ಅರುಣ್ ಜೈಟ್ಲಿ, ನಿತಿನ್ ಗಡ್ಕರಿ, ಜೋಶಿ, ಅಡ್ವಾಣಿಗೆ ಕೋಟಿ ಕೋಟಿ ಹಂಚಿದ ಯಡಿಯೂರಪ್ಪ: ಕಾರವಾನ್ ಮ್ಯಾಗಝಿನ್, ಕಾಂಗ್ರೆಸ್ ಪತ್ರಿಕಾಗೋಷ್ಠಿ

0
771

ಹೊಸದಿಲ್ಲಿ, ಮಾ. 22: ಕರ್ನಾಟಕ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಬಿಜೆಪಿ ನಾಯಕರಿಗೆ ಬಿ ಎಸ್ ಯಡಿಯೂರಪ್ಪ ಭಾರೀ ಪ್ರಮಾಣದ ಹಣವನ್ನು ನೀಡಿದ್ದಾರೆ ಎಂದು ಕಾರವಾನ್ ಮ್ಯಾಗಝಿನ್‍ನನ್ನು ಉದ್ಧರಿಸಿ ಕಾಂಗ್ರೆಸ್ ಆರೋಪ ಹೊರಿಸಿದೆ. ಸುಮಾರು 1800 ಕೋಟಿ ರೂಪಾಯಿಯನ್ನು ಬಿಜೆಪಿಯ ಹಲವು ನಾಯಕರಿಗೆ ಯಡಿಯೂರಪ್ಪ ಹಂಚಿದ್ದಾರೆನ್ನಲಾಗಿದೆ.
ಯಡಿಯೂರಪ್ಪರ ಡೈರಿಯ ವಿವರಗಳ ಆಧಾರದಲ್ಲಿ ಕಾರವಾನ್ ಮ್ಯಾಗಝಿನ್ ಈ ಭ್ರಷ್ಟಾಚಾರ ಆರೋಪ ಹೊರಿಸಿದೆ. ಈ ಡೈರಿ ವಿವರಗಳು ಈಗ ಆದಾಯ ಇಲಾಖೆಯ ವಶದಲ್ಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ವಕ್ತಾರ ರಣ್‍ದೀಪ್ ಸಿಂಗ್ ಸುರ್ಜೇವಾಲ ತಿಳಿಸಿದರು.

ಅರುಣ್ ಜೈಟ್ಲಿ, ನಿತಿನ್ ಗಡ್ಕರಿಗೆ ತಲಾ 150 ಕೋಟಿ ರೂಪಾಯಿ ಮತ್ತು ರಾಜ್‍ನಾಥ್ ಸಿಂಗ್‍ರಿಗೆ 100 ಕೋಟಿ ರೂಪಾಯಿ ಮತ್ತು ಎಲ್‍ ಕೆ ಅಡ್ವಾಣಿ, ಮುರಳಿ ಮನೋಹರ ಜೋಷಿಗೆ ತಲಾ 50 ಕೋಟಿ ರೂಪಾಯಿಯನ್ನು ಯಡಿಯೂರಪ್ಪ ನೀಡಿದ್ದಾರೆ. 2009 ಜನವರಿ 18ಕ್ಕೆ ಬಿಜೆಪಿ ಕೇಂದ್ರ ಸಮಿತಿಗೆ 1000 ಕೋಟಿ ರೂಪಾಯಿ ಹಸ್ತಾಂತರಿಸಲಾಗಿದೆ ಎಂದು ಯಡಿಯೂರಪ್ಪ ಕೈಬರಹದಲ್ಲಿ ಬರೆದಿದ್ದಾರೆ ಎನ್ನಲಾಗಿದೆ. ಡೈರಿಯ ದಾಖಲೆಗಳು 2017ರಿಂದ ಆದಾಯ ತೆರಿಗೆ ಇಲಾಖೆ ವಶದಲ್ಲಿದ್ದರೂ ಅದು ಕ್ರಮ ಜರಗಿಸಿಲ್ಲ ಎಂಬ ಆರೋಪವೂ ಇದೆ.
ಹೊಸದಾಗಿ ಹೊಣೆವಹಿಸಿದ ಲೋಕಪಾಲ್ ಭ್ರಷ್ಟಾಚಾರ ಆರೋಪ ತನಿಖೆ ನಡೆಸಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿ ಸಹಿತ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ವಕ್ತಾರ ಸುರ್ಜೇವಾಲ ಆಗ್ರಹಿಸಿದ್ದಾರೆ.