ಹೊಸದಿಲ್ಲಿ,ಮಾ. 27: ಬಿಜೆಪಿ ವಕ್ತಾರ ಮತ್ತು ಪುರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸಂಬಿತ್ ಪಾತ್ರ ತನ್ನ ರ್ಯಾಲಿಯೊಂದರಲ್ಲಿ ಭಗವಾನ್ ಜಗನ್ನಾಥ ದೇವರ ಪ್ರತಿಮೆಯನ್ನು ತಂದು ಪ್ರಚಾರ ಮಾಡಿದ್ದು, ಕಾಂಗ್ರೆಸ್ ಅವರ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪ ಹೊರಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಕಾಂಗ್ರೆಸ್ ಮುಖ್ಯ ಚುನಾವಣಾ ಅಧಿಕಾರಿಗೆ ದೂರು ನೀಡಿ ಸಂಬಿತ್ ಪಾತ್ರ ರಾಜಕೀಯ ಲಾಭಕ್ಕಾಗಿ ಜಗನ್ನಾಥ ದೇವರ ಮೂರ್ತಿಯನ್ನು ಉಪಯೋಗಿಸಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಆರೋಪ ಹೊರಿಸಿದೆ. ವರದಿಯಾಗಿರುವ ಪ್ರಕಾರ ಚುನಾವಣಾ ಆಯೋಗ ಸಂಬಿತ್ ಪಾತ್ರರಿಗೆ ನೋಟಿಸು ಕಳುಹಿಸಿದೆ. ಈ ಆರೋಪವನ್ನು ಸಂಬಿತ್ ಪಾತ್ರ ನಿರಾಕರಿಸಿದ್ದು, ರ್ಯಾಲಿಯಲ್ಲಿ ಯಾರೋ ಅವರಿಗೆ ಜಗನ್ನಾಥ ದೇವರ ಮೂರ್ತಿ ಉಡುಗೆ ನೀಡಿದ್ದರು ಎಂದು ಹೇಳಿದ್ದಾರೆ. ಇದೇ ವೇಳೆ ಮಂದಿರದ ಸೇವಕರಾದ ದಶಮೋಹಪಾತ್ರರು ಚುನಾವಣಾ ರ್ಯಾಲಿಯಲ್ಲಿ ಜಗನ್ನಾಥ ದೇವರ ಮೂರ್ತಿಯನ್ನು ಕೊಂಡು ಹೋಗುವುದು ಸಂಸ್ಕೃತಿ ಮತ್ತು ಪರಂಪರೆಯ ವಿರುದ್ಧವಾಗಿದೆ. ಅದನ್ನು ವಾರ್ಷಿಕ ರಥೋತ್ಸವದಲ್ಲಿ ಮಾತ್ರ ಕೊಂಡು ಹೋಗಲು ಅವಕಾಶವಿದೆ ಎಂದು ತಿಳಿಸಿದ್ದಾರೆ.













