ಯುಸಿಸಿ: ರಾಷ್ಟ್ರೀಯ ಕಾನೂನು ಆಯೋಗಕ್ಕೆ ಜಮಾಅತೆ ಇಸ್ಲಾಮೀ ಹಿಂದ್ ಬರೆದ ಪತ್ರದ ಪೂರ್ಣ ಪಾಠ

0
592

ಸನ್ಮಾರ್ಗ ವಾರ್ತೆ

ಕನ್ನಡಕ್ಕೆ: ಮುಹಮ್ಮದ್ ಮರಕಡ

ಆಧ್ಯಾತ್ಮಿಕತೆ, ಸರ್ವಧರ್ಮ ತಿಳುವಳಿಕೆ, ಸಂಶೋಧನೆ ಮತ್ತು ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿ, ಶಿಕ್ಷಣ, ಮೌಲ್ಯಾಧಾರಿತ ರಾಜಕೀಯ,  ನ್ಯಾಯ ಆಧಾರಿತ ಆರ್ಥಿಕತೆ ಇತ್ಯಾದಿಗಳೂ ಸೇರಿದಂತೆ ವ್ಯಾಪಕವಾದ ಆಸಕ್ತಿಗಳನ್ನು ಹೊಂದಿರುವ ಪ್ಯಾನ್-ಇಂಡಿಯಾ ಸಾಮಾಜಿಕ- ಧಾರ್ಮಿಕ ಸಂಘಟನೆಯಾದ ಜಮಾಅತೆ ಇಸ್ಲಾಮೀ ಹಿಂದ್ ಪರವಾಗಿ ನಾನು ನಿಮಗೆ ಈ ಪತ್ರ ಬರೆಯುತ್ತಿದ್ದೇನೆ.

ಏಕರೂಪ ನಾಗರಿಕ ಸಂಹಿತೆಯ ಪರಿಕಲ್ಪನೆಯ ಕುರಿತು ಸಾರ್ವಜನಿಕ ಅಭಿಪ್ರಾಯಗಳನ್ನು ಕೋರುವ 14 ಜೂನ್ 2023ರ ನಿಮ್ಮ  ಸಾರ್ವಜನಿಕ ಪ್ರಕಟಣೆಗೆ ಇದು ಪ್ರತಿಕ್ರಿಯೆಯಾಗಿದೆ.

ನಿಮ್ಮ ಸೂಚನೆಯಲ್ಲಿ ಒಪ್ಪಿಕೊಂಡಿರುವಂತೆ 21ನೇ ಕಾನೂನು ಆಯೋಗವು 2016 ಮತ್ತು 2018ರ ನಡುವೆ ಇದೇ ರೀತಿಯ ಪ್ರಯತ್ನವನ್ನು ನಡೆಸಿದೆ. ಅದರ ನಂತರ ಅದು ವಿವರವಾದ ವರದಿಯನ್ನೂ ಹೊರತಂದಿದೆ. ಮಾತ್ರವಲ್ಲ, ಏಕರೂಪ ನಾಗರಿಕ  ಸಂಹಿತೆಯ (UCC) ಜಾರಿಯು “ಅಗತ್ಯವೂ ಅಲ್ಲ ಅಥವಾ ಅಪೇಕ್ಷಣೀಯವೂ ಅಲ್ಲ ಎಂದು ಅದು ಹೇಳಿದೆ. (ಕುಟುಂಬ ಕಾನೂನು ಸುಧಾರಣೆಯ ಕುರಿತಾದ ಸಮಾಲೋಚನಾ ಪತ್ರಿಕೆ, ಭಾರತದ ಕಾನೂನು ಆಯೋಗ, 31 ಆಗಸ್ಟ್ 2018.)

ಆದ್ದರಿಂದ, ಹಿಂದಿನ ಕಾನೂನು ಆಯೋಗವು ಸಿದ್ಧಪಡಿಸಿದ ವರದಿಯನ್ನು ಕಡೆಗಣಿಸುವ ರೀತಿಯಲ್ಲಿ ಹೊಸ ಕಸರತ್ತು  ನಡೆಸುತ್ತಿರುವುದು ನಮಗೆ ಆಶ್ಚರ್ಯವನ್ನುಂಟು ಮಾಡಿದೆ. ಅಲ್ಲದೇ, ಲೋಕಸಭಾ ಚುನಾವಣೆಗೆ ಒಂದು ವರ್ಷಕ್ಕಿಂತ ಕಡಿಮೆ ಸಮಯ ಬಾಕಿಯಿರುವಾಗ ಈ ಯುಸಿಸಿ ಪ್ರಯತ್ನವು ರಾಜಕೀಯ ವಿವಾದವನ್ನು ಉಂಟು ಮಾಡುವುದು ಖಚಿತವಾಗಿದೆ. ಕಾನೂನು ಆಯೋಗದ  ನಡೆ ಮತ್ತು ಕೆಲವು ರಾಜಕೀಯ ನಟ ಭಯಂಕರರು ಅದನ್ನು ಧ್ರುವೀಕರಣಕ್ಕೆ ದೊಣ್ಣೆಯಂತೆ ಬಳಸುತ್ತಿರುವ ಬಗ್ಗೆಯೂ ನಿಮ್ಮ ಗಮನ ಸೆಳೆಯುತ್ತಿದ್ದೇನೆ. ಆದ್ದರಿಂದ ಯುಸಿಸಿ ಕುರಿತಾದ ಯಾವುದೇ ಗಂಭೀರ ಚರ್ಚೆಯನ್ನು ಸೂಕ್ಷ್ಮತೆ ಮತ್ತು ಕಾಳಜಿಯೊಂದಿಗೆ  ಕೈಗೊಳ್ಳುವ ಅಗತ್ಯವಿದೆ.

ಅಲ್ಲದೆ, ‘ಏಕರೂಪ ನಾಗರಿಕ ಸಂಹಿತೆ’ಯ ನಿಖರವಾದ ಅರ್ಥವು ಅಸ್ಪಷ್ಟವಾಗಿದೆ. ಮದುವೆ, ವಿಚ್ಛೇದನ, ಉತ್ತರಾಧಿಕಾರ, ಮುಂತಾದ  ವಿಷಯಗಳ ಎಲ್ಲಾ ಧಾರ್ಮಿಕ ಮತ್ತು ಸಾಂಪ್ರದಾಯಿಕ ಕಾನೂನುಗಳನ್ನು ಬದಿಗೊತ್ತಿ ಈ ಹೊಸ ಕಾನೂನನ್ನು ಹೇರಲಾಗುತ್ತಿರುವ  ಹಾಗಿದೆ. ಇದು ಸಂವಿಧಾನದ ರಚನಾಕಾರರು 44ನೇ ವಿಧಿಯಲ್ಲಿ ಕಲ್ಪಿಸಿದ ಅಂಶಗಳಿಗೆ ಪೂರಕವಾಗಿದೆ ಎಂದು ಅನಿಸುವುದಿಲ್ಲ.  ಸಂವಿಧಾನದ 44ನೇ ವಿಧಿಯು “ಪ್ರಜೆಗಳಿಗೆ ಏಕ ರೂಪದ ನಾಗರಿಕ ಸಂಹಿತೆಯನ್ನು ಭದ್ರಪಡಿಸಲು ಪ್ರಯತ್ನಿಸುತ್ತದೆ” ಎಂದು ಮಾತ್ರ  ಹೇಳುತ್ತದೆ. ಆದಾಗ್ಯೂ, ಇದು ಕಡ್ಡಾಯವೋ ಅಥವಾ ಸ್ವಯಂ ಪ್ರೇರಿತವೋ? ಎಂಬುದನ್ನು ಸ್ಪಷ್ಟಪಡಿಸುವ ವಿಷಯದಲ್ಲಿ ಸಂವಿಧಾನದಲ್ಲಿ ಮೌನ ಕಾಣುತ್ತದೆ.

ಸಂವಿಧಾನದ ಪ್ರಸ್ತಾಪವು ಹಿಂದೂ ಅವಿಭಜಿತ ಕುಟುಂಬವನ್ನು ನಿಯಂತ್ರಿಸುವ ನಾಗರಿಕ ಮತ್ತು ತೆರಿಗೆ ಕಾನೂನುಗಳಂತಹ ಎಲ್ಲಾ ಚಾಲ್ತಿಯಲ್ಲಿರುವ ಧಾರ್ಮಿಕ ಮತ್ತು ಸಾಂಪ್ರದಾಯಿಕ ಕಾನೂನುಗಳು ಮತ್ತು ಆಚರಣೆಗಳನ್ನು ಇದು ನಿಷೇಧಿಸುತ್ತದೆಯೇ ಅಥವಾ ವಿಶೇಷ ವಿವಾಹಗಳ ಕಾಯಿದೆ 1954ರಂತಹ ಕಾನೂನಿನ ಸ್ವರೂಪದಲ್ಲಿದೆಯೇ ಎಂಬ ಬಗ್ಗೆ ಯಾವುದೇ  ಸ್ಪಷ್ಟತೆಯಿಲ್ಲ.

ಏಕ ರೂಪ ನಾಗರಿಕ ಸಂಹಿತೆಯ ಪ್ರಶ್ನೆಯ ಕುರಿತು ಸಂವಿಧಾನ ಸಭೆಯಲ್ಲಿ ಡಾ| ಅಂಬೇಡ್ಕರ್ ಮಾಡಿದ ಭಾಷಣ ಹೀಗಿದೆ: ಭವಿಷ್ಯದಲ್ಲಿ ತರಲಾಗುವ ಕಾಯ್ದೆಯು ಹೇರಿಕೆಯಾಗಬಾರದು ಮತ್ತು ಯಾರು ಒಪ್ಪುತ್ತಾರೋ ಅವ ರಿಗೆ ಮಾತ್ರ ಅನ್ವಯವಾಗಬೇಕು  ಎಂದಿದ್ದರು. ಆದ್ದರಿಂದ ಆರಂಭಿಕ ಹಂತದಲ್ಲಿ ಯುಸಿಸಿ ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿರಬೇಕು.

ಏಕರೂಪದ ಕಲ್ಪನೆಯು ಭಾರತದ ವೈವಿಧ್ಯಮಯ ಮತ್ತು ಬಹುತ್ವದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಗೆ  ವಿರುದ್ಧವಾಗಿದೆ. ಹಾಗೆಯೇ `ವೈವಿಧ್ಯತೆಯಲ್ಲಿ ಏಕತೆ’ ಎಂಬ ಸಾಂವಿಧಾನಿಕ ನೀತಿಗೆ ವಿರುದ್ಧ ವಾಗಿದೆ ಎಂದೂ ಅವರು ಹೇಳಿದ್ದರು. (ಸಂವಿಧಾನ ಸಭೆಯ ಚರ್ಚೆಗಳು, ಸಂಪುಟ VII, 3 ಡಿಸೆಂಬರ್ 1948 ಪು. 1979)

ಭಾರತವು ಬಹುಧರ್ಮಿಯ ಮತ್ತು ಬಹು-ಸಂಸ್ಕೃತಿಯ ಸಮಾಜವಾಗಿದೆ. ಇಲ್ಲಿ ವಿವಿಧ ಸಮುದಾಯಗಳು ವೈವಿಧ್ಯಮಯ ಧಾರ್ಮಿಕ  ನಂಬಿಕೆಗಳು, ಪದ್ಧತಿಗಳು ಮತ್ತು ಆಚರಣೆಗಳನ್ನು ಅನುಸರಿಸುತ್ತವೆ. ಹಾಗೂ ಅವರದೇ ವೈಯುಕ್ತಿಕ ಕಾನೂನುಗಳನ್ನು ಪಾಲಿಸುತ್ತವೆ. ಇದು ಹಿಂದೂಗಳು, ಮುಸ್ಲಿಮರು, ಸಿಖ್ಖರು, ಕ್ರಿಶ್ಚಿಯನ್ನರು, ಬೌದ್ಧರು ಮುಂತಾದ ಪ್ರಮುಖ ಧಾರ್ಮಿಕ ಗುಂಪುಗಳಿಗೆ  ಸೀಮಿತವಾದುದಲ್ಲ. ಹಲವಾರು ಸ್ಥಳೀಯ, ಬುಡಕಟ್ಟು ಮತ್ತು ಸಮುದಾಯಗಳೂ ಹೆಚ್ಚಿನ ರಾಜ್ಯಗಳಲ್ಲಿ ಹರಡಿ ಕೊಂಡಿವೆ. ಮತ್ತು ಇನ್ನು ಕೆಲವು ಸಮುದಾಯಗಳು ಸಣ್ಣ ಪ್ರದೇಶಕ್ಕೆ ಸೀಮಿತವಾಗಿವೆ. ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನವನ್ನು ನಿಯಂತ್ರಿಸುವ ತಮ್ಮದೇ  ಆದ ಕಾನೂನುಗಳು, ಪದ್ಧತಿಗಳು ಮತ್ತು ಆಚರಣೆಗಳನ್ನು ಹೊಂದಿದ್ದಾರೆ. ಇವುಗಳಲ್ಲಿ ಕೆಲವರಿಗೆ ಸಂವಿಧಾನದ ವಿವಿಧ ವಿಧಿಗಳ  ಅಡಿಯಲ್ಲಿ ಸಾಂವಿಧಾನಿಕ ರಕ್ಷಣೆಯನ್ನು ನೀಡಲಾಗಿದೆ.

ಈ ವೈವಿಧ್ಯಮಯ ಧಾರ್ಮಿಕ ಮತ್ತು ಸಾಂಪ್ರದಾಯಿಕ ಕಾನೂನುಗಳನ್ನು  ಹೊರಗಿಡುವ ಅಥವಾ ಅತಿಕ್ರಮಿಸುವ ಏಕರೂಪ ನಾಗರಿಕ ಸಂಹಿತೆಯ ಕಲ್ಪನೆಯು ಸ್ಪಷ್ಟವಾಗಿ ನಮ್ಮ ಸ್ಥಾಪಿತ ಕಾನೂನು ಸಂಪ್ರದಾಯಕ್ಕೆ  ವಿರುದ್ಧವಾಗಿದೆ ಮತ್ತು ಸಾಮಾಜಿಕ ಸೌಹಾರ್ದತೆ ಮತ್ತು ಸಾಮರಸ್ಯಕ್ಕೆ ಬೆದರಿಕೆಯನ್ನು ಒಡ್ಡುತ್ತದೆ. `ವೈವಿಧ್ಯತೆಯಲ್ಲಿ ಏಕತೆ’ ಎಂಬ  ಪರಿಕಲ್ಪನೆಯು ಎಲ್ಲಾ ಭಿನ್ನತೆಯನ್ನು ಕೊನೆಗೊಳಿಸುವ ಏಕರೂಪತೆಯನ್ನು ಸೂಚಿಸುವುದಿಲ್ಲ.

ವಿವಿಧ ಸಮುದಾಯಗಳ ವೈಯಕ್ತಿಕ ಕಾನೂನುಗಳು ಸಂವಿಧಾನದ ಆರ್ಟಿಕಲ್ 25 (ಧಾರ್ಮಿಕ ಸ್ವಾತಂತ್ರ‍್ಯ) ಮತ್ತು ಆರ್ಟಿಕಲ್ 29ರ  (ಅಲ್ಪಸಂಖ್ಯಾತರ ಹಿತಾಸಕ್ತಿಗಳ ಸಂರಕ್ಷಣೆ) ಅಡಿಯಲ್ಲಿ ಚಾಲ್ತಿಯಲ್ಲಿದೆ. ಮೂಲಭೂತ ಹಕ್ಕುಗಳು ರಾಜ್ಯ ನೀತಿಯ ನಿರ್ದೇಶನ  ತತ್ವಗಳೊಂದಿಗೆ ತುಲನೆ ಮಾಡಿದಾಗ, ಮೂಲಭೂತ ಹಕ್ಕುಗಳು ಮುಖ್ಯವಾಗುತ್ತದೆ. ಏಕೆಂದರೆ ಅವು ಸಂವಿಧಾನದಿಂದ ಸ್ಪಷ್ಟವಾಗಿ  ಖಾತರಿಪಡಿಸಲ್ಪಟ್ಟಿದೆ. ಆದ್ದರಿಂದ, ಆರ್ಟಿಕಲ್ 25 ಅಥವಾ ಆರ್ಟಿಕಲ್ 29ರ ಅಡಿಯಲ್ಲಿ ನಾಗರಿಕನ ಹಕ್ಕುಗಳೊಂದಿಗೆ ಘರ್ಷಿಸಿದರೆ,  ಆರ್ಟಿಕಲ್ 44ರಲ್ಲಿ ಒಳಗೊಂಡಿರುವ ನಿರ್ದೇಶನ ತತ್ವವನ್ನು ಜಾರಿಗೊಳಿಸುವ ಯಾವುದೇ ವಿಧಾನವು ಸಂವಿಧಾನದ ಅಧಿಕಾರವನ್ನು ಮೀರಿದುದಾಗಿರುತ್ತದೆ.

ಮುಸ್ಲಿಂ ವೈಯಕ್ತಿಕ ಕಾನೂನನ್ನು ಮುಸ್ಲಿಮರು ಕಡ್ಡಾಯ ಧಾರ್ಮಿಕ ಆಚರಣೆಯ ಭಾಗವೆಂದು ಪರಿಗಣಿಸುತ್ತಾರೆ. ಮುಸ್ಲಿಂ ವೈಯಕ್ತಿಕ  ಕಾನೂನಿನ ಪ್ರಶ್ನೆಗೆ ಸಂಬಂಧಿಸಿದಂತೆ, ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ಸಂಬಂಧಿತ ವಿಷಯಗಳಲ್ಲಿ ಇಸ್ಲಾಮಿಕ್ ಕಾನೂನಿಗೆ ಬದ್ಧವಾಗಿರುವುದನ್ನು ಮುಸ್ಲಿಮರು ಧಾರ್ಮಿಕ ಬಾಧ್ಯತೆ ಎಂದು ಪರಿಗಣಿಸುತ್ತಾರೆ. ಇದು ಸಂವಿಧಾನದ 25ನೇ ವಿಧಿಯಿಂದ ಅವರಿಗಾಗಿ ರಕ್ಷಿಸಲ್ಪಟ್ಟಿದೆ. ಮುಸ್ಲಿಂ ವೈಯಕ್ತಿಕ ಕಾನೂನಿನ ಮೇಲೆ ಪರಿಣಾಮ ಬೀರುವ ಯಾವುದೇ ಶಾಸನವನ್ನು ಮಾಡುವ ಮೊದಲು, ಈ  ಬಗ್ಗೆ ಗಮನಹರಿಸಬೇಕು.

ಇದಲ್ಲದೆ, ಮುಸ್ಲಿಂ ವೈಯಕ್ತಿಕ ಕಾನೂನಿನ ಅಂಶಗಳನ್ನು ಕ್ರೋಢೀಕರಿಸುವ ಮತ್ತು ತಿದ್ದುಪಡಿ ಮಾಡುವ ಯಾವುದೇ ಕ್ರಮವು ಇಸ್ಲಾಮಿಕ್  ನ್ಯಾಯಶಾಸ್ತ್ರದೊಳಗಿನ ವಿಭಿನ್ನ ಚಿಂತನೆಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಕೆಲವು ಆಯ್ಕೆಗಳನ್ನು ಮಾಡಬೇಕಾಗುತ್ತದೆ, ಒಂದರ  ಮೇಲೊಂದರಂತೆ ಆಯ್ಕೆ ಮಾಡಿಕೊಳ್ಳಬೇಕು. ಇದು ಶಾಸಕಾಂಗಕ್ಕೆ ಸಾಧ್ಯ ಎಂದು ಅನಿಸುತ್ತಿಲ್ಲ. ಇಸ್ಲಾಮಿಕ್ ಕಾನೂನು ತಜ್ಞರ ನಡುವೆ  ಚರ್ಚೆಯಿಂದ ಮಾತ್ರ ಇದನ್ನು ಕೈಗೊಳ್ಳಬಹುದು.

ವೈಯಕ್ತಿಕ ಕಾನೂನಿನ ಉಲ್ಲಂಘನೆ ಅಥವಾ ದುರುಪಯೋಗದ ಒಂಟಿ ಗದ್ದಲ ಸೃಷ್ಟಿಸಲು ಪ್ರಕರಣಗಳನ್ನು ಎತ್ತಿಕೊಂಡು ಮಾಧ್ಯಮಗಳು  ಮತ್ತು ರಾಜಕಾರಣಿಗಳು ಪ್ರಯತ್ನಿಸುತ್ತಿದ್ದಾರೆ. ಇಂತಹ ಸ್ಟೀರಿಯೊಟೈಪ್ಡ್ ಗದ್ದಲಗಳು ಸ್ಪಷ್ಟವಾಗಿ ಪಕ್ಷಪಾತ ಮತ್ತು ರಾಜಕೀಯ  ಪ್ರೇರೇಪಿತವಾಗಿವೆ. ಕಾನೂನಿನ ಉಲ್ಲಂಘನೆ ಅಥವಾ ದುರುಪಯೋಗದ ಯಾವುದೇ ಪ್ರಕರಣಕ್ಕೆ ಸಂಬಂಧಿಸಿ ಮುಸ್ಲಿಂ ಕಾನೂನಿನಲ್ಲಿಯೇ  ಸಾಕಷ್ಟು ನಿಬಂಧನೆಗಳು ಮತ್ತು ಕಾರ್ಯ ವಿಧಾನಗಳು ಇವೆ. ಅಲ್ಲದೇ ನ್ಯಾಯಾಲಯಗಳಿಗೆ ಮಧ್ಯ ಪ್ರವೇಶಿಸಲು ಮತ್ತು ಸಂಬಂಧ ಪಟ್ಟವರಿಗೆ ನ್ಯಾಯವನ್ನು ಒದಗಿಸಲು ಸಾಧ್ಯವಿದೆ. ಸಮಾಜದಲ್ಲಿರುವ ಯಾವುದೇ ಸಾಮಾಜಿಕ ಅನಿಷ್ಟಗಳು ಸಮಾಜದ ಯಾವುದೇ  ಒಂದು ಭಾಗಕ್ಕೆ ಸೀಮಿತವಾಗಿಲ್ಲ ಮತ್ತು ಅಂತಹ ಅನಿಷ್ಟಗಳನ್ನು ಎದುರಿಸುವ ಸರಿಯಾದ ಮಾರ್ಗವೆಂದರೆ ವಿವಿಧ ಸಮುದಾಯಗಳನ್ನು  ವಿಶ್ವಾಸಕ್ಕೆ ಪಡೆದು ಮಾಡಲಾಗುವ ಸುಧಾರಣೆ ಎಂದು ನಾವು ಹೇಳುತ್ತೇವೆ.

ಕಳೆದ ಎರಡು ದಶಕಗಳಲ್ಲಿ, ಭಾರತ ಮತ್ತುಪ್ರಪಂಚದಾದ್ಯಂತದ ಕಾನೂನು ವ್ಯವಸ್ಥೆಯು ನ್ಯಾಯಾಲಯಗಳ ಮೇಲಿನ ಹೊರೆಯನ್ನು  ಕಡಿಮೆ ಮಾಡಲು ಸಂಧಾನ ಮಾರ್ಗಕ್ಕೆ ಹೆಚ್ಚು ಒತ್ತು ನೀಡುತ್ತಿರುವುದನ್ನು ಕಾಣಬಹುದು. ಕಾರ್ಪೊರೇಟ್ ಮತ್ತು ವಾಣಿಜ್ಯ ವಿಷಯಗಳಲ್ಲಿ  ಮಾತ್ರವಲ್ಲದೆ, ಕೌಟುಂಬಿಕ ವ್ಯಾಜ್ಯಗಳಲ್ಲಿಯೂ ನ್ಯಾಯಾಲಯಗಳು ಮಧ್ಯಸ್ಥಿಕೆ ಮತ್ತು ರಾಜಿ ಪ್ರಕ್ರಿಯೆಗಳನ್ನು ಪ್ರೋತ್ಸಾಹಿಸುತ್ತಿದೆ. ಇಂತಹ ಕಾರ್ಯವಿಧಾನಗಳು ಸಾಮಾನ್ಯ ಜನರಿಗೆ ಅತ್ಯಂತ ಉಪಯುಕ್ತವಾಗಿವೆ. ಆದ್ದರಿಂದ ವೈಯಕ್ತಿಕ ನಿಯಮದಲ್ಲಿ ಏಕರೂಪತೆಯನ್ನು ತರುವ  ಉದ್ದೇಶವು ಜನಸಾಮಾನ್ಯರನ್ನು ಕೋರ್ಟು-ಕಚೇರಿಗೆ ಅಲೆಯಿಸುವ ರೀತಿಯದ್ದೇ ಎಂಬ ಸ್ಪಷ್ಟಿಕೆಯ ಅಗತ್ಯವಿದೆ.

ಕೊನೆಯದಾಗಿ, ಭಾರತದ ಅತಿ ದೊಡ್ಡ ಮುಸ್ಲಿಂ ಸಂಘಟನೆಗಳಲ್ಲಿ ಒಂದಾಗಿರುವ ನಾವು ಈ ಹಿಂದಿನ ಕಾನೂನು ಆಯೋಗವು ನೀಡಿರುವ ಅಭಿಪ್ರಾಯವನ್ನು ಎತ್ತಿ ಹಿಡಿಯಬೇಕು ಎಂದು ಈಗಿನ ಕಾನೂನು ಆಯೋಗಕ್ಕೆ ಸಲಹೆ ನೀಡಬಯಸುತ್ತೇನೆ. ಮತ್ತು ವೈಯಕ್ತಿಕ ಕಾನೂನುಗಳಲ್ಲಿ ಮಧ್ಯಪ್ರವೇಶಿಸುವ ಯಾವುದೇ ಪ್ರಯತ್ನಗಳಿಂದ ದೂರವಿರಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ. ಇಂತಹ ಹಸ್ತಕ್ಷೇಪವು ಭಾರತದ ವಿವಿಧತೆಯಲ್ಲಿ ಪಾಲಿಸಬೇಕಾದ ಏಕತೆಗೆ ಹಾನಿಯುಂಟುಮಾಡಬಹುದು.

ಮಲಿಕ್ ಮುಹ್‌ತಸಿಮ್ ಖಾನ್
ಉಪಾಧ್ಯಕ್ಷರು, ಜಮಾಅತೆ ಇಸ್ಲಾಮಿ ಹಿಂದ್