48 ವರ್ಷದ ಪ್ರಿಯಾಂಕಾರನ್ನು ಯುವ ಸುಂದರಿ ಎನ್ನುತ್ತಾರೆ- ಕೇರಳ ಬಿಜೆಪಿ ಅಧ್ಯಕ್ಷನಿಂದ ವಿವಾದಾಸ್ಪದ ಹೇಳಿಕೆ

0
1347

ಕಣ್ಣೂರ್,ಎ.2: ಪ್ರಿಯಾಂಕಾ ಗಾಂಧಿಯನ್ನು ಯುವತಿಯೆಂದು ಹೇಳಿ ಕಾಂಗ್ರೆಸ್ ಜನರನ್ನು ವಂಚಿಸುತ್ತಿದೆ ಎಂದು ಕಣ್ಣೂರಿನಲ್ಲಿ ನಡೆದ ಎನ್‍ಡಿಎ ಸಾರ್ವಜನಿಕ ಸಭೆಯಲ್ಲಿ ಕೇರಳ ಬಿಜೆಪಿ ಅಧ್ಯಕ್ಷ ಪಿ.ಎಸ್. ಶ್ರೀಧರನ್ ಪಿಳ್ಳೆ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ. ಪ್ರಿಯಾಂಕಾ ಗಾಂಧಿಗೆ 48 ವರ್ಷ ಆಗಿದೆ. ಅವರನ್ನು ಯುವ ಸುಂದರಿ ಎಂದು ಕರೆಯಲಾಗುತ್ತಿದೆ. ಅಮ್ಮಂದಿರು ಮತ್ತು ಸಹೋದರಿಯರು ಇಲ್ಲಿರುವುದರಿಂದ ಇದಕ್ಕಿಂತ ಹೆಚ್ಚು ಹೇಳುವುದಿಲ್ಲ ಎಂದು ಪಿಳ್ಳೆ ಹೇಳಿದರು.

ರಾಹುಲ್ ಗಾಂಧಿ ವಯನಾಡಿನಿಂದ ಸ್ಪರ್ಧಿಸುವ ವಿಚಾರವನ್ನು ಉತ್ತರಭಾರತದಲ್ಲಿ ಪ್ರಚಾರ ಮಾಡುತ್ತೇವೆ. ಲೋಕಸಭಾ ಕ್ಷೇತ್ರದ ಹೆಸರು ವಯನಾಡ್ ಎಂದಾದರೂ ಮಲಪ್ಪುರಂನ ನಾಲ್ಕು ಕ್ಷೇತ್ರಗಳು ಅದಕ್ಕೆ ಸೇರಿದೆ. ವಯನಾಡಿನಲ್ಲಿ ಅಲ್ಪಸಂಖ್ಯಾತ ಮತದಾರರ ಸಂಖ್ಯೆಯನ್ನು ಪರಿಗಣಿಸಿ ಶ್ರೀಧರನ್ ಪಿಳ್ಳೆ ಈ ಮಾತು ಹೇಳಿದರು.

ಎಡಪಕ್ಷದ ಸಂಚಾಲಕ ಎ. ವಿಜಯರಾಘವನ್ ಆಲತ್ತೂರಿನಿಂದ ಸ್ಪರ್ಧಿಸುತ್ತಿರುವ ಯುಡಿಎಫ್ ಅಭ್ಯರ್ಥಿ ರಮ್ಯಾ ಹರಿದಾಸ್ ವಿರುದ್ಧ ಮಹಿಳಾ ವಿರೋಧಿ ಹೇಳಿಕೆ ನೀಡಿದ್ದರು. ಈಗ ಬಿಜೆಪಿ ರಾಜ್ಯ ಅಧ್ಯಕ್ಷರು ಕೂಡ ಮಹಿಳಾ ವಿರೋಧಿ ಹೇಳಿಕೆ ನೀಡಿದ್ದಾರೆ.