ವಿಜಯವಾಡ,ಎ.6: ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್-ವೈಎಸ್ಸಾರ್ ಕಾಂಗ್ರೆಸ್ ನಡುವೆ ಸಖ್ಯ ಸಾಧ್ಯತೆ ತೆರೆದುಕೊಂಡಿದ್ದು ಆಂಧ್ರ ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆಗೆ ವೈಎಸ್ಸಾರ್ ಕಾಂಗ್ರೆಸ್ ಅಧ್ಯಕ್ಷ ಜಗ್ಮೋಹನ್ ರೆಡ್ಡಿ ಕಾರಣರಾಗಿದ್ದಾರೆ. ನ್ಯೂಸ್ 18 ಚ್ಯಾನೆಲ್ಗೆ ನೀಡಿದ ಸಂದರ್ಶನದಲ್ಲಿ ಅವರು ತಾನು ಕಾಂಗ್ರೆಸ್ಸನ್ನು ಕ್ಷಮಿಸಿದ್ದೇನೆ. ಅವರೊಡನೆ ಈಗ ವೈಮನಸ್ಸಿಲ್ಲ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ಸಿನ ಎರಡನೆ ತಲೆಮಾರಿನ ನಾಯಕರಾದ ರಾಹುಲ್ ಗಾಂಧಿ,ಪ್ರಿಯಾಂಕಾ ಗಾಂಧಿಯವರ ಕುರಿತು ನಿಮ್ಮ ನಿಲುವು ಏನೆಂದು ಕೇಳಿದಾಗ ಈ ರೀತಿ ಅವರು ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ಮತ್ತು ಆ ಪಾರ್ಟಿಯ ವ್ಯಕ್ತಿಗಳ ಕುರಿತು ನನಗೆ ಯಾವುದೇ ವೈಮನಸ್ಸಿಲ್ಲ. ತನ್ನ ಈಗಿನ ಗಮನವೆಲ್ಲ ರಾಜ್ಯದ ವಿಶೇಷ ಸ್ಥಾನಮಾನ ಗಳಿಕೆಯತ್ತ ನೆಟ್ಟಿದೆ ಎಂದು ಜಗ್ಮೋಹನ್ ಹೇಳಿದರು.
ಮೋದಿ ಸರಕಾರ ಕೆಲವು ಕೆಲಸಗಳನ್ನು ಮಾಡಿದೆ ನಿಜ. ಆದರೆ ಅವರು ಆಂಧ್ರಕ್ಕಾಗಿ ಏನನ್ನೂ ಕೊಟ್ಟಿಲ್ಲ ಎಂದು ಜಗ್ಮೋಹನ್ ಆರೋಪಿಸಿದರು. ಕಾಂಗ್ರೆಸ್ ನಾಯಕ ಹಾಗೂ ಆಂಧ್ರ ಪ್ರದೇಶ ಮುಖ್ಯಮಂತ್ರಿಯಾಗಿದ್ದ ವೈಎಸ್ ರಾಜಶೇಖರ ರೆಡ್ಡಿ ನಿಧನರಾದ ತರುವಾಯ ಅವರ ಪುತ್ರ ಜಗ್ಮೋಹನ್ರನ್ನು ಮುಖ್ಯಮಂತ್ರಿಯಾಗಬೇಕೆನ್ನುವ ಬೇಡಿಕೆ ಕೇಳಿ ಬಂದಿತ್ತು. ಆದರೆ, ಕಾಂಗ್ರೆಸ್ ನಾಯಕರು ಹಿರಿಯ ನಾಯಕ ರೋಸಯ್ಯರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿತ್ತು.
ಈ ಬೆಳವಣಿಗೆಯ ನಂತರ ಮುನಿಸಿಕೊಂಡಿದ್ದ ಜಗ್ಮೋಹನ್ ರೆಡ್ಡಿ ಕಾಂಗ್ರೆಸ್ ತೊರೆದು ವೈಎಸ್ಸಾರ್ ಕಾಂಗ್ರೆಸ್ ಸ್ಥಾಪಿಸಿದ್ದರು. ಈಗ ಎರಡು ಪಾರ್ಟಿಗಳು ಒಟ್ಟುಗೂಡಿದರೆ ಆಂಧ್ರದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಿದೆ ಎಂದು ಮೂಲಗಳು ಹೇಳಿವೆ.












