ಹೊಸದಿಲ್ಲಿ,ಎ.4: ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಸಿನೆಮಾ ಬಿಡುಗಡೆಯನ್ನು ತಡೆಹಿಡಿಯುವಂತೆ ಆಗ್ರಹಿಸಿ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯ ವಿಚಾರಣೆಯನ್ನು ಎಪ್ರಿಲ್ ಎಂಟರಂದು ಕೈಗೆತ್ತಿಕೊಳ್ಳಲಾಗುವುದು ಎಂದು ಕೋರ್ಟು ತಿಳಿಸಿತು. ಹಿರಿಯ ಕಾಂಗ್ರೆಸ್ ನಾಯಕ ಹಾಗೂ ವಕೀಲರಾದ ಮನು ಅಭೀಶೇಕ್ ಸಿಂಘ್ವಿ ಈ ವಿಷಯವನ್ನು ಕೋರ್ಟಿನ ಗಮನಕ್ಕೆ ತಂದಿದ್ದು ಅರ್ಜಿಯನ್ನು ತುರ್ತಾಗಿ ಪರಿಗಣಿಸಬೇಕೆಂದು ಕೋರ್ಟಿಗೆ ಮನವಿ ಮಾಡಿದ್ದಾರೆ. ಸಿನೆಮಾಕ್ಕೆ ಈವರೆಗೆ ಸೆನ್ಸಾರ್ ಮಂಡಳಿ ಸರ್ಟಿಫಿಕೆಟ್ ನೀಡಿಲ್ಲ. ಆದ್ದರಿಂದ ಸಿನೆಮಾ ಬಿಡುಗಡೆ ತಡೆವಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ಒಮಂಗ್ ಕುಮಾರ್ ನಿರ್ದೇಶನದ ಸಿನೆಮಾವನ್ನು ಶುಕ್ರವಾರ ಪ್ರದರ್ಶನಕ್ಕೆ ಬಿಡುಗಡೆಗೊಳಿಸುವ ಯೋಜನೆಯಿದೆ. ಆದರೆ ಈ ತಿಂಗಳು 12ಕ್ಕೆ ಬಿಡುಗಡೆಗೊಳಿಸಲು ಸಿನೆಮಾ ನಿರ್ಮಾಪಕರು ಯತ್ನ ನಡೆಸುತ್ತಿದ್ದಾರೆ. ಸಿನೆಮಾಕ್ಕೆ ಸರ್ಟಿಫಿಕೆಟ್ ಪಡೆಯುವ ಪ್ರಕ್ರಿಯೆ ಈಗ ಮುಂದುವರಿಯುತ್ತಿದೆ ಎಂದು ನಿರ್ಮಾಪಕರ ವಕೀಲ ಹಿತೇಶ್ ಜೈನ್ ಹೇಳಿದರು.
ವಿವೇಕ್ ಒಬೆರಾಯ್ ಸಿನೆಮಾದಲ್ಲಿ ನರೇಂದ್ರ ಮೋದಿ ಪಾತ್ರವನ್ನು ನಿರ್ವಹಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಪೂರಕವಾದ ವಾತಾವರಣ ಹುಟ್ಟುಹಾಕುವ ಉದ್ದೇಶದಿಂದ ಸಿನೆಮಾ ಬಿಡುಗಡೆಗೊಳಿಸಲಾಗುತ್ತಿದೆ. ಆದ್ದರಿಂದ ಅದರ ಬಿಡುಗಡೆಯನ್ನು ತಡೆಹಿಡಿಯಬೇಕೆಂದು ಈಗಾಗಲೇ ಪ್ರತಿಪಕ್ಷಗಳು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಸಿನೆಮಾವನ್ನು ಬಿಡುಗಡೆಯಾಗದಂತೆ ತಡೆಯಬೇಕೆಂದು ಮುಂಬೈ, ದಿಲ್ಲಿ ಹೈಕೋರ್ಟಿಗಳಲ್ಲಿ ಸಲ್ಲಿಸಿದ್ದ ಅರ್ಜಿಗಳು ತಿರಸ್ಕೃತವಾಗಿದೆ. ಸಿನೆಮಾಕ್ಕೂ ಬಿಜೆಪಿಗೂ ಸಂಬಂಧ ಇಲ್ಲ ಎಂದು ಸಿನೆಮಾ ನಿರ್ಮಾಪಕರು ಚುನಾವಣಾ ಆಯೋಗದ ನೋಟಿಸಿಗೆ ಉತ್ತರಿಸಿದ್ದಾರೆ.












