ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಪಬ್‍ಜಿಯ ಮೂಲಕ ಪ್ರೀತಿಸಿ ಪ್ರಿಯಕರನೊಂದಿಗೆ ಬದುಕು ನಡೆಸಲು ಭಾರತಕ್ಕೆ ಬಂದ ಪಾಕಿಸ್ತಾನದ ಮಹಿಳೆಯನ್ನು ಮರಳಿ ಪಾಕಿಸ್ತಾನಕ್ಕೆ ಕಳುಹಿಸದಿದ್ದರೆ ಘೋರ ಪರಿಣಾಮ ಎದುರಿಸಬೇಕಾಗಿ ಬರಬಹುದು ಎಂದು ತೀವ್ರ ಬಲಪಂಥೀಯ ಸಂಘಟನೆಗಳು ಹೇಳಿವೆ.
ಜುಲೈಯಲ್ಲಿ ಸೀಮಾ ಹೈದರ್ ಎಂಬ ಪಾಕಿಸ್ತಾನದ ಮಹಿಳೆ ಪ್ರೇಮಿಯೊಂದಿಗೆ ಬದುಕು ನಡೆಸಲು ಭಾರತಕ್ಕೆ ಅನಧಿಕೃತವಾಗಿ ಬಂದಿದ್ದು ಇವಳನ್ನೂ ಇವಳ ಮಕ್ಕಳನ್ನೂ 72 ಗಂಟೆಯೊಳಗೆ ಪಾಕಿಸ್ತಾನಕ್ಕೆ ಮರಳಿ ಕಳುಹಿಸಬೇಕೆಂದು ಬಲಪಂಥೀಯ ಸಂಘಟನೆಗಳು ಆಗ್ರಹಿಸಿವೆ.
ಮಹಿಳೆಯನ್ನು ಪಾಕಿಸ್ತಾನದ ಗೂಢಚಾರಿಣಿ ಎಂದು ಗೋ ರಕ್ಷ ಹಿಂದೂ ದಳ್ ಆರೋಪಿಸಿದೆ. ಸೀಮಾ ಮತ್ತು ಮಕ್ಕಳನ್ನು ಗಡೀಪಾರು ಮಾಡದಿದ್ದರೆ ಆಂದೋಳನ ನಡೆಸುವುದಕ್ಕೆ ಅದು ಸಿದ್ಧತೆ ನಡೆಸುತ್ತಿದೆ.
ಪಬ್‍ಜಿಯ ಮೂಲಕ ಪರಿಚಿತಳಾಗಿ ನೊಯಿಡದ ಸಚಿನ್ ಎಂಬ ಯುವಕನೊಂದಿಗೆ ಸೀಮಾಳಿಗೆ ಪ್ರೇಮ ಉಂಟಾಯಿತು. ಸೀಮಾ ಮತ್ತು ಪತಿ ಗುಲಾಮ ಹೈದರ್ ಬಹಳ ಕಾಲದಿಂದ ಪರಸ್ಪರ ದೂರವಾಗಿದ್ದು ಇದರ ನಂತರ ಸಚಿನ್‍ನೊಂದಿಗೆ ಜೀವನ ನಡೆಸಲು ಸೀಮಾ ಭಾರತಕ್ಕೆ ಬಂದಿದ್ದಳು. ಸೀಮಾ ತನ್ನ ಜೊತೆ ತನ್ನ ನಾಲ್ವರು ಮಕ್ಕಳನ್ನೂ ನೇಪಾಳ ಮಾರ್ಗವಾಗಿ ಭಾರತಕ್ಕೆ ಕರೆ ತಂದಿದ್ದಾಳೆ.
ಈಕೆಯ ಪತಿ ಗುಲಾಂ ಹೈದರ್ ಎಂಬಾತ ಸೌದಿ ಅರೇಬಿಯಲದಲ್ಲಿ ಉದ್ಯೋಗ ಮಾಡುತ್ತಿದ್ದು ತನ್ನ ಪತ್ನಿ ಮಕ್ಕಳನ್ನು ಸುರಕ್ಷಿತವಾಗಿ ಪಾಕಿಸ್ತಾನಕ್ಕೆ ಕಳುಹಿಸಬೇಕೆಂದು ವೀಡಿಯೊ ಸಂದೇಶದ ಮೂಲಕ ಆಗ್ರಹಿಸಿದ್ದಾನೆ. ಪ್ರಧಾನಿ ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕೆಂದು ಆತ ಆಗ್ರಹಿಸಿದ್ದಾನೆ.












