ಸನ್ಮಾರ್ಗ ವಾರ್ತೆ
ಗುರುಗ್ರಾಂ, ಆ. 2: ನಮ್ಮಿಂದ ಎಲ್ಲರನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ. ಎರಡು ವಿಭಾಗಗಳ ನಡುವೆ ಸೃಷ್ಟಿಯಾದ ಕೋಮು ಘರ್ಷಣೆಯಲ್ಲಿ ಅವರು ಹೀಗೆ ಪ್ರತಿಕ್ರಿಯಿಸಿದ್ದಾಗಿದೆ.
ಎರಡು ಹೋಂಗಾರ್ಡ್ ಸಹಿತ ಆರು ಮಂದಿ ಹತ್ಯೆಯಾಗಿದ್ದಾರೆ. ಹಲವು ವಾಹನಗಳು, ಅಂಗಡಿಗಳನ್ನು ಕಳೆದ ಎರಡು ದಿವಸಗಳಲ್ಲಿ ಸುಟ್ಟು ಹಾಕಲಾಗಿದೆ. 116 ಮಂದಿಯನ್ನು ಬಂಧಿಸಲಾಗಿದೆ. 190 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಹಿಂಸಾಚಾರದಲ್ಲಿ ಜನರಿಗಾದ ನಷ್ಟವನ್ನು ಗಲಭೆಕೋರರಿಂದ ಭರಿಸುವುದಾಗಿ ಅವರು ಹೇಳಿದರು.
ಶಾಂತಿ ಸೌಹಾರ್ದ ಕಾಪಾಡಲು ಜನರಿಗೆ ಮನವಿ ಮಾಡಿದ ಮುಖ್ಯಮಂತ್ರಿ ಈ ವಿಷಯದಲ್ಲಿ ಪೊಲೀಸರಿಗೂ ಸೈನ್ಯಕ್ಕೂ ಗ್ಯಾರಂಟಿ ಕೊಡಲು ಸಾಧ್ಯವಿಲ್ಲ ಎಂದು ತಿಳಿಸಿದರು. ಜನರು ಶಾಂತಿ ಸೌಹಾರ್ದ ಕಾಪಾಡಬೇಕೆಂದು ಮುಖ್ಯಮಂತ್ರಿ ಮನವಿ ಮಾಡಿದರು. ಕೊಲ್ಲಲ್ಪಟ್ಟ ಹೋಂ ಗಾರ್ಡ್ ಗಳ ಕುಟುಂಬಕ್ಕೆ 57 ಲಕ್ಷ ರೂಪಾಯಿ ನೀಡಲು ಸರಕಾರ ತೀರ್ಮಾನಿಸಿದೆ.
ನೂಹ್ ಜಿಲ್ಲೆಯ ನಂದ್ ಗ್ರಾಮದಲ್ಲಿ ವಿಶ್ವಹಿಂದೂ ಪರಿಷತ್ ಆಯೋಜಿಸಿದ ಬ್ರಿಜ್ಮಂಡಲ್ ಜಾಲಾಭಿಷೇಕ ಯಾತ್ರೆಯು ಘರ್ಷಣೆಗೆ ಕಾರಣವಾಗಿತ್ತು. ಗೋರಕ್ಷಕ ಗೂಂಡಾ ರಾಜಸ್ಥಾನದ ಜುನೈದ್ ನಾಸಿರ್ ಗುಂಪು ಕೊಲೆ ಆರೋಪಿ ಮೋನು ಮಾನೆಸರ್ ಯಾತ್ರೆಯಲ್ಲಿದ್ದ ಎಂದು ವರದಿಗಳಿವೆ.
ಕೆಲವು ದಿವಸಗಳ ಹಿಂದೆ ಯಾತ್ರೆಯಲ್ಲಿ ತಾನು ಭಾಗವಹಿಸುತ್ತೇನೆಂದು ಈತ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸದ್ದ. ರಾಜ್ಯದ ಸೌಹಾರ್ದ ವಾತಾವರಣವನ್ನು ಕೆಡಿಸುತ್ತದೆ ಎಂದು ಒಂದು ಗುಂಪು ಈ ಯಾತ್ರೆಯನ್ನು ವಿರೋಧಿಸಿತ್ತು. ಯಾತ್ರೆಯಲ್ಲಿರುವ ವಾಹನದಲ್ಲಿ ಮಾನೆಸರ್ ಇದ್ದಾನೆ ಎಂದು ಪ್ರಚಾರ ನಡೆದಿದ್ದು ಒಂದು ವಿಭಾಗ ಯಾತ್ರೆ ತಡೆಯಲು ಯತ್ನಿಸಿತು. ನಂತರ ಪರಸ್ಪರ ಕಲ್ಲೆಸೆತ ನಡೆದಿದೆ. ಪೊಲೀಸರ ವಾಹನಗಳ ಸಹಿತ ಹಲವು ವಾಹನಗಳನ್ನು ಸುಟ್ಟು ಹಾಕಲಾಗಿದೆ. ಜನರ ಗುಂಪು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗ ಮಾಡಿದರು. ಗುರುಗಾಂವ್ನ ಸಿವಿಲ್ ಲೈನ್ಸಿನಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಗಾರ್ಗಿ ಕಕ್ಕರ್ ಯಾತ್ರೆಗೆ ಹಸಿರು ನಿಶಾನೆ ತೋರಿಸಿದ್ದರು.












