ಸನ್ಮಾರ್ಗ ವಾರ್ತೆ
ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ದಾಳಿ ಮುಂದುವರಿಸಿದೆ. ಈ ಮಧ್ಯೆ, ಗಾಜಾದಲ್ಲಿರುವ ಪ್ಯಾಲೆಸ್ತೀನಿಯರಿಗೆ ಭಾರತವು ಅಗತ್ಯ ವೈದ್ಯಕೀಯ ನೆರವು ಮತ್ತು ಪರಿಹಾರ ಸಾಮಾಗ್ರಿಗಳನ್ನು ರವಾನಿಸಿದೆ.
“ಅಗತ್ಯ ಔಷಧಿಗಳು, ಶಸ್ತ್ರಚಿಕಿತ್ಸಾ ವಸ್ತುಗಳು, ಟೆಂಟ್ಗಳು, ಮಲಗುವ ಬ್ಯಾಗ್ಗಳು, ಟಾರ್ಪಲಿನ್ಗಳು, ನೈರ್ಮಲ್ಯ ಉಪಕರಣಗಳು ಮತ್ತು ಇತರ ಅಗತ್ಯ ವಸ್ತುಗಳು ಹಾಗೂ ನೀರು ಶುದ್ಧೀಕರಣ ಮಾತ್ರೆಗಳನ್ನು ಗಾಜಾಗೆ ಕಳುಹಿಸಲಾಗಿದೆ” ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.
ಇಸ್ರೇಲ್ ಮೇಲೆ ಹಮಸ್ ದಾಳಿ ಮಾಡಿದ ಬಳಿಕ ಇಸ್ರೇಲಿ ಮಿಲಿಟರಿ ಗಾಜಾದ ಮೇಲೆ ನಿರಂತರ ದಾಳಿ ನಡೆಸಿದೆ. ಗಾಜಾದಲ್ಲಿ ಸಾಕಷ್ಟು ಹಾನಿಯಾಗಿದೆ. ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ಹಲವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಇತ್ತೀಚೆಗೆ ಆಸ್ಪತ್ರೆ, ಚರ್ಚ್ ನ ಮೇಲೆ ಕೂಡಾ ಬಾಂಬ್ ದಾಳಿ ನಡೆದಿದೆ.
ಹೀಗಾಗಿ, ಗಾಜಾದಲ್ಲಿರುವ ಜನರು ಎಲ್ಲಿಗೆ ಹೋಗಬೇಕು. ತಮ್ಮ ಕುಟುಂಬಗಳನ್ನು ಹೇಗೆ ರಕ್ಷಿಸಬೇಕು ಎಂಬುದೇ ತೋಚದೆ ಅಸಹಾಯಕರಾಗಿದ್ದಾರೆ.
ಈ ಮಧ್ಯೆ, ಈಜಿಪ್ಟ್ನಲ್ಲಿ ಶಾಂತಿ ಸಭೆ ನಡೆದಿದ್ದು, ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಅವರು “ಈ ಭಯಾನಕ ದುಃಸ್ವಪ್ನವನ್ನು ಕೊನೆಗೊಳಿಸಬೇಕು” ಎಂದಿದ್ದು, ಸಂಘರ್ಷವನ್ನ ಕೊನೆಗೊಳಿಸುವಂತೆ ಒತ್ತಾಯಿಸಿದ್ದಾರೆ.
ಸಭೆಯ ಬಳಿಕ, ಆಹಾರ, ನೀರು ಮತ್ತು ಔಷಧಿ ಈಜಿಪ್ಟ್ನಿಂದ ಗಾಜಾಗೆ ರವಾನೆಯಾಗಿದೆ. ಇದೀಗ, ಭಾರತವೂ ಅಗತ್ಯ ಸಲಕರಣೆಗಳನ್ನು ಈಜಿಪ್ಟ್ನ ರಫಾ ಗಡಿಯ ಮೂಲಕ ಗಾಜಾಗೆ ರವಾಸುತ್ತಿದೆ.












