ಫೇಕ್‌ ನ್ಯೂಸ್ ಹರಡುವವರಿಗೆ ಸಿದ್ದರಾಮಯ್ಯ ಎಚ್ಚರಿಕೆ

0
598

ಸನ್ಮಾರ್ಗ ವಾರ್ತೆ

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಫೇಕ್ ನ್ಯೂಸ್ ಹಾವಳಿ ಮಿತಿ ಮೀರಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಫೇಕ್‌ ನ್ಯೂಸ್ ಗಳ ಮೂಲಗಳನ್ನು ಪತ್ತೆ ಹಚ್ಚಿ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿಸುತ್ತಿರುವವರನ್ನು ಗುರುತಿಸಿ ಕಾನೂನು ಕ್ರಮಕ್ಕೆ ಒಳಪಡಿಸಬೇಕು.

ಸೈಬರ್ ಪೊಲೀಸರು ಫೇಕ್ ನ್ಯೂಸ್ ಗಳ ಮೂಲಗಳನ್ನು ಪತ್ತೆ ಹಚ್ಚಲು ಸರ್ವಸನ್ನದ್ದವಾಗಿ ಕೆಲಸ ಮಾಡಬೇಕು. ಪ್ರತೀ ತಿಂಗಳು ಈ ಬಗ್ಗೆ ವರದಿಯನ್ನು ನೀಡಬೇಕು. ಸುಳ್ಳು ಸುದ್ದಿಗಳ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನವನ್ನು ಯಾರೇ ಮಾಡಿದರೂ ಅದನ್ನು ಸರ್ಕಾರ ಸಹಿಸುವುದಿಲ್ಲ. ಸಾಮರಸ್ಯ ಕಾಪಾಡುವ ಜೊತೆಗೆ ಪ್ರತಿಯೊಬ್ಬರಿಗೂ ಶಾಂತಿ, ನೆಮ್ಮದಿಯ ವಾತಾವರಣವನ್ನು ನೀಡಲು ನಾವು ಬದ್ಧರಿದ್ದೇವೆ.

ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಫೇಕ್ ನ್ಯೂಸ್‌ಗಳನ್ನು ಹರಡುವ ಮೂಲಕ ಸಮಾಜದ ಸ್ವಾಸ್ಥ್ಯ ಕೆಡಿಸುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ, ಕಾನೂನು ರೀತ್ಯ ಕಠಿಣ ಶಿಕ್ಷೆಗೆ ಒಳಪಡಿಸುತ್ತೇವೆ. ಎಚ್ಚರಿಕೆ..!!

ರಚನಾತ್ಮಕ ಟೀಕೆಗಳಿಗೆ ನಾವು ಮುಕ್ತರಿದ್ದೇವೆ. ಆದರೆ ಸುಳ್ಳು ಸುದ್ದಿಗಳ ಸೃಷ್ಟಿ ಮತ್ತು ಹರಡುವಿಕೆಯನ್ನು ನಾವು ಖಂಡಿತಾ ಸಹಿಸುವುದಿಲ್ಲ.

ಸಿದ್ದರಾಮಯ್ಯ
ಮಾನ್ಯ ಮುಖ್ಯ ಮಂತ್ರಿಗಳು
ಕರ್ನಾಟಕ ಸರಕಾರ