ಬೆಂಗಳೂರು, ಮಾ. 19: ಜೆಡಿಎಸ್, ಕಾಂಗ್ರೆಸ್ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮುಂದಿನ ಲೋಕಸಭಾ ಚುನಾವಣೆಯನ್ನು ಒಗ್ಗಟ್ಟಿನಲ್ಲಿ ಎದುರಿಸುವ ಸಂದೇಶವನ್ನು ರಾಜ್ಯದ ಜನತೆಗೆ ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಜೆಡಿಎಸ್ ವರಿಷ್ಠ ದೇವೆಗೌಡರು ನಾಯಕರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇದ್ದರೂ ಹೊರಗೆ ಹಾಕಬಾರದು. ಏನೇ ಬಿಕ್ಕಟ್ಟಿದ್ದರೂ ಅದನ್ನು ಚರ್ಚಿಸಿ ಪರಿಹಾರ ಮಾಡಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯನ್ನು ತರಾಟೆಗೆತ್ತಿಕೊಂಡ ದೇವೆಗೌಡರು ಪ್ರಧಾನಿಯ ಘನತೆಗೆ ತಕ್ಕಂತೆ ಮೋದಿ ವರ್ತಿಸುವುದಿಲ್ಲ ಎಂದು ಹೇಳಿದ್ದಾರೆ.
ಇಡೀ ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಒಟ್ಟಾಗಿ ಚುನಾವಣಾ ಪ್ರಚಾರಕ್ಕೆ ತೆರಳಲಿದೆ ಎಂದು ದೇವೆಗೌಡರು ಹೇಳಿದರು. ಪತ್ರಿಕಾಗೋಷ್ಠಿಯ ಮೊದಲು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ನಡುವೆ ಸಭೆ ನಡೆದಿತ್ತು. ಇದರಲ್ಲಿ ಚುನಾವಣೆ ಕುರಿತು ಮೈತ್ರಿ, ರಣತಂತ್ರಗಳು ಚರ್ಚೆಯಾಗಿದ್ದು ಸಭೆಯ ಕೊನೆಯಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮತ್ತು ದೇವೆಗೌಡರ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಯಿತು. ಈ ಸಭೆಗೆ ಉಪಮುಖ್ಯಮಂತ್ರಿ ಡಾ. ಪರಮೇಶ್ವರ್ ಸಭೆಗೆ ಹಾಜರಾಗಿಲ್ಲ. ತುಮಕೂರು ಲೋಕಸಭಾ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಟ್ಟದ್ದು ಪರಮೇಶ್ವರ್ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ. ಮಾರ್ಚ್ 31ರಂದು ಕಾಂಗ್ರೆಸ್, ಜೆಡಿಎಸ್ ಮಹಾಸಮಾವೇಶ ನಡೆಸುವ ತೀರ್ಮಾನವಾಗಿದೆ. ಬಿಜೆಪಿಯನ್ನು ಸೋಲಿಸುವುದು ಕಾಂಗ್ರೆಸ್ ಜೆಡಿಎಸ್ ಸರಕಾರದ ಗುರಿಯಾಗಿದೆ ಎಂದು ದೇವೆಗೌಡ ಹೇಳಿದರು. ಇದೇ ವೇಳೆ ರಾಷ್ಟ್ರ ರಾಜಕಾರಣಕ್ಕೆ ತನ್ನ ಅಗತ್ಯವೆಷ್ಟು ಎನ್ನುವ ಕುರಿತು ಚಿಂತಿಸುತ್ತಿದ್ದೇನೆ, ಲೋಕಸಭೆಗೆ ಸ್ಪರ್ಧಿಸುವ ಕುರಿತು ಇನ್ನೂ ನಿರ್ಧರಿಸಿಲ್ಲ ಎಂದು ದೇವೆಗೌಡರು ಹೇಳಿದರು.












