ಸನ್ಮಾರ್ಗ ವಾರ್ತೆ
ಮಂಗಳೂರು, ಡಿ. 29: ಅದಾನಿ ಗ್ರೂಪ್ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿಯಂತ್ರಣ ಹೊಂದಿದ್ದು ಇಮೇಲ್ ಮೂಲಕ ಬಾಂಬು ಬೆದರಿಕೆಯೊಂದು ಈ ವಿಮಾನ ನಿಲ್ದಾಣಕ್ಕೆ ಬಂದಿದೆ ಎಂದು ವರದಿಯಾಗಿದೆ.
ಮಂಗಳವಾರ ರಾತ್ರೆ 11:59ಕ್ಕೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಈ ಕುರಿತು ವಿಮಾನ ನಿಲ್ದಾಣದ ಅಧಿಕಾರಿಗಳು ಬಜಪೆಯ ಪೊಲೀಸರಿಗೆ ದೂರು ನೀಡಿದ್ದಾರೆ. ಬುಧವಾರ ಬೆಳಗ್ಗೆ 11.20ಕ್ಕೆ ಅಧಿಕಾರಿಗಳು ಇ-ಮೇಲ್ ನೋಡಿದ್ದೆಂದು ತಿಳಿಸಿದ್ದಾರೆ.
ನಿಮ್ಮ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಅಡಗಿಸಿಟ್ಟಿದ್ದೇವೆ. ಗಂಟೆಗಳೊಳಗೆ ಅದು ಸ್ಫೋಟಿಸುತ್ತದೆ. ನಾನು ನಿಮ್ಮೆಲ್ಲರನ್ನು ಕೊಲ್ಲುವೆ ನಾವು ಫನ್ನಿಂಗ್ ಎಂಬ ಭಯೋತ್ಪಾದಕ ತಂಡದವ ಎಂದು ಇ-ಮೇಲ್ ನಲ್ಲಿ ನಮೂದಿಸಲಾಗಿದೆ.
ನಂತರ ವಿಮಾನ ನಿಲ್ದಾಣದ ಹೊರಗೆ ಸುರಕ್ಷೆಯನ್ನು ಬಲಿಷ್ಠಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಬಜಪೆ ಪೊಲೀಸರು ಕೇಸು ದಾಖಲಿಸಿ ತನಿಖೆ ಶುರು ಮಾಡಿದ್ದಾರೆ.












