ಇನ್ನೂ ಕುತೂಹಲದಲ್ಲಿರುವ ವಯನಾಡಿನಿಂದ ರಾಹುಲ್ ಗಾಂಧಿ ಸ್ಪರ್ಧೆ : ವಯನಾಡಿಗೂ, ವಡಗರಕ್ಕೂ ಇನ್ನೂ ಅಭ್ಯರ್ಥಿ ಘೋಷಣೆಯಾಗಿಲ್ಲ

0
1578

ಹೊಸದಿಲ್ಲಿ, ಮಾ.29: ಕಾಂಗ್ರೆಸ್ ಹೊರತಂದ ಹದಿನಾಲ್ಕನೆ ಅಭ್ಯರ್ಥಿಗಳ ಪಟ್ಟಿಯಲ್ಲಿಯೂ ವಯನಾಡ್ ಮತ್ತು ವಡಗರೆಗೆ ಅಭ್ಯಥಿಗಳ ಹೆಸರು ಇಲ್ಲ. ಹಲವರು ಇಲ್ಲಿಂದ ಸ್ಪರ್ಧಿಸಲು ನಾಮಪತ್ರವನ್ನು ಸಲ್ಲಿಸಿದರೂ ಕಾಂಗ್ರೆಸ್ ಇನ್ನೂ ಅಭ್ಯರ್ಥಿ ಯಾರೆನ್ನುವ ಕುತೂಹಲವನ್ನು ಉಳಿಸಿಕೊಂಡಿದೆ. ವಯನಾಡಿನಿಂದ ರಾಹುಲ್ ಗಾಂಧಿ ಸ್ಪರ್ಧಿಸಲಿದ್ದಾರೆ ಎನ್ನುವ ಊಹಾಪೋಹಗಳ ನಡುವೆ ಅಭ್ಯರ್ಥಿ ಆಯ್ಕೆ ಅನಿಶ್ಚಿತತೆ ಮುಂದುವರಿದಿದೆ. ಈವರೆಗೆ 293 ಲೋಕಸಭಾ ಸೀಟಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ವಯನಾಡ್,ವಡಗರದ ಅಭ್ಯರ್ಥಿಗಳು ಇನ್ನೂ ನಿಗದಿಯಾಗಿಲ್ಲ.

ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ವಯನಾಡಿನಿಂದ ಟಿ.ಸಿದ್ದೀಕ್‍ರನ್ನು ಅಭ್ಯರ್ಥಿಯಾಗಿ ಹೆಸರಿಸಿತ್ತು. ಆದರೆ ಟಿ.ಸಿದ್ದೀಕ್ ರಾಹುಲ್ ಸ್ಪರ್ಧಿಸುವುದಾದರೆ ಹಿಂದೆ ಸರಿಯುವೆ ಎಂದು ಘೋಷಿಸಿದ್ದಾರೆ. ತದನಂತರ ವಯನಾಡಿನಿಂದ ರಾಹುಲ್ ಗಾಂಧಿ ಸ್ಪರ್ಧಿಸುವುದಿಲ್ಲ ಎಂಬ ವರದಿಯೂ ಬಂದಿತ್ತು. ರಾಹುಲ್ ಇಲ್ಲಿಂದ ಸ್ಪರ್ಧಿಸುತ್ತಾರೆಂದು ತಾನು ಹೇಳಿಯೇ ಇಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕೇರಳ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ನಿನ್ನೆ ಸ್ಪಷ್ಟಪಡಿಸಿದ್ದರು. ನಂತರ ರಾಹುಲ್ ಸ್ಪರ್ಧೆ ಇಲ್ಲ ಎನ್ನುವ ಮಾತುಗಳು ಕೇರಳದ ರಾಜಕೀಯ ವಲಯದಲ್ಲಿ ಹರಿದಾಡಿತ್ತು. ಆದರೆ ವಯನಾಡ್ ,ವಡಗರೆಗೆ ಅಭ್ಯರ್ಥಿ ಆಯ್ಕೆ ತಡವಾಗುತ್ತಿರುವುದು ರಾಹುಲ್ ಗಾಂಧಿ ಸ್ಪರ್ಧಿಸುವ ಕುರಿತು ಮತ್ತೆ ಕುತೂಹಲ ಕೆರಳಲು ಕಾರಣವಾಗಿದೆ. ಈವರೆಗೆ ರಾಹುಲ್ ತಾನು ಎಲ್ಲಿಂದ ಸ್ಪರ್ಧಿಸುವೆ ಎಂದು ತಿಳಿಸದ್ದು ಕುತೂಹಲ ಇನ್ನಷ್ಟು ಹೆಚ್ಚಲು ಕಾರಣವಾಯಿತು. ವಯನಾಡಿನಿಂದ ರಾಹುಲ್ ಸ್ಪರ್ಧೆಯ ಕುರಿತು ಇಂದು ನಡೆದ ಚುನಾವಣಾ ಸಮಿತಿ ಸಭೆಯಲ್ಲಿಯೂ ಅಂತಿಮಗೊಂಡಿಲ್ಲ ಎಂದು ವರದಿ ತಿಳಿಸಿದೆ. ಚುನಾವಣಾ ಸಮಿತಿ ಸಭೆಯಲ್ಲಿ ಎಕೆ ಆಂಟನಿ, ಕೆ.ಸಿ ವೇಣು ಗೋಪಾಲ್, ವಿ.ಡಿ. ಸತೀಶನ್ ಭಾಗವಹಿಸಿದ್ದರು.