13 ವರ್ಷದ ಹುಡುಗಿಯ ಅತ್ಯಾಚಾರ ಯತ್ನ: ಭಾರತ ಮೂಲದ ಪಾದ್ರಿಗೆ ಅಮೆರಿಕದಲ್ಲಿ 6 ವರ್ಷ ಜೈಲು ಶಿಕ್ಷೆ

0
904

ನ್ಯೂಯಾರ್ಕ್,ಮಾ.31: ಹದಿಮೂರು ವರ್ಷ ವಯಸ್ಸಿನ ಹುಡುಗಿಯ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣದಲ್ಲಿ ಭಾರತ ಮೂಲದ ಮಾಜಿ ರೋಮನ್ ಕ್ಯಾಥೊಲಿಕ್ ಪಾದ್ರಿಯೊಬ್ಬರಿಗೆ ಆರು ವರ್ಷ ಜೈಲು ಶಿಕ್ಷೆ ವಿಧಿಸಿ ಅಮೆರಿಕದ ನ್ಯಾಯಾಲಯವೊಂದು ತೀರ್ಪು ನೀಡಿದೆ. ಕಳೆದ ವರ್ಷ ಸೌತ್ ಡೆಕೊಡದ ರಾಪಿಡ್ ಸಿಟಿ ಚರ್ಚಿನಲ್ಲಿ ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿದ್ದಾರೆಂದು ಜಾನ್ ಪ್ರವೀಣ್ ಎಂಬ ಪಾದ್ರಿಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಘಟನೆಯಲ್ಲಿ ಮಾಜಿ ಪಾದ್ರಿ ಜಾನ್ ಪ್ರವೀಣ್(38) ಕ್ಷಮಾಪಣೆ ನಡೆಸಿದ್ದರು. ಇನ್ನೆಂದೂ ಈ ರೀತಿ ಮಾಡುವುದಿಲ್ಲ ಎಂದು ಭರವಸೆಯನ್ನೂ ನೀಡಿದ್ದರು.

ಪ್ರಾಸಿಕ್ಯೂಟರ್ ಒಂದು ವರ್ಷ ಶಿಕ್ಷೆ ನೀಡಬೇಕೆಂದು ಕೋರ್ಟಿನಲ್ಲಿ ವಾದಿಸಿದರು. ಅದು ಅಪರಾಧ ಕೃತ್ಯಕ್ಕೆ ಸರಿಯಾದ ಶಿಕ್ಷೆಯಲ್ಲ ಎಂದು ಹೇಳಿದ ನ್ಯಾಯಾಧೀಶ ಸ್ಟೀವನ್ ಮಾಂಡಲ್ ತಪ್ಪಿತಸ್ಥ ಜಾನ್ ಪ್ರವೀಣ್‍ಗೆ ಆರು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದರು. ಮೂರು ವರ್ಷದ ಬಳಿಕ ಪರೋಲ್ ನೀಡಬೇಕೆಂದು ಕೂಡ ನ್ಯಾಯಾಧೀಶರು ಆದೇಶಿಸಿದ್ದಾರೆ.

ಜಾನ್ ಕ್ಷಮೆಯಾಚಿಸಿದ್ದರಿಂದ ಕಠಿಣ ಶಿಕ್ಷೆಯಿಂದ ಪಾರಾಗಿದ್ದಾರೆ. 16 ವರ್ಷದ ಹುಡುಗಿಯರಿಗಿಂತ ಕೆಳ ವಯೋಮಾನದ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದರೆ ಅಮೆರಿಕದಲ್ಲಿ ಗರಿಷ್ಠ ಹದಿನೈದು ವರ್ಷ ಜೈಲು ಶಿಕ್ಷೆ ಲಭಿಸುತ್ತದೆ. 2017ರಲ್ಲಿ ಜಾನ್ ಪ್ರವೀಣ್ ರಾಪಿಡ್ ಸಿಟಿ ಚರ್ಚ್‍ಗೆ ಸೇರಿದ್ದರು.