಗಳಲ್ಲಿ ₹5,80,74,998 ಆರ್ಥಿಕ ಪರಿಹಾರ ಮತ್ತು ಒಂದರಲ್ಲಿ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ, ಸಿಕ್ಕಿಂ ಮತ್ತು ಗೋವಾದಂತಹ ರಾಜ್ಯಗಳು 2017 ರಿಂದ 2020ರವರೆಗೆ ಯಾವುದೇ ಘಟನೆ ವರದಿ ಮಾಡಿಲ್ಲ, ಆದರೆ 2021-2022ರಲ್ಲಿ ತಲಾ ಒಂದು ಕಸ್ಟಡಿ ಸಾವಿನ ಘಟನೆಯನ್ನು ದಾಖಲಿಸಲಾಗಿದೆ ಎಂದು ಸಚಿವರು ರಾಜ್ಯಸಭೆಗೆ ತಿಳಿಸಿದ್ದಾರೆ.