ಸರಿಯಾದ ಸಮಯದಲ್ಲಿ ತನ್ನನ್ನು ರಕ್ಷಿಸಿದ ಅಣ್ಣ; ಮುಖೇಶ್ ಅಂಬಾನಿಗೆ ಕೃತಜ್ಞತೆ ಸಲ್ಲಿಸಿದ ಅನಿಲ್ ಅಂಬಾನಿ

0
764

 

ಹೊಸದಿಲ್ಲಿ, ಮಾ.19: ಸ್ವೀಡಿಶ್ ಟೆಲಿಕಾಂ ಕಂಪೆನಿಯಾದ ಎರಿಕ್ಸನ್ ಪ್ರಕರಣದಲ್ಲಿ 458.77 ಕೋಟಿ ರೂಪಾಯಿ ಪಾವತಿಸಿ ಸಹಾಯ ಮಾಡಿದ ಸಹೋದರ ಮುಖೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿಗೆ ಅವರ ಸಹೋದರ ಅನಿಲ್ ಅಂಬಾನಿ ಕೃತಜ್ಞತೆ ಸಲ್ಲಿಸಿದ್ದಾರೆ. ಸುಪ್ರೀಂಕೋರ್ಟಿನ ಆದೇಶ ಪ್ರಕಾರ ಎಲ್ಲ ಹಣವನ್ನು ಪಾವತಿಸಿ ಸಹೋದರ ಅನಿಲ್ ಜೈಲುಪಾಲಾಗುವುದನ್ನು ಮುಖೇಶ್ ತಡೆದಿದ್ದಾರೆ.  ಹಣ ಪಾವತಿಸಲು ವಿಫಲರಾದರೆ ಅನಿಲ್ ಅಂಬಾನಿ ಮೂರು ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಅನಿಲ್‍ಗೆ ಸುಪ್ರೀಂಕೋರ್ಟು ಮುನ್ನೆಚ್ಚರಿಕೆ ನೀಡಿತ್ತು.

ಈ ಸಂಕಷ್ಟದ ಸಮಯದಲ್ಲಿ ಬೃಹತ್ ಮೊತ್ತವನ್ನು ಪಾವತಿಸಿ ಪ್ರಕರಣದ ಜಟಿಲತೆಯಿಂದ ಮುಖೇಶ್ ಅನಿಲ್‍ರನ್ನು ರಕ್ಷಿಸಿದರು. ಇಂತಹ ಸಂದರ್ಭದಲ್ಲಿ ತನ್ನ ಜೊತೆ ನಿಂತ ಸಹೋದರ ಮುಖೇಶ್‍ರಿಗೆ ಮತ್ತು ಅವರ ಪತ್ನಿ ನೀತಾರಿಗೆ ಹೃತ್ಪೂರ್ವಕವಾದ ಕೃತಜ್ಞತೆಯನ್ನು ಅನಿಲ್ ತಿಳಿಸಿದರು. ಕುಟುಂಬದ ಮೌಲ್ಯಗಳಿಗೆ  ಪ್ರಾಮುಖ್ಯತೆ ನೀಡಿ ಸಮಯೋಚಿತವಾಗಿ ಬೆಂಬಲಿಸಿದ ಅವರಿಗೆ ನಾನು ಮತ್ತು ನನ್ನ ಕುಟುಂಬ ಯಾವಾಗಲು ಕೃತಜ್ಞರಾಗಿದ್ದೇವೆ ಎಂದು ಅನಿಲ್ ಪ್ರತಿಕ್ರಿಯಿಸಿದ್ದಾರೆ.

ಪಾವತಿಯ ಒಂದು ಗಂಟೆಯ ನಂತರ ಅನಿಲ್ ಅಂಬಾನಿಯ ಹೇಳಿಕೆ ಬಂದಿದೆ. ಸ್ವೀಡಿಶ್ ಕಂಪೆನಿ ಎರಿಕ್ಸನ್ ತಮಗೆ ಸಿಗಬೇಕಾದ ಎಲ್ಲ ಹಣ ಸಿಕ್ಕಿದೆ ಎಂದು ಅನಿಲ್‍ಗೆ ತಿಳಿಸಿತ್ತು. ಬಡ್ಡಿ ಸಹಿತ ಹಣವನ್ನು ಪಾವತಿಸಲಾಗಿದೆ ಎಂದು ವರದಿ ತಿಳಿಸಿದೆ.